ಗ್ರೀಸ್‌ಗೆ ಕರೆದೊಯ್ದ ಹೋಮಿಯೋಪತಿ

ವೈದ್ಯಕೀಯ ಅನುಭವವನ್ನು ಕನ್ನಡ ನೆಲದಲ್ಲೇ ರೋಗಿಗಳಿಂದ ಕೈಗೆಟಕುವ ಶುಲ್ಕ ಪಡೆದು ಇಲ್ಲಿನ ಋಣ ತೀರಿಸುವ ಹಠ ಹೊತ್ತ ಡಾ. ಬಿ.ಟಿ. ರುದ್ರೇಶ್‌ಗೆ ತಮ್ಮ ವೃತ್ತಿ ವಿದೇಶಕ್ಕೆ ಕರೆದೊ ಯ್ಯುತ್ತದೆ ಎಂಬ ಕಲ್ಪನೆ ಕನಸು ಮನಸ್ಸಿನಲ್ಲೂ ಇರಲಿಲ್ಲ. ಅಸಂಖ್ಯಾತ ವಿದೇಶಿ ರೋಗಿಗಳು ಅವರಿಂದ ಚಿಕಿತ್ಸೆ ಪಡೆದಿದ್ದಾರೆ. ಆದರೆ ತಮಗೆ ಗೌರವ, ಮಾನ್ಯತೆ ತಂದುಕೊಟ್ಟ ಹೋಮಿಯೋಪತಿ ಅಕಾಡೆಮಿಕ್ ಅಗತ್ಯಕ್ಕಾಗಿ ಆಹ್ವಾನ ಬಂದಿದ್ದು ನಿಜ.
ಗ್ರೀಸ್‌ನ ರಾಜಧಾನಿ ಅಥೆನ್ಸ್‌ನಿಂದ ಸುಮಾರು ೩೦೦ ಕಿ.ಮೀ. ದೂರದಲ್ಲಿರುವ ಅಲೋನಿಸಸ್ ದ್ವೀಪದಲ್ಲಿ ಪ್ರಖ್ಯಾತ ಹೋಮಿಯೋಪತಿ ತಜ್ಞ ಪ್ರೊ. ಜಾರ್ಜ್ ವಿಥಲ್ ಕಾಸ್ ನೇತೃತ್ವದಲ್ಲಿ ಹಲವಾರು ವರ್ಷಗಳಿಂದ ನಡೆಯುತ್ತಿರುವ ಇಂಟರ್‌ನ್ಯಾಷನಲ್ ಅಕಾಡೆಮಿ ಆಫ್ ಕ್ಲಾಸಿಕಲ್ ಹೋಮಿಯೋಪತಿ ಎಂಬ ಪ್ರತಿಷ್ಠಿತ ಸಂಸ್ಥೆ ಜಗತ್ತಿನ ವಿವಿಧೆಡೆಗಳಲ್ಲಿ ಅಪ್ರತಿಮ ಸಾಧನೆ ಮಾಡಿರುವ ಹೋಮಿಯೋಪತಿ ತಜ್ಞರನ್ನು ಗುರುತಿಸಿ ವರ್ಷಕ್ಕೊಮ್ಮೆ ವಿಶೇಷ ಅತಿಥಿಯಾಗಿ ಆಹ್ವಾನಿಸಿ ಅವರಿಂದ ಪ್ರಬಂಧ ಮಂಡಿಸುವ ವಿಶೇಷ ಕಾರ್ಯಕ್ರಮ ಏರ್ಪಡಿಸುತ್ತದೆ.
ಈ ಸಂಸ್ಥೆಯಲ್ಲಿ ಇಂತಹ ಆಹ್ವಾನಕ್ಕಾಗಿ ಇಡೀ ಜಗತ್ತಿನ ಹೆಸರಾಂತ ಹೋಮಿಯೋಪತಿ ತಜ್ಞರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ಕಳೆದ ಹತ್ತು ವರ್ಷಗಳಿಂದ ಯಾರೊಬ್ಬ ಭಾರತೀಯರನ್ನೂ ಈ ಸಂಸ್ಥೆ ಆಹ್ವಾನಿಸಿರಲಿಲ್ಲ. ರಾಜ್ಯದ ಪ್ರಮುಖ ಹೋಮಿಯೋಪತಿ ತಜ್ಞ ಡಾ. ಬಿ.ಟಿ. ರುದ್ರೇಶ್ ಅವರನ್ನು ಕಳೆದ ತಿಂಗಳ ಕೊನೇ ಭಾಗದಲ್ಲಿ ಆಹ್ವಾನಿಸಿತ್ತು.
ರುದ್ರೇಶ್ ಅವರು ಸುಮಾರು ೩೦೦೦ ಸಂತಾನಹೀನತೆ ಪ್ರಕರಣಗಳಲ್ಲಿ ಅಗತ್ಯ ಚಿಕಿತ್ಸೆ ನೀಡಿ ಯಶಸ್ಸು ಗಳಿಸಿರುವುದು ಭಾರತದ ಮಟ್ಟಿಗಿನ ದಾಖಲೆಯಷ್ಟೇ ಆಗಿರಲಿಲ್ಲ. ಅದೊಂದು ವಿಶ್ವ ದಾಖಲೆ ಎಂದು ಗುರುತಿಸಿದ ಜಾರ್ಚ್ ವಿಥಲ್ ಕಾಸ್ ತಮ್ಮ ಅಕಾಡೆಮಿಯಲ್ಲಿ ಸಂತಾನಹೀನತೆಗೆ ಚಿಕಿತ್ಸೆ ನೀಡಿದ ಪ್ರಕರಣಗಳನ್ನು ಮಂಡಿಸುವಂತೆ ಕೋರಿಕೊಂಡರು. ಆರು ವರ್ಷಗಳ ಹಿಂದೆ ದೆಹಲಿಯ ವಿಜ್ಞಾನ ಭವನದಲ್ಲಿ ಆಯುಷ್ ಸಚಿವಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂತಾನಹೀನತೆ ಪ್ರಕರಣಗಳ ಕುರಿತು ರುದ್ರೇಶ್ ಮಾತನಾಡಿದ್ದು, ನೇರ ಪ್ರಸಾರವಾಗಿತ್ತು. ಆ ಹೊತ್ತಿಗೆ ಅವರು ಒಂದು ಸಾವಿರ ಪ್ರಕರಣಗಳಲ್ಲಿ ಚಿಕಿತ್ಸೆ ನೀಡಿ ಯಶಸ್ಸು ಗಳಿಸಿದ್ದರು. ಆ ನಂತರ ಇನ್ನೂ ಎರಡು ಸಾವಿರ ಪ್ರಕರಣಗಳಲ್ಲಿ ಯಶಸ್ಸು ಗಳಿಸಿದ ರುದ್ರೇಶ್ ರಾಜ್ಯ, ರಾಷ್ಟ್ರ, ಅಂತರ ರಾಷ್ಟ್ರೀಯ ಮಟ್ಟದ ವೈಜ್ಞಾನಿಕ ಕಾರ್ಯಾಗಾರಗಳಲ್ಲೂ ಈ ಕುರಿತು ಉಪನ್ಯಾಸ ನೀಡಿದ್ದರು. ವೆಬಿನಾರ್ ಮೂಲಕ ಸುಮಾರು ೩೩ ರಾಷ್ಟ್ರಗಳ ಪ್ರತಿನಿಧಿಗಳ ಜತೆ ಅವರು ಮಾತನಾಡಿದ್ದು ನೇರ ಪ್ರಸಾರವಾಗಿತ್ತು. ಈ ಎಲ್ಲ ಮಾಹಿತಿ ಆಧರಿಸಿ ಯಶಸ್ಸನ್ನು ಖಚಿತಪಡಿಸಿಕೊಂಡ ಬಳಿಕವಷ್ಟೇ ರುದ್ರೇಶ್ ಅವರಿಗೆ ಗ್ರೀಸ್‌ನಿಂದ ಆಹ್ವಾನ ಬಂದಿತ್ತು.
ಇಂಗ್ಲೆಂಡ್, ಜರ್ಮನಿ, ಅರ್ಮೇನಿಯಾ, ಜೋರ್ಡಾನ್, ಸರ್ಬಿಯಾ, ಇಟಲಿ, ಗ್ರೀಸ್ ಸೇರಿದಂತೆ ೩೩ ಐರೋಪ್ಯ ರಾಷ್ಟ್ರಗಳ ೧೧೭ ಪ್ರತಿನಿಧಿಗಳು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ರುದ್ರೇಶ್ ತಮಗೆ ಯಶಸ್ಸು ತಂದುಕೊಟ್ಟ ಸಂತಾನಹೀನತೆ ಚಿಕಿತ್ಸೆ ಪ್ರಕರಣಗಳಿಗೆ ಅನುಸರಿಸಿದ ಚಿಕಿತ್ಸಾ ಕ್ರಮವನ್ನು ಎಳೆ ಎಳೆಯಾಗಿ ಸರಳಗೊಳಿಸಿ ಮಂಡಿಸಿದ ಅಪರೂಪದ ಕ್ರಮಕ್ಕೆ ಅಪಾರ ಪ್ರಶಂಸೆ ವ್ಯಕ್ತವಾಯಿತು. ಅಷ್ಟೂ ದೇಶಗಳ ಹೋಮಿಯೋಪತಿ ತಜ್ಞರು ಅನುಸರಿಸುತ್ತಿದ್ದ ಚಿಕಿತ್ಸಾ ಕ್ರಮಕ್ಕೂ ಭಾರತದಲ್ಲಿ ರುದ್ರೇಶ್ ಅನುಸರಿಸುತ್ತಿದ್ದ ಕ್ರಮಕ್ಕೂ ಅಚ್ಚರಿ ಹುಟ್ಟಿಸುವ ವ್ಯತ್ಯಾಸಗಳಿದ್ದವು. ಈ ಚಿಕಿತ್ಸಾ ಪದ್ಧತಿಯನ್ನು ಇನ್ನೊಂದು ಎತ್ತರಕ್ಕೆ ಕೊಂಡೊಯ್ಯುವಂತೆ ಮಾಡಿದ್ದ ಅವರ ಆಧಾರ ಸಹಿತ ಅನುಭವಗಳ ಮಂಡನೆ ನಂತರ ಪ್ರತಿನಿಧಿಗಳಿಗೆ ಅದೊಂದು ಪವಾಡವಲ್ಲ, ಕೇವಲ ಔಷಧ ಸಂಯೋಜನೆಯಲ್ಲ, ತಾವೆಂದೂ ಅನುಸರಿಸದೇ ಇದ್ದ ಕಾಯಿಲೆಗಷ್ಟೇ ಔಷಧವಲ್ಲ ಎಂಬ ಭಿನ್ನ ಕ್ರಮವೊಂದು ಇಂಥ ಯಶಸ್ಸು ತಂದುಕೊಟ್ಟಿರುವ ಬಗ್ಗೆ ಅವರಲ್ಲಿ ಅಚ್ಚರಿ ಮೂಡಿಸಿತ್ತು. ಐರೋಪ್ಯ ರಾಷ್ಟ್ರಗಳಲ್ಲದೇ ಮೆಕ್ಸಿಕೋ ಸೇರಿದಂತೆ ಇನ್ನೂ ಕೆಲವು ರಾಷ್ಟ್ರಗಳ ಪ್ರತಿನಿಧಿಗಳು ಅಕಾಡೆಮಿಯ ವಿಶೇಷ ಉಪನ್ಯಾಸದ ಲಾಭ ಪಡೆಯುವ ಸಲುವಾಗಿ ವಿಶೇಷ ಅನುಮತಿ ಪಡೆದು ಆಗಮಿಸಿದ್ದರು. ಸಾಸಿವೆ ಬಿದ್ದರೂ ಸದ್ದಾಗದಂಥ ವಾತಾವರಣದಲ್ಲಿ ಅವರ ವಿಷಯ ಮಂಡನೆ ಮುಗಿದ ನಂತರ ಎಲ್ಲರೂ ಎದ್ದು ನಿಂತು ರುದ್ರೇಶ್ ಅವರಿಗೆ ಚಪ್ಪಾಳೆ ಮೂಲಕ ಗೌರವ ಸಲ್ಲಿಸಿದ್ದು ಕರ್ನಾಟಕಕ್ಕೆ ಮಾತ್ರವಲ್ಲದೇ ಇಡೀ ಭಾರತಕ್ಕೆ ಗೌರವ ತಂದುಕೊಟ್ಟಿತ್ತು. ರುದ್ರೇಶ್ ಪಾಲಿಗೆ ಅದೊಂದು ಅವಿಸ್ಮರಣೀಯ ಗಳಿಗೆ.
ಇಸ್ತಾನ್ ಬುಲ್ ವಿಶ್ವವಿದ್ಯಾಲಯದ ಗರ್ಭಶಾಸ್ತ್ರಜ್ಞ ಪ್ರೊಫೆಸರ್ ಡಾ.ಟೇಮರ್ ಎರೆಲ್ ಸೇರಿದಂತೆ ಇನ್ನೂ ಅದೆಷ್ಟೋ ತಜ್ಞರು ರುದ್ರೇಶ್ ಜತೆ ವಿಚಾರ ವಿನಿಮಯ ಮಾಡಿಕೊಂಡರಲ್ಲದೇ ತಾವು ವೈಫಲ್ಯ ಕಂಡಿರುವ ಪ್ರಕರಣಗಳನ್ನು ರುದ್ರೇಶ್ ಗಮನಕ್ಕೆ ತಂದು ಚಿಕಿತ್ಸೆ ನೀಡುವಂತೆ ಮನವಿ ಮಾಡಿಕೊಂಡರು. ಡಾ.ಆನ್ ಸೊರೆಲ್ ಸೇರಿದಂತೆ ಅನೇಕ ಹೋಮಿಯೋಪತಿ ತಜ್ಞರು ರುದ್ರೇಶ್ ವಿಷಯ ಮಂಡನೆ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಯನ್ನೂ ಆರಂಭಿಸಿದರು. ಅಷ್ಟರ ಮಟ್ಟಿಗೆ ರುದ್ರೇಶ್ ಐರೋಪ್ಯ ಹೋಮಿಯೋಪತಿ ಜಗತ್ತಿನ ಮೇಲೆ ಅಗಾಧ ಪ್ರಭಾವ ಬೀರಿದ್ದರು. ಇದರ ಫಲವಾಗಿ ಇನ್ನಷ್ಟು ದೇಶಗಳಿಂದ ಆಹ್ವಾನಗಳ ಸರಣಿಯೇ ಆರಂಭವಾಗಿದ್ದು ಅವರ ಖ್ಯಾತಿ ರೋಗಿಗಳ ಮಟ್ಟದಲ್ಲಷ್ಟೇ ಉಳಿಯದೇ ಹೋಮಿಯೋಪತಿ ಜಗತ್ತಿನ ಅಕಾಡೆಮಿಕ್ ವಲಯಕ್ಕೂ ವಿಸ್ತರಿಸಿರುವುದರ ಹಿಂದೆ ಅವರ ಅಪಾರ ಪರಿಶ್ರಮವಿದೆ. ಚಿಕಿತ್ಸೆ ಪಡೆದ ಅಸಂಖ್ಯಾತ ರೋಗಿಗಳ ಹರಕೆ ಹಾರೈಕೆಯೂ ಇದೆ. ಇಲ್ಲದಿದ್ದರೆ ಭಾರತದಿಂದ ೫೦೦೦ ಕಿ.ಮೀ.ಗೂ ಹೆಚ್ಚು ದೂರವಿರುವ ಗ್ರೀಸ್ ಎಂಬ ದೇಶಕ್ಕೂ ಭಾರತದ ದಕ್ಷಿಣ ಭಾಗದಲ್ಲಿರುವ ಕರ್ನಾಟಕ ರಾಜ್ಯದಲ್ಲಿ ಜನಿಸಿದ ಡಾ.ರುದ್ರೇಶ್‌ಗೂ ಎಲ್ಲಿಯ ಸಂಬಂಧ ಹೋಮಿಯೋಪತಿ ಎಂಬ ಸಂಪರ್ಕ ಸೇತು ಇಲ್ಲದೇ ಇದ್ದಿದ್ದರೆ ಎಲ್ಲಿಯ ರುದ್ರೇಶ್ ಎಲ್ಲಿಯ ಗ್ರೀಸ್ ಹಾಗೆಂದ ಮಾತ್ರಕ್ಕೆ ಭಾರತದ ಎಲ್ಲ ಹೋಮಿಯೋಪತಿ ತಜ್ಞರಿಗೂ ಆ ಭಾಗ್ಯ ಸಿಗಬೇಕಲ್ಲ.

Leave a Comment