ಗ್ರಾ.ಪಂನಲ್ಲಿ ಭ್ರಷ್ಟಾಚಾರ ಆರೋಪ – ಪ್ರತಿಭಟನೆ

ಪಾಂಡವಪುರ:ನ:14- ತಾಲೂಕಿನ ನಾರಾಯಣಪುರ ಗ್ರಾಮ ಪಂಚಾಯಿತಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ರೈತಸಂಘದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಗ್ರಾಪಂ ಎದುರು ಪ್ರತಿಭಟನೆ ನಡೆಸಿದರು.
ಗ್ರಾಪಂ ಎದುರು ಜಮಾಹಿಸಿದ ಕಾರ್ಯಕರ್ತರು ಪಂಚಾಯಿತಿಗೆ ಬೀಗಜಡಿದು ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಓ ವಿರುದ್ದ ಘೋಷಣೆಕೂಗಿ ಆಕ್ರೋಶವ್ಯಕ್ತಪಡಿಸಿ, ಮೇಲಾಧಿಕಾರಿಗಳು ಸ್ಥಳಕ್ಕಾಗಮಿಸಿ ಸಮಸ್ಯೆ ಬಗೆಹರಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟುಹಿಡಿದು ಪ್ರತಿಭಟನೆ ನಡೆಸಿದರು.
ಇನ್ನೂ ಸ್ವಚ್ಚಭಾರತ್ ಯೋಜನೆಯಡಿ ಶೌಚಾಲಯಗಳನ್ನು ನಿರ್ಮಿಸಿಕೊಂಡಿರುವ ಫಲಾನುಭವಿಗಳಿಗೂ ಸಹ ಶೌಚಾಲಯದ ಹಣವನ್ನು ಸಕಾಲಕ್ಕೆ ನೀಡುತ್ತಿಲ್ಲ. ಬಹುತೇಕ ಫಲಾನುಭವಿಗಳ ಶೌಚಾಲಯದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಗ್ರಾಪಂ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲು ಸ್ವಚ್ಚತೆ, ಅನೈರ್ಮಲ್ಯ ತಾಂಡವಾಡುತ್ತಿದೆ. ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಚರಂಡಿಗಳನ್ನು ಸ್ವಚ್ಚತೆಕಾಪಾಡಲು ಮುಂದಾಗಿಲ್ಲ. ಸ್ವಚ್ವತೆ, ನೈರ್ಮಲ್ಯ ಕಾಪಾಡುವುದಕ್ಕಾಗಿ ಪಂಚಾಯಿತಿಗೆ ಬರುವ ಹಣವನ್ನು ಅಧಿಕಾರಿಗಳು ನುಂಗಿ ನೀರುಕುಡಿಯುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ದ ಆಕ್ರೋಶವ್ಯಕ್ತಪಡಿಸಿದರು.
ನಾರಾಯಣಪುರ ಗ್ರಾಪಂನಲ್ಲಿ ಅಧ್ಯಕ್ಷರು ಹಾಗೂ ಪಿಡಿಓ ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದಾರೆ. ಬಸವ ವಸತಿ ಯೋಜನೆಯಲ್ಲಿ ಬಡವರು, ವಸತಿರಹಿತ ಅರ್ಹ ಫಲಾನುಭವಿಗಳನ್ನು ಆಯ್ಕೆಮಾಡಿ ವಸತಿ ಯೋಜನೆ ನೀಡುವುದರ ಬದಲು ಹಣಪಡೆದು ಮನೆ ಹೊಂದಿರುವ ಫಲಾನುಭವಿಗಳಿಯೇ ವಸತಿ ಯೋಜನೆಗಳನ್ನು ಹಂಚಿಕೆ ಮಾಡಿದ್ದಾರೆ. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳನ್ನು ಪ್ರಶ್ನಿಸಿದರೆ ಬೇಜವಬ್ದಾರಿಯಿಂದ ಉತ್ತರಿಸುತ್ತಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ತಾಪಂ ಮಾಜಿ ಸದಸ್ಯ ಎಂ.ಕೆ.ಪುಟ್ಟೇಗೌಡ, ರಾಜೇಗೌಡ, ನಾಗೇಗೌಡ, ಗಂಗಾಧರ್, ಸ್ವಾಮಯ್ಯ, ಜಯರಾಮ್,ವೆಂಕಟೇಶ್‍ಗೌಡ, ರಾಮಗುಳಿಗೌಡ, ಉಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Leave a Comment