ಚಂಡಮಾರುತಕ್ಕೆ ಸಿಲುಕಿದ್ದ ೧೩ ಮಂದಿ ರಕ್ಷಣೆ

ಮಂಗಳೂರು, ಡಿ.೭- ಓಖಿ ಚಂಡಮಾರುತಕ್ಕೆ ಸಿಲುಕಿ ಪ್ರಾಣಾಪಾಯಕ್ಕೆ ಸಿಲುಕಿದ್ದ ೧೩ ಮಂದಿ ಮೀನುಗಾರರನ್ನು ಕರ್ನಾಟಕ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ. ಬೆಬ್ರಾನ್ ಜಾನ್(೩೨), ಸ್ಟಾಲಿನ್(೨೯), ಆಂಟನಿ(೨೭), ಅಬಿನ್(೨೨), ಆಂಡ್ರೋಸ್(೪೯), ಪ್ರಭು(೩೮), ಮಿರ್ಲಿನ್(೩೫), ಬೆನೆಡಿಟ್(೪೮), ಜೆಲಾಸ್ಟಿನ್(೪೬), ಮಾರ್ಟಿನ್(೩೪), ಅರುಲ್ದಾಸ್(೫೫) ತಡೆಯೂಸ್(೪೬) ಮತ್ತು ಎಂ.ಡಿ.ಅಲಿ(೩೩) ಕೋಸ್ಟ್ ಗಾರ್ಡ್ ಸಿಬ್ಬಂದಿಯಿಂದ ರಕ್ಷಿಸಲ್ಪಟ್ಟವರು. ಈ ಪೈಕಿ ೯ ಮಂದಿ ತಮಿಳುನಾಡಿನವರಾಗಿದ್ದಾರೆ, ಮೂರು ಮಂದಿ ಕೇರಳ ಮತ್ತು ಓರ್ವ ಅಸ್ಸೋಂ ಮೂಲದವ ಎಂದು ತಿಳಿದುಬಂದಿದೆ.

ಕೇರಳದ ಕೊಚ್ಚಿಯಿಂದ ನವೆಂಬರ್ ೭ ರಂದು ಆಳಸಮುದ್ರ ಮೀನುಗಾರಿಕೆಗೆ ಹೊರಟಿದ್ದ ಸ್ಟಾಲಿನ್ ಮಾಲೀಕತ್ವದ ಬರಾಕುಡಾ ಹೆಸರಿನ ಮೀನುಗಾರಿಕಾ ಬೋಟ್ ಡಿ.೨ರಂದು ಲಕ್ಷದ್ವೀಪ ಬಳಿ ಅಪಾಯಕ್ಕೆ ಸಿಲುಕಿತ್ತು. ವೈರ್‌ಲೆಸ್  ವ್ಯವಸ್ಥೆ ಸ್ಥಗಿತಗೊಂಡು ಮೀನುಗಾರರು ಸಂಪರ್ಕವನ್ನೇ ಕಳೆದುಕೊಂಡಿದ್ದರು. ಈ ಬಗ್ಗೆ ತಮಗೆ ಮಾಹಿತಿ ದೊರೆತ ತಕ್ಷಣ ಕಾರ್ಯಪ್ರವೃತ್ತರಾಗಿ ಅಪಾಯದಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಿದ್ದೇವೆ ಎಂದು ಕರ್ನಾಟಕ ಕೋಸ್ಟ್ ಗಾರ್ಡ್ ಕಮಾಂಡರ್ ಎಸ್.ಎಸ್. ದಸೀಲಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬುಧವಾರ ಬೆಳಗ್ಗೆ ೭.೧೦ರ ಸುಮಾರಿಗೆ ಹೇಗೋ ಫೋನ್ ಸಂಪರ್ಕ ಸಿಕ್ಕಿ ಈ ಮೀನುಗಾರರು ತಮ್ಮವರಿಗೆ ಮಾಹಿತಿ ರವಾನಿಸಿದ್ದರು. ರಕ್ಷಣೆಗೆ ತಮ್ಮ ಸಹಾಯ ಬಯಸಿದ್ದರಿಂದ ತಾವು ತಕ್ಷಣ ಕಾರ್ಯಪ್ರವೃತ್ತರಾದೆವು. ಮಲಪ್ಪುರಂ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರಿಂದ ಮಾಹಿತಿ ಬಂದ ತಕ್ಷಣ ಕಾರ್ಯಪ್ರವೃತ್ತರಾಗಿದ್ದೆವು. ಕಾರ್ಯಾಚರಣೆಗಿಳಿದ ಎರಡು  ಗಂಟೆಯೊಳಗಾಗಿ ಇಂಡಿಯನ್ ಕೋಸ್ಟ್ ಗಾರ್ಡ್ ಶಿಪ್ (ಐಸಿಜಿಎಸ್)ಅಮರ್ಥ್ಯ ಹೆಸರಿನ ಹಡಗಿನೊಂದಿಗೆ ಸ್ಥಳಕ್ಕೆ ದಾವಿಸಿದ್ದೆವು ಎಂದು ಎಸ್.ಎಸ್. ದಸೀಲಾ ವಿವರಿಸಿದರು. ಉಡುಪಿ ಜಿಲ್ಲೆಯ ಮಲ್ಪೆ ಸಮುದ್ರ ಕಿನಾರೆಯಿಂದ ಸುಮಾರು ೧೮ ಕಿ.ಮೀ.ದೂರದಲ್ಲಿ ಬರಾಕುಡಾ ಬೋಟ್ ಪತ್ತೆಯಾಯಿತು. ತಕ್ಷಣ ಅದರಲ್ಲಿದ್ದ ೧೩ ಮಂದಿಯನ್ನು ಅಮರ್ಥ್ಯ ಶಿಪ್ ಕಮಾಂಡೆಂಟ್ ಕ್ಯಾಪ್ಟನ್ ಅನಿಕೇತ್ ಸಿಂಗ್ ನೇತೃತ್ವದ ತಂಡ ರಕ್ಷಿಸಿತು.

ಬಳಿಕ ನೀರು ನುಗ್ಗಿ ಎಂಜಿನ್ ಸ್ಥಗಿತಗೊಂಡಿದ್ದ ಬರಾಕುಡ ಬೋಟ್‌ನ್ನು ಸರಿಪಡಿಸಿ ಮೇರಿ ಮಾತಾ ಎಂಬ ಹೆಸರಿನ ಇನ್ನೊಂದು ಬೋಟ್ ಮೂಲಕ ಮಲ್ಪೆ ಬಂದರಿಗೆ ತರಲಾಯಿತು. ಓಖಿ ಚಂಡಮಾರುತದ ಅಬ್ಬರದ ನಡುವೆಯೇ  ಕೋಸ್ಟ್ ಗಾರ್ಡ್ ಸಿಬ್ಬಂದಿ ಮೀನುಗಾರರನ್ನು ರಕ್ಷಿಸಿದರು ಎಂದು ದಸೀಲಾ ತಿಳಿಸಿದರು. ಕರ್ನಾಟಕ ಕೋಸ್ಟ್ ಗಾರ್ಡ್ ಸದಾ ಕಾರ್ಯಪ್ರವೃತ್ತವಾಗಿದ್ದು, ಅಮರ್ಥ್ಯ ಹಡಗಿನ ಮೂಲಕ ಜೂನ್‌ನಿಂದ ಡಿಸೆಂಬರ್ ೬ರ ವರೆಗೆ ಒಟ್ಟು ೬೨ ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ. ಓಖಿ ಚಂಡಮಾರುತದ ಅವಧಿಯಲ್ಲಿಯೇ ಒಟ್ಟು ೩೫ ಮಂದಿ ಮೀನುಗಾರರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.

Leave a Comment