ಗ್ರಾಹಕರ ಸೋಗಿನಲ್ಲಿ ಕಳವು: ಮಹಿಳೆಯ ಬಂಧನ

ಮಂಗಳೂರು, ಜ.೧೧- ಗ್ರಾಹಕರ ಸೋಗಿನಲ್ಲಿ ಅಂಗಡಿಗಳಿಗೆ ತೆರಳಿ ಪರ್ಸ್, ಚಿನ್ನ ಕಳವು ಮಾಡುತ್ತಿದ್ದ ಮಹಿಳೆಯೊಬ್ಬಳನ್ನು ಮೂಡಬಿದಿರೆ ಪೊಲೀಸರು ನಿನ್ನೆ ಸಂಜೆ ಬಂಧಿಸಿದ್ದಾರೆ. ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ಆಯಿಷಾ ಅಲಿಯಾಸ್ ಸಮ್ರೀನ್(೨೪) ಬಂಧಿತ ಮಹಿಳೆ.
ಸಮ್ರೀನ್ ಮೂಡುಬಿದಿರೆಯ ಬನ್ನಡ್ಕದಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯವಿದ್ದಾಳೆ. ನಿನ್ನೆ ಮಹಿಳೆಯೊಬ್ಬರು ಅಲಂಕಾರ್ ಫೈನಾನ್ಸ್‌ನಲ್ಲಿದ್ದ ತಮ್ಮ ಆಭರಣ ಬಿಡಿಸಲು ಬಂದಿದ್ದರು. ಈ ಸಂದರ್ಭ ಗ್ರಾಹಕಿಯ ಸೋಗಿನಲ್ಲಿ ಬಂದಿದ್ದ ಸಮ್ರೀನ್ ಮಹಿಳೆಯ ಪರ್ಸ್‌ನಲ್ಲಿದ್ದ ೧೩ ಸಾವಿರ ರೂ. ನಗದು ಅಪಹರಿಸಿದ್ದು ಫೈನಾನ್ಸ್‌ನ ಸಿಸಿ ಕೆಮರಾದಲ್ಲಿ ದಾಖಲಾಗಿತ್ತು. ಈ ಬಗ್ಗೆ ಮಹಿಳೆ ಮೂಡಬಿದಿರೆ ಪೊಲೀಸ್ ಠಾಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ತಕ್ಷಣ ಕಾರ್ಯಾಚರಣೆ ಕೈಗೊಂಡು ಬಸ್ ನಿಲ್ದಾಣದಲ್ಲಿದ್ದ ಆರೋಪಿ ಸಮ್ರೀನ್‌ಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದಾಗ ಕೆಲದಿನಗಳ ಹಿಂದೆ ಮೆಡಿಕಲೊಂದರ ಬಳಿ ಗ್ರಾಹಕರೊಬ್ಬರ ೨೧ ಸಾವಿರ ರೂ. ಕಳವುಗೈದಿರುವುದಾಗಿಯೂ ಒಪ್ಪಿಕೊಂಡಿದ್ದಾಳೆ. ಈ ಎರಡೂ ಪ್ರಕರಣ ಸೇರಿ ಒಟ್ಟು ೩೪ ಸಾವಿರ ರೂ.ವನ್ನು ಪೊಲೀಸರು ವಶಪಡಿಸಿಕೊಂಡು ಆರೋಪಿ ಸಮ್ರೀನ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Leave a Comment