ಗೌರಿ ಹತ್ಯೆ ಸುಳಿವು ಬಹಿರಂಗ ರೆಡ್ಡಿ ನಕಾರ

ಬೆಂಗಳೂರು, ಸೆ. ೧೩- ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸಿಕ್ಕಿರುವ ಸುಳಿವುಗಳನ್ನು ಸದ್ಯಕ್ಕೆ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ವಿಧಾನಸೌಧ ಮುಂಭಾಗದಲ್ಲಿಂದು ರಾಜ್ಯ ಸಾರಿಗೆ ಸಂಸ್ಥೆಯ ಕಾರ್ಯಕ್ರಮದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳದಿಂದ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ತನಿಖೆಯ ಪ್ರಗತಿಯ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದರು.
ತನಿಖಾ ದಳಕ್ಕೆ ಲಭ್ಯವಾಗಿರುವ ಸುಳಿವುಗಳನ್ನು ಬಹಿರಂಗ ಪಡಿಸಿದರೆ ಹಂತಕರು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.
ಸಂಶೋಧಕ ಡಾ. ಎಂ.ಎಂ. ಕಲ್ಬುರ್ಗಿ ಹತ್ಯೆ ಹಾಗೂ ಗೌರಿಲಂಕೇಶ್ ಹತ್ಯೆ ಪ್ರಕರಣಗಳಿಗೆ ಸರ್ಕಾರದ ವೈಫಲ್ಯವೇ ಕಾರಣ ಎಂಬ ಬಿಜೆಪಿ ನಾಯಕರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಗೌರಿ ಲಂಕೇಶ್ ಅವರು ಹಲವು ಬಾರಿ ನಮ್ಮನ್ನು ಭೇಟಿ ಮಾಡಿದ್ದರು. ಆದರೆ ಎಂದೂ ಜೀವ ಬೆದರಿಕೆ ಇರುವ ಬಗ್ಗೆ ಹೇಳಿರಲಿಲ್ಲ ಎಂದರು.
ಈ ಪ್ರಕರಣದ ತನಿಖೆ ಸಾಗಿದೆ. ಹಂತಕರನ್ನು ಬಂಧಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

Leave a Comment