ಗ್ರಾಪಂ ಸದಸ್ಯನಿಂದ ಲೈಂಗಿಕ ಕಿರುಕುಳ

ಆರೋಪಿ ಪರಾರಿ
ಉಡುಪಿ, ಆ.೭- ಕಾಲೇಜ್ ವಿದ್ಯಾರ್ಥಿನಿಯೋರ್ವಳ ಹಿಂದೆ ಬಿದ್ದ ಗ್ರಾಪಂ ಸದಸ್ಯ ಆಕೆಯ ಜೊತೆ ಅಶ್ಲೀಲ ಸಂಭಾಷಣೆ ನಡೆಸಿದ್ದಲ್ಲದೆ ಸಾರ್ವಜನಿಕ ಪ್ರದೇಶದಲ್ಲಿ ತಡೆದು ನಿಲ್ಲಿಸಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಹಿರಿಯಡ್ಕ ಠಾಣಾ ವ್ಯಾಪ್ತಿಯ ಬೈರಂಪಳ್ಳಿ ಎಂಬಲ್ಲಿ ನಡೆದಿದೆ. ಘಟನೆಯ ಕುರಿತು ಪೊಲೀಸ್ ದೂರು ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. ಬೈರಂಪಳ್ಳಿ ಪಂ. ಸದಸ್ಯ ಪ್ರದೀಪ್ ಶೆಟ್ಟಿ ಪ್ರಕರಣದ ಆರೋಪಿಯಾಗಿದ್ದಾನೆ.
ಘಟನೆಯ ವಿವರ:
ಬೈರಂಪಳ್ಳಿ ನಿವಾಸಿ ೧೯ರ ಹರೆಯದ ಯುವತಿ ಕೋಟೇಶ್ವರದ ಕಾಲೇಜೊಂದರಲ್ಲಿ ಏವಿಯೇಶನ್ ಕೋರ್ಸ್ ಮಾಡುತ್ತಿದ್ದು ಈಕೆ ಪ್ರತಿನಿತ್ಯ ಕಾಲೇಜ್‌ಗೆ ಹೋಗಲೆಂದು ದೂಪದಕಟ್ಟೆ ಬಸ್ ನಿಲ್ದಾಣದಲ್ಲಿ ಬಸ್ ಕಾಯುತ್ತಿದ್ದಾಗ ಗ್ರಾಪಂ ಸದಸ್ಯ ಪ್ರದೀಪ್ ಶೆಟ್ಟಿ ಬೈಕ್‌ನಲ್ಲಿ ಬಂದು ಪರಿಚಯದ ನೆಲೆಯಲ್ಲಿ ಮಾತಾಡುತ್ತಿದ್ದ ಎನ್ನಲಾಗಿದೆ. ಯುವತಿಯೂ ಆತನ ಪರಿಚಯವಿದ್ದುದರಿಂದ ಮಾತಾಡುತ್ತಿದ್ದಳು. ಇದನ್ನೇ ಸಲುಗೆಯಾಗಿ ತೆಗೆದುಕೊಂಡಿದ್ದ ಆರೋಪಿ ಆಕೆಯ ಬಳಿ ಮೊಬೈಲ್ ನಂಬ್ರವನ್ನು ಪಡೆದುಕೊಂಡು ಮೆಸೇಜ್, ಕಾಲ್ ಮಾಡುತ್ತಿದ್ದ ಎನ್ನಲಾಗಿದೆ. ಇಷ್ಟಕ್ಕೇ ಸುಮ್ಮನಿರದ ಆರೋಪಿ ಆಕೆಯ ಹಿಂದೆ ಬಿದ್ದು ಸಾರ್ವಜನಿಕ ಸ್ಥಳಗಳಲ್ಲಿ ಹಿಂಬಾಲಿಸುತ್ತಿದ್ದುದಲ್ಲದೆ ಮಾನಕ್ಕೆ ಕುಂದುಂಟಾಗುವ ರೀತಿ ವ್ಯವಹರಿಸುತ್ತಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ತನ್ನ ಜೊತೆ ಬರಬೇಕು ಎಂದು ಒತ್ತಾಯಪಡಿಸಿ ಬಸ್ ನಿಲ್ದಾಣದಲ್ಲಿ ಕೈಹಿಡಿದೆಳೆದು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಯುವತಿಯು ಈ ವಿಚಾರ ಮನೆಯಲ್ಲಿ ತಿಳಿದರೆ ತನ್ನ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂದು ಸುಮ್ಮನಿದ್ದು, ಇದನ್ನೇ ಅವಕಾಶ ಎಂದುಕೊಂಡ ಆರೋಪಿ ಮತ್ತೆ ಮತ್ತೆ ಕರೆ, ಮೆಸೇಜ್ ಮಾಡಿ ಆಕೆಯ ಬಳಿ ಅಶ್ಲೀಲವಾಗಿ ವರ್ತಿಸುತ್ತಿದ್ದ ಎಂದು ತಿಳಿದುಬಂದಿದೆ. ಕೊನೆಗೆ ಬೇರೆ ದಾರಿಯಿಲ್ಲದೆ ಮನೆಮಂದಿಯಿಲ್ಲಿ ನಡೆದಿರುವ ಘಟನೆಗಳನ್ನು ವಿವರಿಸಿದ್ದು ಅವರ ಮೂಲಕ ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರದೀಪ್ ಶೆಟ್ಟಿಗೆ ಮದುವೆಯಾಗಿದ್ದು ಇಬ್ಬರು ಮಕ್ಕಳೂ ಇದ್ದಾರೆ. ಈ ಮಧ್ಯೆ ಆರೋಪಿಯ ಬಂಧನಕ್ಕೆ ಒತ್ತಾಯಿಸಿ ಸ್ಥಳೀಯ ಕುಲಾಲ ಸಂಘಟನೆಗಳು ಪೊಲೀಸ್ ಅಧಿಕಾರಿಗಳಲ್ಲಿ ಒತ್ತಡವನ್ನೂ ಹೇರಿವೆ ಎಂದು ತಿಳಿದುಬಂದಿದೆ. ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ.

Leave a Comment