ಗ್ರಂಥಾಲಯಕ್ಕೆ ಬೆಂಕಿ: ದಿನಪತ್ರಿಕೆಗಳು ಭಸ್ಮ

ಕೊರಟಗೆರೆ, ಫೆ. ೧೧- ದುಷ್ಕರ್ಮಿಗಳು ಗ್ರಂಥಾಲಯದ ಕಟ್ಟಡದ ಕಿಟಕಿಯಿಂದ ಗ್ರಂಥಾಲಯಕ್ಕೆ ಬೆಂಕಿ ಹಚ್ಚಿದ ಪರಿಣಾಮ ಗ್ರಂಥಾಲಯದ ಕೊಠಡಿಯಲ್ಲಿದ್ದ ದಿನ ಪತ್ರಿಕೆಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಪಟ್ಟಣದ ತಾಲ್ಲೂಕು ಗ್ರಂಥಾಲಯದಲ್ಲಿ ನಡೆದಿದೆ.

ಪಟ್ಟಣದ ಅಂಬೇಡ್ಕರ್ ಭವನದ ಕಟ್ಟಡದಲ್ಲಿರುವ ತಾಲ್ಲೂಕು ಗ್ರಂಥಾಲಯ ಶಾಖೆಯಲ್ಲಿ ಸಿಗರೇಟು ಸೇದಿದ ನಂತರ ಬೆಂಕಿಯ ಕಿಡಿಯನ್ನು ಕಿಟಕಿಯ ಕಿಂಡಿಯೊಳಗೆ ಹಾಕಿದ್ದಾರೆ. ಬೆಂಕಿಯ ಕಿಡಿಯಿಂದ ಗ್ರಂಥಾಲಯದ ಚಿಕ್ಕ ಕೊಠಡಿಯಲ್ಲಿದ್ದ ದಿನ ಪತ್ರಿಕೆಗಳು ಸುಟ್ಟು ಹೋಗಿದ್ದು, ಸಾವಿರಾರು ಪುಸ್ತಕಗಳು ಉಳಿದುಕೊಂಡಿವೆ. ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಒಟ್ಟು 4 ಲಕ್ಷಕ್ಕೂ ಅಧಿಕ ಮೌಲ್ಯದ 35 ಸಾವಿರಕ್ಕೂ ಅಧಿಕ ಕಥೆ, ಕಾದಂಬರಿ, ಸಾಹಿತ್ಯ, ಶೈಕ್ಷಣಿಕ ಪುಸ್ತಕ, ಸಾಮಾನ್ಯ ಜ್ಞಾನದ ಪುಸ್ತಕಗಳಿವೆ. ಕೊಠಡಿಯಲ್ಲಿ ಹಚ್ಚಿದ ಬೆಂಕಿ ನಂದಿ ಹೋಗಿರುವ ಪರಿಣಾಮ ದೊಡ್ಡ ಕೊಠಡಿಯಲ್ಲಿದ್ದ ಲಕ್ಷಾಂತರ ಮೌಲ್ಯದ ಪುಸ್ತಕಗಳು ಬೆಂಕಿಯಿಂದ ಪಾರಾಗಿವೆ.

ಈ ಬಗ್ಗೆ ಗ್ರಂಥಾಲಯದ ಸಹಾಯಕ ನಾಗರಾಜು ಮಾತನಾಡಿ, ಗ್ರಂಥಾಲಯದ ಕಿಟಕಿಯಿಂದ ಕಿಡಿಗೇಡಿಗಳು ಬೆಂಕಿಯ ಕಿಡಿ ಎಸೆದಿರುವ ಪರಿಣಾಮ ದಿನಪತ್ರಿಕೆಗಳು ಸುಟ್ಟು ಹೋಗಿವೆ. ನಮ್ಮ ಜಿಲ್ಲಾ ಕೇಂದ್ರದ ಗ್ರಂಥಾಲಯದ ಉಪ ನಿರ್ದೇಶಕರಿಗೆ ಮಾಹಿತಿ ನೀಡಿದ್ದೇನೆ. ಗ್ರಂಥಾಲಯಕ್ಕೆ ಭದ್ರತೆ ನೀಡುವಂತೆ ಪೊಲೀಸ್ ಠಾಣೆಗೂ ಮನವಿ ಮಾಡಲಾಗಿದೆ ಎಂದರು.

Leave a Comment