ಚಂದಿರನ ಮೇಲೊಂದು ಪುಟ್ಟ ಮನೆ

ಚಂದಿರನ ಮೇಲೆ ಒಂದು ಪುಟ್ಟ ಮನೆಯನ್ನು ನಿರ್ಮಾಣ ಮಾಡಿ ಮುಂದಿನ ಬಾಹ್ಯಾಕಾಶ ಶೋಧನೆಗೆ ಅದನ್ನು ಹೊರಗಿನ ಠಾಣೆ (ಔಟ್ ಪೋಸ್ಟ್)ನಂತೆ ಬಳಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಉದ್ದೇಶಿಸಿದೆ.

  • ಚಂದಿರನ ಮೇಲ್ಮೈಯಲ್ಲಿ ಇಗ್ಲೊ ಮಾದರಿಯ ಪುಟ್ಟ ಮನೆ ನಿರ್ಮಾಣ ಮಾಡಲು ಇಸ್ರೋ ಮುಂದಾಗಿದೆ.
  • ಚಂದ್ರನಲ್ಲಿ ಶಾಶ್ವತ ವಾಸದ ನೆಲೆ ಸ್ಥಾಪಿಸಿ ಅಲ್ಲಿಂದ ಗಗನಯಾನಿಗಳು ಬಾಹ್ಯಾಕಾಶ ಶೋಧನೆ ನಡೆಸುವುದು ಇದರ ಗುರಿ.
  • ಭೂಮಿಗೆ ಹತ್ತಿರವಿರುವ ಮತ್ತು ಭೂಮಿಗಿಂತ ಅತಿ ಕಡಿಮೆ ಗುರುತ್ವಾಕರ್ಷಣೆ ಹೊಂದಿರುವ ಚಂದ್ರನಲ್ಲಿಯ ಶಾಶ್ವತ  ನೆಲೆಯನ್ನು ವೈಜ್ಞಾನಿಕ ಪ್ರಯೋಗಾಲಯವನ್ನಾಗಿ ಬಳಸಿಕೊಳ್ಳುವುದು ಹೆಚ್ಚು ಉಪಯುಕ್ತ ಎಂದು ಇಸ್ರೋ ಸೇರಿದಂತೆ ಪ್ರಮುಖ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಭಾವಿಸಿವೆ.
  • ಇದರಿಂದ ಇಂತಹ ಶೋಧನೆಗಳಿಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಅವಲಂಬನೆ ತಪ್ಪುತ್ತದೆ.

ಇದೇನು ಹೊಸ ಚಿಂತನೆ ಅಲ್ಲ. ಅಮೆರಿಕಾದ ನಾಸಾ, ಇಎಸ್‌ಎ ಸೇರಿದಂತೆ ಇತರೆ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಈ ಕುರಿತಂತೆ ಸಾಕಷ್ಟು ಸಿದ್ಧತೆಯಲ್ಲಿ ತೊಡಗಿವೆ.

ಈಗ ಬಾಹ್ಯಾಕಾಶ ಶೋಧನೆಗೆ ಅಂತರ್ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಗಳನ್ನು ಬಳಸಿಕೊಳ್ಳುತ್ತಿದ್ದು, ಮುಂದೆ ಅವುಗಳಿಗೆ ಬದಲಾಗಿ ಚಂದಿರನಲ್ಲಿಯೇ ಸ್ಥಿರವಾದ ವಾಸದ ನೆಲೆಯನ್ನು ಹೊಂದುವುದು ಹೆಚ್ಚು ಸುರಕ್ಷಿತ ಮತ್ತು ಹೆಚ್ಚು ಉಪಯುಕ್ತ ಎಂದು ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಭಾವಿಸಿದೆ. ಚಂದ್ರನಲ್ಲಿ ಶಾಶ್ವತವಾಗಿ ಒಂದು ಪುಟ್ಟ ನೆಲೆ ಸ್ಥಾಪಿಸಿಕೊಳ್ಳುವುದರಿಂದ ಅದು ಚಂದ್ರನ ಶೋಧನೆಗೆ ಹೆಚ್ಚು ಅನುಕೂಲವಾಗುವುದರ ಜೊತೆಗೆ ಮುಂದೆ ಅಲ್ಲಿಗೆ ಶೋಧನೆಗೆಂದು ತೆರಳುವ ಗಗನಯಾನಿಗಳಿಗೂ ಇದು ಸುರಕ್ಷಿತ ನೆಲೆಯಾಗುತ್ತದೆ.

ರೊಬೊಟ್ ಮತ್ತು ೩ಡಿ ಪ್ರಿಂಟರ್‌ಗಳನ್ನು ರಾಕೇಟ್ ಮೂಲಕ ಚಂದ್ರನಲ್ಲಿ ಕಳುಹಿಸುವುದು ಇವು ಅಲ್ಲಿಯ ಮಣ್ಣು ಮತ್ತಿತರೆ ವಸ್ತುಗಳಿಂದ ಪುಟ್ಟ ಮನೆ ನಿರ್ಮಾಣ ಮಾಡುವುದು ಈ ಯೋಜನೆಯ ರೂಪುರೇಷೆ.

ಚಂದಿರ ಭೂಮಿಗೆ ಅತಿ ಉಪಯುಕ್ತ ಮತ್ತು ಹತ್ತಿರದ ಗ್ರಹವಾದ್ದರಿಂದ ಅದರ ಮೇಲ್ಮೈಯಲ್ಲಿ ಒಂದು ಶಾಶ್ವತ ನೆಲೆ (ಪುಟ್ಟ ಮನೆ) ನಿರ್ಮಾಣ ಕಾರ್ಯ ಸುಲಭ ಸಾಧ್ಯ. ಇದು ಚಂದ್ರನ ಶೋಧನೆ, ಜೊತೆಗೆ ಅನ್ಯ ಗ್ರಹಗಳ ಶೋಧನೆಗೆ ಉಪಯುಕ್ತ. ಹಾಗೆಯೇ. ಅಂಟಾರ್ಟಿಕಾ ಶೋಧನಾ ಯೋಜನೆಗಳಿಗೂ ಈ ಪುಟ್ಟಮನೆಯನ್ನು ಹೊರಗಿನ ಶಾಶ್ವತ ನೆಲೆಯನ್ನಾಗಿಸಿಕೊಳ್ಳಬಹುದು.

ಇಗ್ಲೋ ಧೃವ ಪ್ರದೇಶದಲ್ಲಿಯ ಜನರು ವಾಸಿಸಲು ಬಳಸುವ ಒಂದು ರೀತಿಯ ಮಂಜಿನ ಮನೆ. ಆರ್ಟಿಕ್, ಗ್ರೀನ್ ಲ್ಯಾಂಡ್ ಧೃವ ಪ್ರದೇಶಗಳಲ್ಲಿ ವಾಸಿಸುವ ಎಸ್ಕಿಮೋ ಜನರು ಇವನ್ನು ಬಳಸುತ್ತಾರೆ.

ವೇಲ್ ಗಳ ಮೂಳೆ ಮತ್ತು ಇನ್ನಿತರ ವಸ್ತುಗಳಿಂದ ನಿರ್ಮಾಣ ಮಾಡುವ ಈ ಪುಟ್ಟ ಮನೆಗಳ ಹೊರ ಭಾಗವನ್ನು ಸಂಪೂರ್ಣವಾಗಿ ಮಂಜಿನಿಂದ ಮುಚ್ಚುತ್ತಾರೆ.

ಈ ಮಂಜಿನ ಪದರ ಹೊರಗಿನ ಚಳಿಯನ್ನು ಮನೆಯ ಒಳಗಡೆ ಬಿಡದೆ ತಡೆಯುವುದರಿಂದ ಹೊರಗಡೆ ಭಾರೀ ಚಳಿಯಿದ್ದರೂ (ಮೈನಸ್ ೪೫ ಡಿಗ್ರಿ ಸೆ.ಗ್ರೇಡ್) ಒಳಗಡೆ ತುಸು ಬೆಚ್ಚಗೆ (ಮೈನಸ್ ೭ ಡಿಗ್ರಿ ಯಷ್ಟು) ಇರುತ್ತದೆ.

– ಉತ್ತನೂರು ವೆಂಕಟೇಶ್

Leave a Comment