ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರ ಆರ್ಥಿಕ ಸ್ವಾವಲಂಬನೆ

ತುರುವೇಕೆರೆ, ನ. ೯- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ಹಮ್ಮಿಕೊಳ್ಳಲಾಗುತ್ತಿರುವ ವಯಸ್ಕರ ಶಿಕ್ಷಣ, ಆರೋಗ್ಯ ಕಾರ್ಯಕ್ರಮಗಳು, ಸ್ವ-ಉದ್ಯೋಗದಡಿ ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಇನ್ನಿತರ ಕಾರ್ಯಕ್ರಮಗಳು ಮಹಿಳೆಯರಿಗೆ ಅನುಕೂಲವಾಗಿರುವುದರಿಂದ ಹಲವಾರು ಮಹಿಳೆಯರು ಇಂತಹ ಕಾರ್ಯಕ್ರಮಗಳಿಂದ ಪ್ರೇರಿತರಾಗಿ ಸ್ವ-ಉದ್ಯೋಗ ಕೈಗೊಂಡು ಆರ್ಥಿಕ ಸ್ವಾವಲಂಬನೆಯೊಂದಿಗೆ ಕುಟುಂಬದ ಪ್ರಗತಿಗೂ ಕಾರಣೀಭೂತರಾಗಿದ್ದಾರೆ ಎಂದು ಧರ್ಮಸ್ಥಳ ತಾಲ್ಲೂಕು ಯೋಜನಾಧಿಕಾರಿ ಧರ್ಣಪ್ಪ ಮೂಲ್ಯ ತಿಳಿಸಿದರು.

ತಾಲ್ಲೂಕಿನ ಗೊಟ್ಟಿಕೆರೆ ಗ್ರಾಮದ ಸಮುದಾಯಭವನ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಕೊಂಡಜ್ಜಿ ವಲಯದ ಹೇಮಾವತಿ ಜ್ಞಾನವಿಕಾಸ ಕೇಂದ್ರದ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಧರ್ಮಸ್ಥಳದ ವಿರೇಂದ್ರ ಹೆಗ್ಗಡೆಯವರ ಧರ್ಮಪತ್ನಿ ಹೇಮಾವತಿ ಅಮ್ಮನವರ ಕನಸಿನ ಕೂಸಾದ ಜ್ಞಾನವಿಕಾಸ ಕಾರ್ಯಕ್ರಮವೂ ಮಹಿಳೆಯರ ಸಂಪೂರ್ಣ ಪ್ರಗತಿಗೆ ಉತ್ತಮ ವೇದಿಕೆಯನ್ನು ಒದಗಿಸಿಕೊಟ್ಟಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ತುರುವೇಕೆರೆ ತಾಲ್ಲೂಕಿನ ಆಯುರ್ವೇದಿಕ ವೈದ್ಯಾಧಿಕಾರಿ ಲೋಕೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಎದುರಾಗುತ್ತಿರುವ ಸಣ್ಣ ಪುಟ್ಟ ಖಾಯಿಲೆಗಳಿಗೆ ಅಂಗೈಯಲ್ಲೇ ಮನೆ ಮದ್ದು ಇದೆ. ಇದನ್ನು ಉಪಯೋಗಿಸಿಕೊಂಡು ಸಣ್ಣಪುಟ್ಟ ಖಾಯಿಲೆಗಳನ್ನು ಗುಣಮುಖ ಮಾಡಿಕೊಳ್ಳಬೇಕು. ಮನೆ ಸೇರಿದಂತೆ ಮನೆಯ ಸುತ್ತಮುತ್ತ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ವೈಯಕ್ತಿಕ ಶುಚಿತ್ವದ ಕಡೆ ಹೆಚ್ಚಿನ ಗಮನವನ್ನು ನೀಡುವುದು ಮುಖ್ಯ ಎಂದು ಮಹಿಳೆಯರಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯೆ ರಂಗಮ್ಮ, ಗ್ರಾಮದ ಮುಖಂಡರಾದ ಜೆ.ಸಿ.ಶಂಕರೇಗೌಡ, ಕೃಷ್ಣಪ್ಪ, ಕಾಂತರಾಜು, ಗೋವಿಂದಪ್ಪ, ಕೃಷಿ ಮೇಲ್ವಿಚಾರಕರಾದ ಅಶೋಕ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಚಿಕ್ಕದೇವಮ್ಮ, ವಲಯ ಮೇಲ್ವಿಚಾರಕಿ ಮಂಜುಳ, ಸೇವಾಪ್ರತಿನಿಧಿ ಗೀತಾ, ಪ್ರಗತಿಬಂಧು ಮತ್ತು ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು

Leave a Comment