ಗ್ರಾಹಕರ ಸ್ವಾತಂತ್ರ್ಯ ಅತಂತ್ರಸ್ಥಿತಿಯಲ್ಲಿದೆ

ದಾವಣಗೆರೆ.ಮಾ.15; ಗ್ರಾಹಕರು ಮಾರುಕಟ್ಟೆಯ ಮತ್ತು ರಾಷ್ಟ್ರದ ಆರ್ಥಿಕ ವ್ಯವಸ್ಥೆಯಲ್ಲಿ ಅತಿ ಪ್ರಮುಖ ಪಾತ್ರ ವಹಿಸುತ್ತಿದ್ದು ಆದರೆ ಅವರ ಅಗತ್ಯಗಳನ್ನು ಪೂರೈಸುವಲ್ಲಿ ಮಾರುಕಟ್ಟೆ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಕುಲಕರ್ಣಿ ಅಂಬಾದಾಸ್ ಹೇಳಿದರು.

ನಗರದ ಆರ್.ಎಲ್ ಕಾನೂನು ಕಾಲೇಜಿನಲ್ಲಿಂದು ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಹಕರು ತಮ್ಮ ನಿತ್ಯದ ವ್ಯವಹಾರದಲ್ಲಿ ಅನೇಕ ರೀತಿಯಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ ಶೋಷಣೆ ಮುಕ್ತರನ್ನಾಗಿ ಮಾಡಲು ಅವರ ಪರವಾಗಿರುವ ಕಾನೂನುಗಳ ಪ್ರಚಾರ ಮತ್ತು ಮಾಹಿತಿ ನೀಡುವುದು ಅವಶ್ಯಕವಾಗಿದೆ ಎಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ಎ.ಜಿ ಮಾಲ್ದಾರ್ ಮಾತನಾಡಿ ಗ್ರಾಹಕರಿಗೆ ಸುರಕ್ಷತೆಯ ಹಕ್ಕನ್ನು ನೀಡಲಾಗಿದೆ ಅವರು ಖರೀದಿಸುವ ಯಾವುದೇ ವಸ್ತು,ಸರಕು ಅಥವಾ ಪಡೆಯುವ ಸೇವೆ ಸುರಕ್ಷಿತ ವಾಗಿರಬೇಕೆಂದು ಗ್ರಾಹರ ಸಂರಕ್ಷಣಾ ಕಾಯ್ದೆ ಜಾರಿಗೆ ತರಲಾಗಿದೆ ಎಂದರು.

ಹಿರಿಯ ವಕೀಲರಾದ ಎಲ್.ಹೆಚ್ ಅರುಣ್ ಕುಮಾರ್ ಮಾತನಾಡಿ ಗ್ರಾಹಕರ ಹಕ್ಕುಗಳು ಇಂದು ಅಪಾಯದ ಅಂಚಿನಲ್ಲಿದ್ದು ಜನರು ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣವನ್ನು ತನ್ನಲ್ಲಿರಿಸಿಕೊಳ್ಳಲಾಗದೆ ಬ್ಯಾಂಕಿನಲ್ಲಿರಿಸಿದರೆ ಅಗತ್ಯಕ್ಕೆ ಬಳಸಲು ಪಡೆಯಲಾಗದ ಸ್ಥಿತಿ ಉಂಟಾಗಿದೆ. ಅಂತರ್‍ಜಾಲ ತಾಂತ್ರಿಕ ದೋಷಗಳಿಂದಾಗಿ ಹಾಗೂ ನಗದು ರಹಿತ ವ್ಯವಹಾರದಿಂದ ಗ್ರಾಹಕರ ಸ್ವಾತಂತ್ರ್ಯ ಅತಂತ್ರಸ್ಥಿತಿಯಲ್ಲಿದೆ ಎಂದರು. ಕಾಲೇಜಿನ ಪ್ರಾಚಾರ್ಯ ಬಿ.ಎಸ್ ರೆಡ್ಡಿ ಮಾತನಾಡಿ ಶಿಕ್ಷಣದ ಮೂಲಕ ಗ್ರಾಹಕರ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.
ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬೋಧಕ ವರ್ಗದವರು ಇದ್ದರು. ರೇಷ್ಮಾ ಸಂಗಡಿಗರು ಪ್ರಾರ್ಥನೆ ಮಾಡಿದರು. ಉಪನ್ಯಾಸಕರಾದ ವಿದ್ಯಾಧರ್ ಸ್ವಾಗತಿಸಿದರು. ಜಿ.ಎಸ್ ಯತೀಶ್ ವಂದಿಸಿದರು.

Leave a Comment