ಗ್ರಾಂಡ್‌ಹೋಮ್‌ ಅವರನ್ನು ಶ್ಲಾಘಿಸಿದ ವಿಲಿಯಮ್ಸನ್‌

ಬರ್ಮಿಂಗ್‌ಹ್ಯಾಮ್‌, ಜೂ 20 – ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಗೆಲುವಿಗೆ ಹೆಗಲುಕೊಟ್ಟ ಕಾಲಿನ್‌ ಡಿ ಗ್ರಾಂಡ್‌ಹೋಮ್‌ ಅವರನ್ನು ನ್ಯೂಜಿಲೆಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಶ್ಲಾಘಿಸಿದ್ದಾರೆ.

ಬುಧವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ 242 ರನ್ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ 48.3 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತ್ತು. ಪಂದ್ಯದ ಗೆಲುವಿನಲ್ಲಿ ಪ್ರಧಾನ ಪಾತ್ರವಹಿಸಿದ ನಾಯಕ ಕೇನ್‌ ವಿಲಿಯಮ್ಸನ್‌ 106 ರನ್‌ ಗಳಿಸಿದರು. ಇವರಿಗೆ ಸಾಥ್‌ ನೀಡಿದ ಕಾಲಿನ್‌ ಗ್ರಾಂಡ್‌ಹೋಮ್‌ 47 ಎಸೆತಗಳಲ್ಲಿ 60 ರನ್‌ ಸಿಡಿಸಿ ತಂಡಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರು. ಕೇನ್‌ ವಿಲಿಯಮ್ಸನ್‌ ಹಾಗೂ ಗ್ರಾಂಡ್‌ಹೋಮ್‌ ಜೋಡಿಯು ಆರನೇ ವಿಕೆಟ್‌ಗೆ 91 ರನ್‌ ಗಳಿಸಿತು.

ಪಂದ್ಯದ ಬಳಿಕ ಮಾತನಾಡಿದ ಕೇನ್‌ ವಿಲಿಯಮ್ಸನ್‌, ಕಾಲಿನ್‌ ಗ್ರಾಂಡ್‌ಹೋಮ್‌ ಅದ್ಭುತ ಬ್ಯಾಟಿಂಗ್‌ ಮಾಡಿದರು. ಆಫ್ರಿಕಾ ಮಾರಕ ದಾಳಿಯನ್ನು ಮೆಟ್ಟಿ ನಿಂತರು. ತನ್ನ ಶೈಲಿಯನ್ನು ಲೀಲಾಜಾಲವಾಗಿ ಬ್ಯಾಟ್‌ ಅನ್ನು ಬೀಸಿದರು. ಅವರು ಗಳಿಸಿದ 60 ರನ್‌ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದೆ. ಹಾಗಾಗಿ ಪಂದ್ಯದ ಗೆಲುವಿನ ಶ್ರೇಯ ಅವರಿಗೂ ಸಲ್ಲಬೇಕು ಎಂದು ತಿಳಿಸಿದರು.

ಈ ಪಂದ್ಯದ ಗೆಲುವಿನೊಂದಿಗೆ ನ್ಯೂಜಿಲೆಂಡ್‌ ಒಟ್ಟು ಒಂಬತ್ತು ಅಂಕಗಳನ್ನು ಕಲೆ ಹಾಕಿದೆ. ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಅಲಂಕರಿಸಿದೆ. ಮುಂದಿನ ಪಂದ್ಯ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಶನಿವಾರ ನಡೆಯಲಿದೆ. ನ್ಯೂಜಿಲೆಂಡ್‌ ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಹಾಗೂ ಭಾರತದ ವಿರುದ್ಧ ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು.

Leave a Comment