ಗ್ಯಾಸ್ ಸಿಲಿಂಡರ್‌ ರೀ ಫಿಲ್ಲಿಂಗ್ ನಾಲ್ವರ ಸೆರೆ

ಬೆಂಗಳೂರು, ಜ. ೨೨- ಗ್ಯಾಸ್ ಸಿಲಿಂಡರ್‌ಗಳನ್ನು ರೀ ಫಿಲ್ಲಿಂಗ್ ಮಾಡಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 222 ಸಿಲಿಂಡರ್‌ಗಳು ಹಾಗೂ ಆಟೋವನ್ನು ವಶಪಡಿಸಿಕೊಂಡಿದ್ದಾರೆ.
ಆರ್‌ಟಿ ನಗರದ ಮೊಹ್ಮದ್ ಮುಜಾಷ್ ಅಲಿಯಾಸ್ ಚೌಧರಿ (62), ಚಾಮುಂಡಿ ನಗರದ ರಫೀಕ್ (35), ಕಿಶೋರ್ (24), ಸೀತಪ್ಪ ಲೇಔಟ್‌ನ ಹರ್ಫತ್ ಬೇಗ್ (31) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ಎರಡೂವರೆ ಲಕ್ಷ ಮೌಲ್ಯದ ಭಾರತ್, ಇಂಡೇನ್, ಹೆ‌ಚ್‌ಪಿ ಹಾಗೂ ಟೋಟಲ್ ಗ್ಯಾಸ್ ಕಂಪನಿಗಳ 222 ಗೃಹ ಬಳಕೆಯ ಸಿಲಿಂಡರ್‌ಗಳು, ಆಟೋ ಹಾಗೂ ರೀ ಫಿಲ್ಲಿಂಗ್ ಮಾಡುತ್ತಿದ್ದ ವಸ್ತುಗಳನ್ನು ವಶಪ‌ಡಿಸಿಕೊಳ್ಳಲಾಗಿದೆ.
ಕೃತ್ಯದಲ್ಲಿ ಭಾಗಿಯಾಗಿದ್ದ ರಾಮ್ ಕಿಶನ್ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ತೀವ್ರ ಶೋಧ ನಡೆಸಲಾಗಿದೆ. ಆರೋಪಿಗಳು ಚಾಮುಂಡಿ ನಗರದ ಸೀತಪ್ಪ ಲೇಔಟ್‌ನ ಮನೆಯೊಂದನ್ನು ಬಾಡಿಗೆ ಪಡೆದು ಯಾರಿಗೂ ಗೊತ್ತಾಗದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆ ಸಿಲಿಂಡರ್‌ಗಳಿಗೆ ರೀ ಫಿಲ್ಲಿಂಗ್ ಮಾಡುತ್ತಿದ್ದರು ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Leave a Comment