ಗ್ರಾಮೀಣರಲ್ಲಿ ಕಾನೂನು ಬಗ್ಗೆ ಅರಿವು ಮೂಡಿಸಿ

ಕೊರಟಗೆರೆ, ನ. ೧೪- ಭಾರತ ದೇಶದಲ್ಲಿ ಜಾರಿಗೆ ಬರುವಂತಹ ಕಾನೂನು ಸಲಹೆಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸಲು ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಸಿವಿಲ್ ನ್ಯಾಯಾಧೀಶರಾದ ವಿ.ಪ್ರಕಾಶ್ ತಿಳಿಸಿದರು.

ಪಟ್ಟಣದ ಸುಭಾಷ್ ಪದವಿ ಪೂರ್ವ ವಿಜ್ಞಾನ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಕಾನೂನು ಸೇವಾ ದಿನದ ಅಂಗವಾಗಿ ಏರ್ಪಡಿಸಿದ್ದ ಉಚಿತ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿದ್ದ ಪಂಚಾಯ್ತಿ ಕಟ್ಟೆಯ ಬದಲಾಗಿ ಬಡಜನರಿಗೆ ಕಾನೂನಿನ ನ್ಯಾಯ ಸುಲಭವಾಗಿ ಸಿಗುವ ಉದ್ದೇಶದಿಂದ ನ್ಯಾಯಾಲಯದ ಆವರಣದಲ್ಲಿ ರಾಜಿ ಸಂಧಾನಕ್ಕಾಗಿ ಮಧ್ಯಸ್ಥಿಕೆ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರತಿಯೊಬ್ಬರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ವಚ್ಚ ಭಾರತ ಅಭಿಮಾನ ಕಾರ್ಯಕ್ರಮಗಳು ನಡೆಸುತ್ತಿವೆ. ವಿದ್ಯಾರ್ಥಿಗಳು ತಮ್ಮ ಗ್ರಾಮದಲ್ಲಿನ ಜನರಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಸಲಹೆ ನೀಡಿ ಬಯಲು ಶೌಚಕ್ಕೆ ಕಡಿವಾಣ ಹಾಕಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಲಮೂತ್ರ ಮಾಡುವುದು ಕಾನೂನಿನ ಪ್ರಕಾರ ಅಪರಾದ ವಾಗುತ್ತದೆ ಎಂದರು.

ಸಂಪನ್ಮೂಲ ವ್ಯಕ್ತಿಯಾದ ವಕೀಲ ಕೆ.ಜೆ.ನಾಗರಾಜು ಮಾತನಾಡಿ, ದುರ್ಬಲರ ನ್ಯಾಯ ರಕ್ಷೆ ಕಾನೂನು ಪ್ರಾಧಿಕಾರದ ಪ್ರಥಮ ದೀಕ್ಷೆಯಾಗಿದೆ. ದುರ್ಬಲರಿಗೆ, ಬಡಜನರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವುದು ಕಾನೂನು ಪ್ರಾಧಿಕಾರ ಸೇವೆಯ ಮುಖ್ಯ ಉದ್ದೇಶವಾಗಿದೆ. ಬಡ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಪ್ರತಿ ವಿದ್ಯಾರ್ಥಿಗೆ ಒಂದು ವರ್ಷಕ್ಕೆ 9 ಸಾವಿರ ಹಣ ಖರ್ಚು ಮಾಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಸುಭಾಷ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಮಲ್ಲೇಶಯ್ಯ ಮಾತನಾಡಿ, ಯುವ ವಿದ್ಯಾರ್ಥಿಗಳಿಗೆ ಕಾನೂನಿನ ಜ್ಞಾನ ವಿಶಿಷ್ಟವಾದ ಶಕ್ತಿಯಾಗಿದೆ. ಸಾಹಿತ್ಯ ಮತ್ತು ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆ ನೀಡುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಾಜದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್, ವಕೀಲರಾದ ಬಿ.ಎ.ಪುಟ್ಟರಾಜು, ಕೆ.ಸಿ.ನಾಗರಾಜು, ಬಿ.ಎಚ್.ನಾಗೇಂದ್ರಪ್ಪ, ಟಿ.ಕೃಷ್ಣಮೂರ್ತಿ, ಮಂಜುಳದೇವಿ, ಸಂತೋಷಲಕ್ಷ್ಮಿ, ಸುಭಾಷ್ ಪದವಿಪೂರ್ವ ಕಾಲೇಜು ಅಧ್ಯಕ್ಷ ಗಂಗರಂಗಯ್ಯ, ಕಾರ್ಯದರ್ಶಿ ನಿರ್ಮಲಾ, ಉಪನ್ಯಾಸಕರು ಸಹನಾ, ಶಿಲ್ಪಾ, ಮಾರುತಿ, ರಂಗಣ್ಣ, ರಂಗರಾಜು ಮತ್ತಿತರರು ಉಪಸ್ಥಿತರಿದ್ದರು.

Leave a Comment