ಗ್ರಾಮಾಂತರ ಕ್ಷೇತ್ರ : ಟಿಕೆಟ್ ವಂಚನೆ-ಅಸಮಾಧಾನ

ರವಿ ಪಾಟೀಲ್ ಜಾದಳ ಸೇರ್ಪಡೆ ಸಾಧ್ಯತೆ
ರಾಯಚೂರು.ಏ.16- ಗ್ರಾಮಾಂತರ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಅಸಮಾಧಾನಕ್ಕೆ ಬಂಡಾಯ ಸಾರಿದ ರವಿ ಪಾಟೀಲ್ ಅವರು ಜಾದಳ ಸೇರ್ಪಡೆಗೆ ಸಿದ್ಧತೆ ನಡೆಸಿದ್ದಾರೆ.
ಇಂದು ಅವರ ಮಂತ್ರಿ ಗಾರ್ಡನ್ ಕಛೇರಿಯಲ್ಲಿ ಬೆಂಬಲಿಗರ ಸಭೆ ಕರೆದು ಚರ್ಚಿಸಿದರು. ಗ್ರಾಮಾಂತರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಸಂಸದ ಬಿ.ವಿ.ನಾಯಕ ಹಾಗೂ ರವಿ ಬೋಸರಾಜು ಅವರ ಪಟ್ಟುನಿಂದಾಗಿ ರವಿ ಪಾಟೀಲ್ ಅವರಿಗೆ ಟಿಕೆಟ್ ಕೈ ತಪ್ಪಿತ್ತು. ಈ ಚುನಾವಣೆಯಲ್ಲಿ ಕಣಕ್ಕಿಳಿಯುವ ಉದ್ದೇಶದಿಂದ ಜಾದಳ ಪಕ್ಷಕ್ಕೆ ಸೇರಲು ನಿರ್ಣಯಿಸಿದ್ದಾರೆ ಎನ್ನಲಾಗಿದೆ.
ಇಂದು ಔಪಚಾರಿಕವಾಗಿ ಅವರ ಬೆಂಬಲಿಗರನ್ನು ಕರೆದು ಈ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದರು. ಬಹುತೇಕರು ಕಾಂಗ್ರೆಸ್ ತೊರೆದು ಜಾದಳ ಸೇರುವಂತೆ ಸಲಹೆ ನೀಡಿದರು ಎನ್ನಲಾಗಿದೆ. ಈಗಾಗಲೇ ರವಿ ಪಾಟೀಲ್ ಅವರು, ಜಾದಳ ಮುಖಂಡರೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಗ್ರಾಮಾಂತರ ಕ್ಷೇತ್ರದ ಟಿಕೆಟ್ ರವಿ ಪಾಟೀಲ್ ಅವರಿಗೆ ನೀಡಲು ಜಾದಳ ಪಕ್ಷ ಸಿದ್ಧವಾಗಿದೆಂದು ಹೇಳಲಾಗುತ್ತಿದೆ.
ಜಾರಕಿಹೊಳಿ ಅವರ ಸಂಬಂಧಿಕರಾದ ರವಿ ಪಾಟೀಲ್ ಅವರಿಗೆ ಟಿಕೆಟ್ ದೊರೆಕಿಸಿಕೊ‌ಡಲು ಕೊನೆ ಕ್ಷಣದವರೆಗೂ ತೀವ್ರ ಪ್ರಯತ್ನ ನಡೆಸಲಾಯಿತು. ಆದರೆ. ಬಣ ರಾಜಕೀಯದ ಜಿದ್ದಾಜಿದ್ದಿ ಅವರಿಗೆ ಟಿಕೆಟ್ ಕೈ ತಪ್ಪುವಂತೆ ಮಾ‌ಡಿತು. ಇದರಿಂದ ತೀವ್ರ ಅಸಮಾಧಾನಗೊಂಡ ಅವರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ. ಇಂದು ಡಿಸಿಸಿ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಅವರು, ನಂತರ ತಮ್ಮ ಮಂತ್ರಿ ಗಾರ್ಡನ್ ಕಛೇರಿಯಲ್ಲಿ ಬೆಂಬಲಿಗರ ಸಭೆ ಕರೆದು ಚರ್ಚೆ ನಡೆಸಿದರು. ಬಹುಶಃ ಮುಂದಿನ ಎರಡು ದಿನಗಳಲ್ಲಿ ಜಾದಳ ಪಕ್ಷ ಅಭ್ಯರ್ಥಿಯಾಗಿ ಗ್ರಾಮಾಂತರ ಕ್ಷೇತ್ರಕ್ಕೆ ಸ್ಪರ್ಧಿಸುವ ಸಾಧ್ಯತೆಗಳು ವ್ಯಕ್ತವಾಗಿವೆಂದು ಹೇಳಲಾಗುತ್ತಿದೆ.

Leave a Comment