ಘಟಾನುಘಟಿಗಳ ನಡುವೆ ಟಿಕೇಟ್ ಗಿಟ್ಟಿಸಿದ ಜಿ.ಪಂ ಸದಸ್ಯ ಯೋಗೇಶ್ ಬಾಬು

ಚಿತ್ರದುರ್ಗ, ಏ. 16 – ಜಿಲ್ಲೆಯ ಎಸ್ಟಿ ಮೀಸಲು ಕ್ಷೇತ್ರವಾಗಿರುವ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಲ್ಲಿನ ಅತ್ಯುನ್ನತ ವ್ಯಕ್ತಿಗಳ ನಡುವೆ ಜಿಲ್ಲಾ ಪಂಚಾಯಿತಿ ಜಿ.ಪಂ ಸದಸ್ಯ ಯೋಗೇಶ್ ಬಾಬು ಟಿಕೇಟ್ ತಂದು ಅಚ್ಚರಿ ಮೂಡಿಸಿದ್ದಾರೆ.
ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ವಿ.ಎಸ್.ಉಗ್ರಪ್ಪ, ಮಾಜಿ ಸಂಸದ ಹಾಗೂ ಚಿತ್ರನಟ ಶಶಿಕುಮಾರ್, ಬಳ್ಳಾರಿಯ ಗ್ರಾಮಾಂತರ ಕ್ಷೇತ್ರದ ಶಾಸಕ, ಮಾಜಿ ಉಪಸಭಾಪತಿ ಹಾಗೂ ಡಾ.ನಂಜುಂಡಪ್ಪ ಅನುಷ್ಟಾನ ಸಮಿತಿ ಅಧ್ಯಕ್ಷರಾದ ಎನ್.ವೈ.ಗೋಪಾಲಕೃಷ್ಣ, ಕರಣ್ ಬೋರಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಬಾಬು ಸೇರಿದಂತೆ ಇನ್ನಿತರೆ ಮುಖಂಡರುಗಳು ಟಿಕೇಟ್ ತರಲು ತೀವ್ರ ಹೋರಾಟವನ್ನು ನಡೆಸಿದ್ದರು. ಇದನ್ನೆಲ್ಲಾ ಗಮನಿಸುತ್ತಿದ್ದ ಕ್ಷೇತ್ರದ ಹಾಗೂ ಜಿಲ್ಲೆಯ ಜನತೆ ಯಾರು ಕಾಂಗ್ರೆಸ್ ಅಭ್ಯರ್ಥಿಯಾಗುತ್ತಾರೆ ಎಂಬ ಕುತೂಹಲ ಹೊಂದಿದ್ದರು. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಎಸ್‍ಆರ್ ಪಕ್ಷದ ಎಸ್.ತಿಪ್ಪೇಸ್ವಾಮಿ ವಿರುದ್ದ ಸೋಲು ಅನುಭವಿಸಿದ್ದ ಎನ್.ವೈ.ಗೋಪಾಲಕೃಷ್ಣ ನಂತರ ಬಳ್ಳಾರಿಯ ಗ್ರಾಮಾಂತರ ಕ್ಷೇತ್ರದಲ್ಲಿ ನಡೆದಂತಹ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಜಯಸಾಧಿಸಿದ್ದರು. ಆದರು ಸಹ ಅವರ ದೃಷ್ಟಿ ಮಾತ್ರ ಮೊಳಕಾಲ್ಮೂರು ಕ್ಷೇತ್ರದ ಮೇಲಿತ್ತು. ಎನ್.ವೈ.ಗೋಪಾಲಕೃಷ್ಣ ತಾವು ಜಯಗಳಿಸಿದಂತ ಬಳ್ಳಾರಿಯ ಗ್ರಾಮಾಂತರ ಕ್ಷೇತ್ರದಲ್ಲಿ ಕಳೆಯುವ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ಮೊಳಕಾಲ್ಮೂರು ಕ್ಷೇತ್ರದಲ್ಲೇ ಕಾರ್ಯಚಟುವಟಿಕೆ ನಡೆಸುತ್ತಿದ್ದರು. ಶತಾಯಗತಾಯ ಮೊಳಕಾಲ್ಮೂರು ಕ್ಷೇತ್ರದಲ್ಲೇ ಸ್ಪರ್ಧೆ ನಡೆಸಬೇಕೆಂದು ಮಹತ್ವಕಾಂಕ್ಷೆಯನ್ನು ಹೊಂದಿದ್ದರು. ಈ ಎಲ್ಲದರ ನಡುವೆ ಗೋಪಾಲಕೃಷ್ಣ ಅವರ ರಾಜಕೀಯ ಗರಡಿಯಲ್ಲಿ ಬೆಳೆದಂತ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಬಾಬು ತನ್ನ ರಾಜಕೀಯ ಗುರು ಗೋಪಾಲಕೃಷ್ಣ ಎಂದೇ ಹೇಳುತ್ತಿದ್ದರು. ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಯೋಗೇಶ್ ಬಾಬು ಗೋಪಾಲಕೃಷ್ಣ ವಿರುದ್ದವೇ ತೊಡೆತಟ್ಟಿ ಟಿಕೇಟ್ ಪಡೆಯಬೇಕೆಂದು ಶ್ರಮಿಸುತ್ತಿದ್ದರು. ಇದರಿಂದ ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು.ಈ ಎಲ್ಲಾ ಬೆಳವಣಿಗೆಗಳನ್ನು ಕಂಡಂತ ಕ್ಷೇತ್ರದ ಜನತೆ ಯಾರು ಟಿಕೇಟ್ ತಂದು ಕ್ಷೇತ್ರದಲ್ಲಿ ಸ್ಪರ್ಧೆ ನಡೆಸುತ್ತಾರೆ ಎಂದು ಕುತೂಹಲ ಹೊಂದಿದ್ದರು. ಈ ಎಲ್ಲಾ ಊಹಾಪೆÇೀಹಗಳಿಗೆ ಹಾಗೂ ಕುತೂಹಲಗಳಿಗೆ ನಿನ್ನೆ ದೆಹಲಿಯಲ್ಲಿ ಎಐಸಿಸಿ ಬಿಡುಗಡೆಗೊಳಿಸಿದ ಕರ್ನಾಟಕ ರಾಜ್ಯದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯಲ್ಲಿ ಘಟನಾನಘಟಿಗಳ ನಡುವೆಯೂ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಬಾಬು ಟಿಕೇಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Leave a Comment