ಗ್ರಾಮಸಭೆ ತೀರ್ಮಾನ ತಿದ್ದಿ ಕಾಮಗಾರಿಗೆ ಅನುಮೋದನೆ: ಸದಸ್ಯರ ಆರೋಪ

ಹುಳಿಯಾರು, ಮಾ. ೧೪- ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಗೆ ಗ್ರಾಮ ಸಭೆಯಲ್ಲಿ ತೀರ್ಮಾನವಾಗಿದ್ದ ಕಾಮಗಾರಿ ಪಟ್ಟಿಯನ್ನು ತಿದ್ದಿ ಹಿಂದಿನ ಪಿಡಿಓ ಭೈರಪ್ಪ ಅವರು ತಮ್ಮಿಷ್ಟದ ಕಾಮಗಾರಿಗಳ ಪಟ್ಟಿ ಮಾಡಿ ಅಪ್ರೋವಲ್ ಗೆ ಜಿ.ಪಂ.ಗೆ ಕಳುಹಿಸಿಕೊಡಲಾಗಿದೆ ಎಂದು ಹುಳಿಯಾರು ಗ್ರಾ.ಪಂ. ಸದಸ್ಯರು ಗಂಭೀರ ಆರೋಪ ಮಾಡಿದರು.

ಇಲ್ಲಿನ ಗ್ರಾ.ಪಂ. ಕಛೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಹಿಂದಿನ ಸಭೆಯ ನಿರ್ಣಯ ಓದಿ ದಾಖಲು ಮಾಡುವಾಗ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯ ಕಾಮಗಾರಿ ಅನುಮೋದನೆಗೆ ಕಳುಹಿಸಿರುವ ಪಟ್ಟಿ ನೋಡಿದರೆ ಅಚ್ಚರಿ ಎನ್ನುವಂತೆ ಗ್ರಾಮ ಸಭೆಯಲ್ಲಿ ತೀರ್ಮಾನವಾದ ಕಾಮಗಾರಿಗಳು ಇರಲಿಲ್ಲ. ಆಗ ಆಕ್ರೋಶಗೊಂಡ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಗ್ರಾ.ಪಂ. ಸದಸ್ಯ ಎಲ್.ಆರ್. ಚಂದ್ರಶೇಖರ್ ಮಾತನಾಡಿ, ಗ್ರಾಮ ಸಭೆಯಲ್ಲಿ ನಿರ್ಣಯವನ್ನು ರಾಜ್ಯದ ಮುಖ್ಯಮಂತ್ರಿಗಳೇ ಬದಲಾಯಿಸಲು ಅವಕಾಶವಿಲ್ಲ. ಅಷ್ಟರಮಟ್ಟಿಗೆ ಗ್ರಾಮ ಸಭೆಗೆ ಮಹತ್ವವಿದೆ. ಆದರೆ ಪಿಡಿಓ ಅವರು ಕಾಮಗಾರಿ ಪಟ್ಟಿಯನ್ನು ಬದಲಾಯಿಸುವ ಮೂಲಕ ಗ್ರಾಮ ಸಭೆಗೆ ಅವಮಾನಿಸಿದ್ದಾರೆ. ಇದು ಇಡೀ ಊರಿಗೆ ಆದ ಅವಮಾನವಾಗಿದ್ದು, ಪಿಡಿಓ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಮತ್ತೋರ್ವ ಸದಸ್ಯ ಕಾಯಿಕುಮಾರ್ ಮಾತನಾಡಿ, ಮುಖ್ಯಮಂತ್ರಿ ಯೋಜನೆಯಲ್ಲಿ ನಮ್ಮ ನಮ್ಮ ಬ್ಲಾಕ್‌ಗಳಲ್ಲಿ ಕಾಮಗಾರಿ ಮಾಡುವುದಾಗಿ ಈಗಾಗಲೇ ಹೇಳಿಕೊಂಡು ತಿರುಗಾಡುತ್ತಿದ್ದೇವೆ. ಆದರೆ ನಾವು ಬರೆಸಿರುವ ಕಾಮಗಾರಿಗಳೆ ಅಪ್ರೋವಲ್ಗೆ ಕಳುಹಿಸಿರುವ ಪಟ್ಟಿಯಲ್ಲಿ ಇಲ್ಲದಾಗಿದ್ದು, ಅನುಮೋದನೆ ಸಿಕ್ಕ ಬಳಿಕ ನಮ್ಮ ಬ್ಲಾಕ್‌ನ ನಿವಾಸಿಗಳಿಗೆ ಏನುತ್ತರ ಕೊಡುವುದು ಎಂದು ಪ್ರಶ್ನಿಸಿ ಗ್ರಾಮ ಸಭೆಯ ನಿರ್ಣಯ ಮುಂದಿಟ್ಟುಕೊಂಡು ಅದರಂತೆ ಮತ್ತೊಂದು ಪಟ್ಟಿ ಕಳುಹಿಸುವಂತೆ ಸಲಹೆ ನೀಡಿದರು.

ಹುಳಿಯಾರು ಗ್ರಾಮ ಪಂಚಾಯ್ತಿ ಪಟ್ಟಣ ಪಂಚಾಯ್ತಿ ಮಾಡುವ ಸಂಬಂಧ ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶಕೊಟ್ಟಿದ್ದು, ಈ ಸಂಬಂಧ ರಾಜ್ಯ ಪತ್ರದಲ್ಲಿ ಪ್ರಕಟಣೆ ಹೊರಡಿಸಲಾಗಿತ್ತು. ಇದನ್ನು ಸಾರ್ವಜನಿಕರ ಗಮನಕ್ಕೆ ತರುವುದಿರಲಿ ಗ್ರಾ.ಪಂ. ಸದಸ್ಯರಿಗೂ ಸಹ ತಿಳಿಸದೆ ಗೌಪ್ಯವಾಗಿಟ್ಟು ದಾಖಲೆಗೆನ್ನುವಂತೆ ಒಂದೆರಡು ನಿಮಿಷ ಸೂಚನಾ ಫಲಕದಲ್ಲಿ ಪ್ರಕಟಿಸಿ ಪೋಟೋ ತೆಗೆದಿದ್ದಾರೆ. ಇದು ಗ್ರಾ.ಪಂ. ಸದಸ್ಯರಿಗೆ ಮಾಡಿರುವ ಅವಮಾನವಾಗಿದ್ದು, ಈ ಸಂಬಂಧ ಪಿಡಿಓ ಮೇಲೆ ಕ್ರಮ ಜರುಗಿಸುವಂತೆ ಗ್ರಾ.ಪಂ. ಸದಸ್ಯ ಹೇಮಂತ್ ಆಗ್ರಹಿಸಿದರು.

ಗ್ರಾ.ಪಂ. ವ್ಯಾಪ್ತಿಯ ಹುಣಸೆಮರ, ಶೌಚಾಲಯ ಶುಲ್ಕ ವಸೂಲಿ, ಸಂತೆ, ಫುಟ್‌ಫಾತ್ ಸುಂಕ ವಸೂಲಿಯನ್ನು ಮಾ. 24 ರಂದು  ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸದಸ್ಯ ಚಂದ್ರಶೇಖರ್ ಅವರು ಸಾರ್ವಜನಿಕ ಶೌಚಾಲಯ ತೀರ ಹಾಳಾಗಿದ್ದು, ಮೊದಲು ದುರಸ್ಥಿ ಮಾಡಿ ಹರಾಜು ಹಾಕುವಂತೆ ಸೂಚಿಸಿದರು.

ಸದಸ್ಯ ಹೇಮಂತ್ ಕುಮಾರ್ ಅವರು ಹೊರಗಿನ ಗುತ್ತಿಗೆದಾರರಿಗೆ ಮಾಹಿತಿ ತಿಳಿಸುವ ಸಲುವಾಗಿ ಪ್ರಮುಖ ಪತ್ರಿಕೆಗಳಿಗೆ ಜಾಹೀರಾತು ನೀಡಿ ನಂತರ ಹರಾಜು ಮಾಡಿ ಎಂದರು.

ಹುಳಿಯಾರು ಗ್ರಾ.ಪಂ. 13 ಬ್ಲಾಕ್‌ಗಳ ದೊಡ್ಡ ಗ್ರಾಮ ಪಂಚಾಯ್ತಿಯಾಗಿದ್ದು, ಹಾಲಿ ಬಂದಿರುವ 19 ಮನೆಗಳನ್ನು ಹಂಚಿಕೆ ಮಾಡುವುದು ಗ್ರಾ.ಪಂ. ಸದಸ್ಯರಿಗೆ ಕಷ್ಟದಾಯಕ. ಹಾಗಾಗಿ ಕನಿಷ್ಟ ಬ್ಲಾಕ್‌ಗೆ 2 ರಂತೆ ಹೆಚ್ಚುವರಿ ಮನೆ ತರಿಸಿಕೊಂಡು ಫಲಾನುಭವಿಗಳ ಆಯ್ಕೆ ಮಾಡುವುದು ಒಳಿತು ಎಂದು ಸದಸ್ಯ ವೆಂಕಟೇಶ್ ತಿಳಿಸಿದರು. ಗ್ರಾ.ಪಂ. ಸದಸ್ಯರ ಗೌರವಧನವನ್ನೂ ಚೆಕ್ ಮೂಲಕ ಪಡೆದಿರುವುದೇ ಅಪರಾಧ ಎನ್ನುವಂತಾಗಿದ್ದು, ನಮ್ಮಗಳ ಮೇಲೆ ಪ್ರಕರಣ ದಾಖಲಾಗಿದೆ. ಹಾಗಾಗಿ ಇನ್ನು ಮುಂದೆ ನಗದು ಮೂಲಕವೇ ಗೌರವ ಧನ ನೀಡುವಂತೆ ಗ್ರಾ.ಪಂ. ಸದಸ್ಯೆ ಪುಟ್ಟಿಬಾಯಿ ಹೇಳಿದರು.

ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಗೀತಾಪ್ರದೀಪ್, ಉಪಾಧ್ಯಕ್ಷ ಗಣೇಶ್, ಪಿಡಿಓ ತುಕ್ಯಾನಾಯ್ಕ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Leave a Comment