ಗ್ರಾಮೀಣ ಸಮೃದ್ಧಿಗಾಗಿ ಉತ್ತಮ ಆಡಳಿತ ಸಹಕಾರ ಸಪ್ತಾಹದ ಧ್ಯೇಯ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ನ. ೯- ಸಹಕಾರ ಕ್ಷೇತ್ರದ ಸಾಧನೆಯನ್ನು ಜನಸಾಮಾನ್ಯರಿಗೆ ಪರಿಚಯಿಸಲು ಸಹಕಾರ ತತ್ವ ಮತ್ತು ಆಚರಣೆ ಬಗ್ಗೆ ಜನರಲ್ಲಿ ವಿಶ್ವಾಸ ಮತ್ತು ನಂಬಿಕೆ ಮೂಡಿಸಲು ಹಾಗೂ ಸಹಕಾರ ಕ್ಷೇತ್ರದ ಸಾಧನೆ ವೈಫಲ್ಯಗಳ ಬಗ್ಗೆ ಚಿಂತನ-ಮಂಥನ ನಡೆಸಲು ಈ ತಿಂಗಳ 14 ರಿಂದ 20 ರವರೆಗೆ 65ನೇ ಅಖಿಲ ಭಾರತ ಸಹಕಾರ ಸಪ್ತಾಹ ನಡೆಯಲಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಂಶಾಪೂರ್ ಹೇಳಿದರು.

ರಾಜ್ಯದ ಎಲ್ಲ ಸಹಕಾರಿ ಸಂಘ ಸಂಸ್ಥೆಗಳು ಸಪ್ತಾಹವನ್ನು ಆಚರಿಸಲಿದ್ದು, ಈ ಬಾರಿಯ ಸಪ್ತಾಹ ಧ್ಯೇಯ “ಗ್ರಾಮೀಣ ಸಮೃದ್ಧಿಗಾಗಿ ಸಹಕಾರ ಸಂಸ್ಥೆಗಳ ಮೂಲಕ ಉತ್ತಮ ಆ‌ಡಳಿತ ಮತ್ತು ಸರ್ವರನ್ನೂ ಒಳಗೊಂಡ ಬೆಳವಣಿಗೆ” ಎಂಬುದಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಈ ತಿಂಗಳ 14ರಂದು ಬೀದರ್‌ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಸಹಕಾರ ಸಪ್ತಾಹವನ್ನು ಉದ್ಘಾಟಿಸಲಿದ್ದು, ಸರ್ಕಾರದ ಎಲ್ಲ ಸಚಿವರುಗಳು,ಶಾಸಕರುಗಳು, ಜನಪ್ರತಿನಿಧಿಗಳು, ಮುಖಂಡರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಸಹಕಾರ ರತ್ನ ಪ್ರಶಸ್ತಿ ಪ್ರದಾನ

ಸಹಕಾರ ಚಳವಳಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡು ವಿಶಿಷ್ಠ ಸೇವೆ ಸಲ್ಲಿಸಿದ ಸಹಕಾರ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಶೇಷ್ಠ ಸಹಕಾರಿಗಳನ್ನು ಗುರುತಿಸಿ ಸಹಕಾರ ರತ್ನ ಪ್ರಶಸ್ತಿ ನೀಡುತ್ತಾ ಬಂದಿದ್ದು, ಈ ಸಾಲಿನ ಸಹಕಾರ ರತ್ನ ಪ್ರಶಸ್ತಿಗಳನ್ನು ಬೀದರ್‌ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರದಾನ ಮಾಡುವರು ಎಂದು ಅವರು ಹೇಳಿದರು.

ನ. 14 ರಿಂದ 20 ರವರೆಗೂ ಈ ಸಹಕಾರ ಸಪ್ತಾಹದ ಉದ್ಘಾಟನೆ ಬೀದರ್‌ನಲ್ಲಿ ನಡೆಯಲಿದ್ದು, ಎರಡನೇ ದಿನದ ಸಪ್ತಾಹ ಕಾರ್ಯಕ್ರಮ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ಮೂರನೇ ದಿನ ರಾಚಯೂರು, ನಾಲ್ಕನೇ ದಿನ ಬೆಂಗಳೂರು, ಐದನೆ ದಿನ ಹಾವೇರಿ, ಆರನೇ ದಿನ ಕೋಲಾರ ಹಾಗೂ 20 ರಂದು ಸಮಾರೋಪ ಸಮಾರಂಭ ಶಿವಮೊಗ್ಗದಲ್ಲಿ ನಡೆಯಲಿದೆ ಎಂದರು.

ಈ ಸಹಕಾರ ಸಪ್ತಾಹದಲ್ಲಿ ಸಹಕಾರಿ ಮಾರಾಟ ಸಂಸ್ಕರಣೆ, ಶೇಖರಣೆ, ಸಾವಯವ ಕೃಷಿ ಮತ್ತು ಶೂನ್ಯ ಬಂಡಾವಳ ಕೃಷಿಯಲ್ಲಿ ಸಹಕಾರ ಸಂಘಗಳ ಪಾತ್ರ, ಸಹಕಾರ ಸಂಸ್ಥೆಗಳ ಮೂಲಕ ಮೌಲ್ಯವರ್ಧನೆ ಮತ್ತು ಬ್ರಾಂಡ್ ನಿರ್ಮಾಣ, ಸಾರ್ವಜನಿಕ ಖಾಸಗಿ ಸಹಕಾರಿ ಸಹಭಾಗಿತ್ವ ನಿರ್ಮಾಣ, ಸಹಕಾರ ಸಂಸ್ಥೆಗಳ ಮೂಲಕ ಸರ್ಕಾರಿ ಯೋಜನೆಗಳು ಮತ್ತು ಆದಾಯೋತ್ಪನ ಕುರಿತು ಜಾಗೃತಿ ಮೂಡಿಸುವುದು, ಯುವ ಜನ ಮಹಿಳಾ ಮತ್ತು ಅಬಲ ವರ್ಗಕ್ಕಾಗಿ ಸಹಕಾರ ಸಂಸ್ಥೆಗಳು ಸಹಕಾರ ಸಂಸ್ಥೆಗಳ ಮೂಲಕ ಕೌಶಲ್ಯ ತಾಂತ್ರಿಕತೆ ವೃದ್ಧಿಪಡಿಸುವುದು ಈ ವಿಷಯಗಳ ಬಗ್ಗೆ ವಿಚಾರಣ ಸಂಕೀರಣಗಳು ಎಲ್ಲೆಡೆ ನಡೆಯಲಿವೆ ಎಂದರು.

ರಾಜ್ಯ ಸರ್ಕಾರ ಸಹಕಾರಿ ಕ್ಷೇತ್ರಗಳ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡಿದೆ. ಕೃಷಿ ಸಾಲ, ಕೃಷಿಯೇತರ ಸಾಲ, ಹೈನುಗಾರಿಕೆ, ಪಟ್ಟಣ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಲಾಗಿದೆ. ಸಮ್ಮಿಶ್ರ ಸರ್ಕಾರ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂ,.ಗಳವರೆಗೆ ಮತ್ತು ಶೇ. 3 ರ ಬಡ್ಡಿ ದರದಲ್ಲಿ 10 ಲಕ್ಷ ರೂ.ಗಳವಗೆ ಕೃಷಿ ಸಾಲ ನೀಡುತ್ತಿದೆ. ಹೈನುಗಾರಿಕೆಗೂ ಲೀಟರ್ ಒಂದಕ್ಕೆ 5 ರೂ. ಸಹಾಯ ಧನ ನೀಡುತ್ತಿದೆ. ಜತೆಗೆ ರೈತರ 1 ಲಕ್ಷರೂ. ಸಾಲ ಮನ್ನಾ ಮಾಡಲಾಗಿದೆ ಎಂದು ಅವರು ಹೇಳಿದರು.

ಸಹಕಾರ ಇಲಾಖೆಯ ಮೂಲಕ ಗ್ರಾಮೀಣ ಮಹಿಳೆಯರು ಸ್ವಂತ ಉದ್ದಿಮೆಗಳನ್ನು ಸ್ಥಾಪಿಸಿ ಆರ್ಥಿಕವಾಗಿ ಬಲವರ್ಧನೆಗೊಳ್ಳಲು ಕಾಯಕ ಯೋಜನೆ ಹಾಗೂ ಪಟ್ಟಣ ಪ್ರದೇಶದ ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಬಡವರ ಬಂಧು ಯೋಜನೆಯನ್ನು ಶೀಘ್ರವೇ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಸಚಿವ ಬಂಡೆಪ್ಪ ಕಾಂಶಾಪೂರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಹಕಾರ ಇಲಾಖೆಯ ಮುಖ್ಯ ನಿಬಂಧಕ  ಅಯ್ಯಪ್ಪ, ರಾಜ್ಯ ಸಹಕಾರ ಮಹಾಮಂಡಳಿಯ ಅಧ್ಯಕ್ಷ ಎನ್. ಗಂಗಣ್ಣ, ವ್ಯವಸ್ಥಾಪಕ ನಿರ್ದೇಶಕ ಅರುಣ್‌ಕುಮಾರ್, ಸಹಕಾರ ಇಲಾಖೆಯ ಅಪರ ನಿಬಂಧಕರುಗಳಾದ ಕೆ.ಎಂ.ಆಶಾ, ವಿಶೇಷ ಕರ್ತವ್ಯಾಧಿಕಾರಿ ವೆಂಕಟಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Leave a Comment