ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಅಗತ್ಯ

ಮಧುಗಿರಿ, ಸೆ. ೧೦- ಕಳೆದ 5 ವರ್ಷಗಳಿಂದ ಜ್ಞಾನ ಸುರಭಿ ಚಾರಿಟಬಲ್ ಟ್ರಸ್ಟ್ ವತಿಯಿಂದ ರಾಜ್ಯಾದ್ಯಂತ ಹಲವು ಶಾಲೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿಕೊಂಡು ಬಂದಿದೆ. ಇದೇ ಪ್ರೇರಣೆಯಿಂದ ನಾವು ರಾಜ್ಯಮಟ್ಟದ ಕ್ವಿಜ್ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಟ್ರಸ್ಟ್‌ನ ಅಧ್ಯಕ್ಷೆ ಸಿ.ಎಂ. ರೇಣುಕ ತಿಳಿಸಿದರು.

ಪಟ್ಟಣದ ಟ್ರಸ್ಟ್ ಕಚೇರಿಯಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, 2018-19 ಸಾಲಿನ ಶೈಕ್ಷಣಿಕ ವರ್ಷದಲ್ಲಿ ಜ್ಞಾನ ಸುರಭಿ ಚಾರಿಟಬಲ್ ಟ್ರಸ್ಟ್ ರಾಜ್ಯ ಮಟ್ಟದ ಕ್ವಿಜ್ ಕಾರ್ಯಕ್ರಮವನ್ನು ವಿನೂತನ ರೀತಿಯಲ್ಲಿ ಸಜ್ಜುಗೊಳಿಸಿದೆ. ಈ ಕ್ವಿಜ್ ಕಾರ್ಯಕ್ರಮ ಉಚಿತವಾಗಿದ್ದು, ಈ ಕಾರ್ಯಕ್ರಮ ಗ್ರಾಮೀಣ ಹಂತದಿಂದ ರಾಜ್ಯಮಟ್ಟದವರೆಗೆ ನಡೆಸುತ್ತಿರುವುದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಪ್ರೋತ್ಸಾಹ ಹಾಗೂ ಅವರ ಪ್ರತಿಭೆಗೆ ಉತ್ತಮ ಮನ್ನಣೆ ಸಿಗಲು ಪ್ರಮುಖ ವೇದಿಕೆಯಾಗಿದೆ ಎಂದರು.

ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳು ಮತ್ತು ಅನುದಾನ ರಹಿತ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಈ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳವುದು ವಿದ್ಯಾರ್ಥಿಗಳ ಕಲಿಕೆಯ ದೃಷ್ಠಿಯಿಂದ ಮಹತ್ವವಾಗಿದೆ ಎಂದರು.

ಉಚಿತ ಪ್ರವೇಶ
ಈ ಕ್ವಿಜ್ ಕಾರ್ಯಕ್ರಮ ಉಚಿತವಾಗಿದ್ದು, ಕೇವಲ ಅರ್ಜಿ ಶುಲ್ಕ 25 ರೂ. ಮಾತ್ರ. ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸುವುದಾಗಿದೆ. ಅರ್ಜಿ ಶುಲ್ಕವನ್ನು ಹೊರತುಪಡಿಸಿ ಯಾವುದೇ ಹಂತದಲ್ಲಿ ಯಾವುದೇ ರೀತಿಯ ಶುಲ್ಕವನ್ನು ಸಂಗ್ರಹಿಸುವುದಿಲ್ಲ. ಈ ವೇದಿಕೆಯೂ ಕರ್ನಾಟಕ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ತೆರೆದ ಬಾಗಿಲಾಗಿದ್ದು, ಈ ಅವಕಾಶವನ್ನು ಸದುಪಯೋಗ ಪಡೆಯುವುದು ವಿದ್ಯಾರ್ಥಿಗಳ ಹಕ್ಕಾಗಿದೆ ಎಂದರು.

ಈ ಕ್ವಿಜ್ ಕಾರ್ಯಕ್ರಮ 2 ವಿಭಾಗಗಳಲ್ಲಿ ನಡೆಯಲಿದ್ದು, 3ನೇ ತರಗತಿಯಿಂದ 5ನೇ ತರಗತಿವರೆಗೆ ಜೂನಿಯರ್ ಹಂತ ಹಾಗೂ 6ನೇ ತರಗತಿಯಿಂದ 8ನೇ ತರಗತಿವರೆಗೆ ಸೀನಿಯರ್ ಹಂತವಾಗಿ ನಡೆಯಲಿದ್ದು, ವಿದ್ಯಾರ್ಥಿಗಳ ಬೌದ್ಧಿಕ ಮಟ್ಟದ ಆಧಾರದ ಮೇಲೆ ಈ ವಿಭಾಗವನ್ನು ಮಾಡಲಾಗಿದೆ ಎಂದರು.

ಈ ಕ್ವಿಜ್ ಕಾರ್ಯಕ್ರಮ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಹಂತದಲ್ಲಿ ನಡೆಯಲಿದೆ. ಜಿಲ್ಲಾ ಹಂತದ ಕ್ವಿಜ್‌ನಲ್ಲಿ ವಿಜೇತರಾದ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಅ0ತಿಮ ಹಂತದ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗವಹಿಸುವರು. ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ನೀಡಲಾಗುವುದು ಎಂದರು.
ಹೆಚ್ಚಿನ ಮಾಹಿತಿಗಾಗಿ ಮೊ: 9449292865, ವಾಟ್ಸಾಪ್: 9164585807, ವೆಬ್‌ಸೈಟ್ www.jnanasurabhi.in  www.jnanasurabhi.net ಸಂಪರ್ಕಿಸಬಹುದಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ನ ಕೆ. ವೇಣುಗೋಪಾಲರಾಜು, ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave a Comment