ಗ್ರಾಮೀಣ ಸಮಸ್ಯೆಗಳ ಜೀವಂತ ಚಿತ್ರಣ

ಚಿತ್ರ: ಕಾನೂರಾಯಣ
ನಿರ್ದೇಶನ : ನಾಗಾಭರಣ
ತಾರಾಗಣ: ಡಾ.ವಿರೇಂದ್ರ ಹೆಗ್ಗಡೆ,ಸ್ಕಂದ ಅಶೋಕ್, ಸೋನುಗೌಡ, ದೊಡ್ಡಣ್ಣ,ಗಿರಿಜಾ ಲೋಕೇಶ್,ಕಡ್ಡಿಪುಡಿ ಚಂದ್ರು,ನೀನಾಸಂ ಅಶ್ವಥ್, ಸುಂದರ್‌ರಾಜ್, ಸುಂದರ್,ಕರಿ ಸುಬ್ಬು ಮತ್ತಿತರರು
ರೇಟಿಂಗ್: ***

ಹಳ್ಳಿಯ ರಾಜಕೀಯ,ಪಿತೂರಿ, ಸಂಚು ಸೇರಿದಂತೆ,ರೈತನ ಬದುಕು ಬವಣೆ,ಜೀವನ ಹೀಗೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ನೈಜತೆಗೆ ಹತ್ತಿರವಾಗುವ ಚಿತ್ರ “ಕಾನೂರಾಯಣ”.
ಬಡ್ಡಿ ವ್ಯವಹಾರದಿಂದ ಬಸವಳಿಗೆ ಮಂದಿಗೆ ಸ್ವಸಹಾಯ ಸಂಘವೊಂದೇ ಬದುಕಿಗೆ ದಾರಿ ಮತ್ತು ಸಮಾಜದಲ್ಲಿ ಮುಂದೆ ಬರಲು ಸಹಕಾರಿಯಾಗಲಿದೆ ಎನ್ನುವುದನ್ನು ಹೇಳಲು ನಿರ್ದೇಶಕ ಟಿ.ಎಸ್ ನಾಗಾಭರಣ, ಇಡಿ ಹಳ್ಳಿ ಬದುಕಿಗೆ ಕನ್ನಡಿ ಹಿಡಿದಿದ್ದಾರೆ.
ಕಾನೂರು ಎಂಬ ಹಳ್ಳಿಯ ಮುಗ್ದ ಜನರನ್ನು ಬಡ್ಡಿ ವ್ಯವಹಾರದ ಹೆಸರಲ್ಲಿ ವಂಚಿಸಿ, ಅವರಿಂದ ಆಸ್ತಿ ಪಾಸ್ತಿ ಮನೆ ಮಠ ಅಡವಿಟ್ಟುಕೊಳ್ಳುವ ಕುತಂತ್ರಿಗಳು ಒಂದೆಡೆಯಾದರೆ ಅಕ್ರಮ ಮದ್ಯ ಮಾರಾಟ, ಆ ಊರ ಜನರ ಬದುಕಿನ ಪಟಪಾಡಲುಗಳನ್ನು ತೆರೆದಿಟ್ಟಿದ್ದಾರೆ.
ಊರ ಜನರ ಉದ್ದಾರ ಮಾಡಲು ಹಳ್ಳಿಗೆ ಬರುವ ಸ್ವಸಹಾಯ ಸಂಘದ ಮೇಲ್ವಿಚಾರಕ ಕಿರಣ್ (ಸ್ಕಂದ)ಗೆ ಬಡ್ಡಿ ವ್ಯವಹಾರ ಮಾಡುವರಿಂದ ಹಿಡಿದು ಶಾಸಕನವರೆಗೂ ಅನೇಕ ಎಡರು ತೊಡರು. ಅದೇ ಹಳ್ಳಿಯ ಗೌರಿ(ಸೋನು ಗೌಡ) ಕುಡುಕ ಅಪ್ಪನನ್ನು ನಿಭಾಯಿಸುವ ಹೆಣ್ಣು ಮಗಳು. ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶ ಕಿರಣ್‌ನದು.
ಊರ ಜನರ ವಿರೋಧ ಕಟ್ಟಿಕೊಂಡು ಮಹಿಳೆಯರನ್ನು ಸಂಘಟಿಸಿ ಅವರಿಗೊಂದು ಆರ್ಥಿಕ ಸಬಲತೆ ನೀಡುವ ಕಿರಣ್ ಪ್ರಯತ್ನ ಕೈಗೂಡಿತು ಎನ್ನುವದೊರಳಗೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿನ ಅಕ್ರಮ ಉರುಳಿಗೆ ಬರುತ್ತದೆ. ಇಂತಹುದರಲ್ಲಿ ಎಲ್ಲವನ್ನು ಮೆಟ್ಟಿ ನಿಲ್ಲುತ್ತಾನೋ ಇಲ್ಲ ಮುಂದೇನಾಗುತ್ತದೆ ಎನ್ನುವುದು ಚಿತ್ರ ತಿರುಳು.
ಹಳ್ಳಿ ಸಮಸ್ಯೆಯನ್ನು ನಿರ್ದೇಶಕರು ನೆಪ ಮಾತ್ರಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲಿಯ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡಿದ್ದರೆ ನಿರ್ದೇಶಕ ನಾಗಾಭರಣ ಪ್ರಯತ್ನ ಸಫಲವಾಗುತ್ತಿತ್ತು.
ಮಹಿಳಾ ಶಕ್ತಿಗೆ ಮತ್ತಷ್ಟು ಬಲ ನೀಡುವ ಪಾತ್ರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರಹೆಗ್ಗಡೆ ಪಾತ್ರ ಇಡೀ ಚಿತ್ರಕ್ಕೆ ಜೀವಕಳೆ ತಂದುಕೊಟ್ಟಿದೆ.
ಸಿಕ್ಕ ಪಾತ್ರವನ್ನು ಸ್ಕಂದ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ಸೋನುಗೌಡ,ಜಾಹ್ನವಿ ಜ್ಯೋತಿ ಮನು ಹೆಗ್ಡೆ ಸಿಕ್ಕ ಪಾತ್ರಕ್ಕೆ ಜೀವ ತುಂಬಿದ್ದಾರೆ.
ವಾಸುಕಿ ವೈಭವ್ ಸಂಗೀತ, ಶ್ರೀನಿವಾಸ್ ರಾಮಯ್ಯ ಛಾಯಾಗ್ರಾಹಣ ಚಿತ್ರಕ್ಕಿದೆ.
_ಚಿಕ್ಕನೆಟಕುಂಟೆ ಜಿ.ರಮೇಶ್

Leave a Comment