ಗ್ರಾಮ ಪಂಚಾಯಿತಿ ಚುನಾವಣೆಗೆ ಬಿಜೆಪಿ ಸಿದ್ಧತೆ

ಬೆಂಗಳೂರು, ಮಾ. ೧೪- ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಅಸಮಾಧಾನ ಹೊರ ಹಾಕುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಾಸಕರ ಅಹವಾಲು ಆಲಿಸಲು ಮುಂದಾಗಿದ್ದಾರೆ.

ವಿಧಾನಸಭೆಯ ಅಧಿವೇಶನದ ಸಂದರ್ಭದಲ್ಲೇ ಎಲ್ಲ ಜಿಲ್ಲೆಯ ಶಾಸಕರುಗಳ ಜತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಭೆ ನಡೆಸಿ ಶಾಸಕರುಗಳ ಅಹವಾಲು ಆಲಿಸಿ ಸಮಸ್ಯೆ ಪರಿಹರಿಸಬೇಕೆಂದು ಇಂದು ನಡೆದ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಶಾಸಕರಿಗೆ ಬೆಲೆ ಇಲ್ಲದಂತಾಗಿದೆ. ಮುಖ್ಯಮಂತ್ರಿ ಭೇಟಿ ಮಾಡಲು ಹೋದಾಗ ಅವಮಾನ ಅನುಭವಿಸಬೇಕಾಗುತ್ತದೆ. ಮುಖಕೊಟ್ಟು ಮಾತನಾಡುವುದಿಲ್ಲ, ಕಷ್ಟ-ಸುಖ ಆಲಿಸುವುದಿಲ್ಲ ಎಂದು ಕೆಲ ಶಾಸಕರು ಮೊನ್ನೆ ನಡೆದ ಶಾಸಕಾಂಗ ಸಭೆಯಲ್ಲಿ ಶಾಸಕರು ಅಸಮಾಧಾನ ಹೊರ ಹಾಕಿದ್ದರಿಂದ ಅಧಿವೇಶನ ನಡೆಯುವಾಗಲೇ ಶಾಸಕರ ಸಭೆ ನಡೆಸಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ ಎಂದು ಸಭೆಯ ನಂತರ ಶಾಸಕ ಅರವಿಂದ ಲಿಂಬಾವಳಿ ವರದಿಗಾರರಿಗೆ ತಿಳಿಸಿದರು.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿಂದು ಕೋರ್‌ಕಮಿಟಿ ಸಭೆಯ ತೀರ್ಮಾನಗಳ ಬಗ್ಗೆ ಮಾಹಿತಿ ನೀಡಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬರುವ ವಾರದಿಂದಲೇ ಆಯಾ ಜಿಲ್ಲೆಯ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರ ಸಭೆ ನಡೆಸಿ, ಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸುವರು ಎಂದು ಹೇಳಿದರು.

ಗ್ರಾಮ ಪಂಚಾಯ್ತಿ ಚುನಾವಣೆಗೆ ಸಿದ್ಧತೆ
ಮುಂಬರುವ ಗ್ರಾಮ ಪಂಚಾಯ್ತಿ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ನಡೆಸಲು ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಅದರಂತೆ ಬರುವ ಏಪ್ರಿಲ್‌ನಲ್ಲಿ ಬೂತ್ ಮಟ್ಟದ ಎಲ್ಲ ಪ್ರಮುಖರ ಜಿಲ್ಲಾಮಟ್ಟದ ಹಾಗೂ ರಾಜ್ಯಮಟ್ಟದ ಸಮಾವೇಶವನ್ನು ಆಯೋಜಿಸಲು ಕೋರ್ ಕಮಿಟಿ ಸಭೆ ತೀರ್ಮಾನಿಸಿತು ಎಂದರು.

ಈ ತಿಂಗಳು ಪೂರ್ಣ
ಪಕ್ಷದ ಜಿಲ್ಲಾ ಸಮಿತಿಗಳಿಗೆ ಈಗಾಗಲೇ ಅಧ್ಯಕ್ಷರ ನೇಮಕವಾಗಿದ್ದು, ಇನ್ನು ಒಂದೆರೆಡು ಜಿಲ್ಲೆಗಳಲ್ಲಿ ಅಧ್ಯಕ್ಷರ ನೇಮಕ ಬಾಕಿ ಇದೆ. ಹಾಗೆಯೇ ಜಿಲ್ಲಾಮಟ್ಟದಲ್ಲಿ ಇತರ ಪದಾಧಿಕಾರಿಗಳ ನೇಮಕವನ್ನೂ ಪಕ್ಷದ ಕೇಂದ್ರ ನಾಯಕರ ಸೂಚನೆಯಂತೆ ಈ ತಿಂಗಳಾಂತ್ಯದಲ್ಲಿ ಪೂರ್ಣಗೊಳಿಸುವ ತೀರ್ಮಾನವನ್ನು ಕೋರ್ ಕಮಿಟಿ ಕೈಗೊಂಡಿದೆ ಎಂದರು.

ಸಮಾಧಾನ
ಕೊರೊನಾ ಸೋಂಕಿನ ಬಗ್ಗೆ ಬಿಜೆಪಿ ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡಿಸಬೇಕು. ಅದರಲ್ಲೂ ಸಾಮಾಜಿಕ ಜಾಲ ತಾಣದ ಮೂಲಕ ಪ್ರಚಾರ ಕೈಗೊಳ್ಳುವಂತೆ ಕಾರ್ಯಕರ್ತರಿಗೆ ಸೂಚಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಹಾಗೆಯೇ, ಪಕ್ಷದ ವತಿಯಿಂದ ಯಾವುದೇ ಸಭೆ-ಸಮಾರಂಭಗಳನ್ನು ಮಾಡದಿರುವ ತೀರ್ಮಾನವನ್ನು ಕೈಗೊಳ್ಳಲಾಯಿತು ಎಂದು ಅವರು ಹೇಳಿದರು.

Leave a Comment