ಗೌರಿ ಹತ್ಯೆ ಪರಶುರಾಮನ ತೀವ್ರ ವಿಚಾರಣೆ

ಬೆಂಗಳೂರು,ಜೂ.೧೩-ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಬಂಧಿತ ಶ್ರೀರಾಮಸೇನೆ ಕಾರ್ಯಕರ್ತ ಪರಶುರಾಮ ಅಶೋಕ ವಾಘ್ಮೋರೆಯನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ವಿಜಯಪುರ ಜಿಲ್ಲೆ ಸಿಂದಗಿಯ ಪರಶುರಾಮ ಅಶೋಕ ವಾಘ್ಮೋರೆ(೨೬)ಯನ್ನು ನಿನ್ನೆ ೩ನೇ ಎಸಿಎಂಎಂ ನ್ಯಾಯಾಲಯದಲ್ಲಿ ಹಾಜರುಪಡಿಸಿ ಜೂನ್ ೨೪ರವರೆಗೆ ವಶಕ್ಕೆ ಪಡೆದುಕೊಂಡ ಅಧಿಕಾರಿಗಳು ವಿಚಾರಣೆಗೊಳಪಡಿಸಿ ಮಹತ್ವದ ಮಾಹಿತಿ ಸಂಗ್ರಹಿಸಿದ್ದಾರೆ.

ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತ ಪರಶುರಾಮನ ಪಾತ್ರವೇನು ಎಂಬುದರ ಬಗ್ಗೆ ವಿಸ್ತೃತ ತನಿಖೆ ನಡೆಸಲಾಗುತ್ತಿದ್ದು ಇನ್ನೂ ನಮಗೆ ಗೌರಿ ಅವರ ಮೇಲೆ ಗುಂಡು ಹಾರಿಸಿದ ಹಂತಕನ ಖಚಿತ ಸುಳಿವು ಲಭ್ಯವಾಗಿಲ್ಲ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಗೌರಿ ಹತ್ಯೆ ಸಂಬಂಧ ಈಗಾಗಲೇ ಬಂಧಿಸಿರುವ  ಶಿಕಾರಿಪುರದ ಕಪ್ಪನಹಳ್ಳಿಯ ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್ (೩೭), ಮಹಾರಾಷ್ಟ್ರದ ಅಮೋಲ್ ಕಾಳೆ ಅಲಿಯಾಸ್ ಬಾಯ್‌ಸಾಬ್, ಅಮಿತ್ ದೇಗ್ವೇಕರ್ ಅಲಿಯಾಸ್ ಪ್ರದೀಪ (೩೮) ಹಾಗೂ ವಿಜಯಪುರ ಜಿಲ್ಲೆ ರತ್ನಾಪುರದ ಮನೋಹರ್ ದುಂಡಪ್ಪ ಯಡವೆ ಅಲಿಯಾಸ್ ಮನೋಜ್ (೨೯) ವಿಚಾರಣೆಯಲ್ಲಿ ನೀಡಿದ ಮಾಹಿತಿ ಆಧರಿಸಿ ಪರಶುರಾಮ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ ಎನ್ನುತ್ತಾರೆ.

ಸ್ಥಳೀಯವಾಗಿ ಕೋಮು ಗಲಭೆ ಸೃಷ್ಟಿಸಿ, ತಾನೇ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದ. ಪಿಸ್ತೂಲ್ ಬಳಸುವುದರಲ್ಲಿ ಪರಶುರಾಮ ಪರಿಣಿತ ಎಂದು ಆರೋಪಿಗಳು ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದರು,ಕಲಬುರ್ಗಿ ಜಿಲ್ಲೆಯ ಸೊನ್ನ ಹಾಗೂ ವಿಜಯಪುರ ಜಿಲ್ಲೆಯ ದೇವನಗಾಂವ್ ಗಡಿಯಲ್ಲಿ ಪಿಸ್ತೂಲ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ.ಈ ಪ್ರದೇಶವು ಸಿಂದಗಿಗೆ ಸಮೀಪದಲ್ಲಿರುವುದರಿಂದ ಅಲ್ಲಿಂದ ಪಿಸ್ತೂಲ್‌ಗಳನ್ನು ಪರಶುರಾಮ್ ಖರೀದಿಸಿದ್ದ ಮಾಹಿತಿ ಇದ್ದು ಹೆಚ್ಚಿನ ವಿಚಾರಣೆ ನಡೆಸಲಾಗಿದೆ  ಎಂದು ಹೇಳಿದರು.

ಸ್ನೇಹಿತನ ವಿಚಾರಣೆ

ಗೌರಿ ಅವರಿಗೆ ಪರಶುರಾಮನೇ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎನ್ನುವುದು ಖಚಿತವಾಗಿಲ್ಲ ಪ್ರಕರಣ ಸಂಬಂಧ ಇನ್ನೊಬ್ಬ ಸಿಂದಗಿಯ ಸುನೀಲ್ ಮಡಿವಾಳಪ್ಪ ಅಗಸರ (೨೫) ಎಂಬಾತನನ್ನು ವಶಕ್ಕೆ ಪಡೆದು ಆತನಿಂದಲೂ ಮಾಹಿತಿ ಪಡೆಯಲಾಗುತ್ತಿದೆ ಬಂಧಿತ ಸುನೀಲ್ ಶ್ರೀರಾಮಸೇನೆ ಕಾರ್ಯಕರ್ತನಾಗಿದ್ದಲ್ಲದೇ ಆರೋಪಿ ಪರಶುರಾಮನ ಸ್ನೇಹಿತನಾಗಿರುವುದು ವಿಚಾರಣೆಯಲ್ಲಿ ಕಂಡುಬಂದಿದೆ.

ಪರಶೂರಾಂ ಜೊತೆಗೆ ವಿಚಾರಣೆ ನಡೆಸಲು ಸುನೀಲ್‌ನನ್ನು ನಗರಕ್ಕೆ ಕರೆತರಲಾಗಿದೆ  ಪ್ರಕರಣದಲ್ಲಿ ಆತನ ಪಾತ್ರವೇನು ಎಂಬುದರ ತೀವ್ರ ವಿಚಾರಣೆಗೊಳಪಡಿಸಲಾಗುತ್ತದೆ ಪ್ರಕರಣ ಸಂಬಂಧ ಮೊದಲಿಗೆ ಬಂಧಿಸಲಾಗಿದ್ದ ಮದ್ದೂರಿನ ಕೆ.ಟಿ.ನವೀನ್‌ಕುಮಾರ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ.ಉಳಿದ ಐವರನ್ನು ನ್ಯಾಯಾಲಯದ ಅನುಮತಿ ಮೇರೆಗೆ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳ ವಿಚಾರಣೆಯಿಂದ ಗೌರಿ ಅವರಿಗೆ ಗುಂಡು ಹಾರಿಸಿ ಬೈಕ್‌ನಲ್ಲಿ ಪರಾರಿಯಾದ ಹಂತಕರನ್ನು ಪತ್ತೆ ಹಚ್ಚುವುದು ಸಾಧ್ಯವಾಗಲಿದೆ ಈಗಾಗಲೇ ಎಸ್‌ಐಟಿ ಅಧಿಕಾರಿಗಳ ಒಂದು ತಂಡ ಮಹಾರಾಷ್ಟ್ರಕ್ಕೆ ತೆರಳಿ ಗುಂಡು ಹಾರಿಸಿದವನಿಗಾಗಿ ಶೋಧ ನಡೆಸಿದೆ ಎಂದು ಹೇಳಿದರು.

ದೇಶಿ ನಿರ್ಮಿತ ಪಿಸ್ತೂಲ್

ಆರೋಪಿಗಳು ಮತ್ತು ಶಂಕಿತರು ಸಂಪೂರ್ಣ ಮಾಹಿತಿ ಬಗ್ಗೆ ಬಾಯ್ಬಿಡುತ್ತಿಲ್ಲ.ಹೀಗಾಗಿ ಯಾರ್‍ಯಾರು ಇದರ ಹಿಂದೆ ಇದ್ದಾರೆ ಎಂದು ಅವರಿಂದ ಬಾಯ್ಬಿಡಿಸಲು ಅಧಿಕಾರಿಗಳಿಗೆ ಕಷ್ಟವಾಗುತ್ತಿದೆ.ಇದರಿಂದಾಗಿ ಇದುವರೆಗೆ ತನಿಖೆಯಲ್ಲಿ ಅರ್ಧದಷ್ಟು ಕೆಲಸ ಮಾತ್ರ ಪೂರ್ಣವಾಗಿದೆ.

ಗೌರಿ ಲಂಕೇಶ್ ಹತ್ಯೆಗೆ ಬಳಸಿರುವ ದೇಶಿ ನಿರ್ಮಿತ ಪಿಸ್ತೂಲ್ ಶಂಕಿತನೊಬ್ಬನ ಬಳಿಯಿದೆ ಎಂದು ಅಧಿಕಾರಿಗಳು ಶಂಕಿಸಿ ವಿಚಾರಣೆಯನ್ನು ತೀವ್ರ ಗೊಳಿಸಿದ್ದಾರೆ.ಆದರೆ ಇಂತವರ ಬಳಿಯೇ ಪಿಸ್ತೂಲ್ ಇದೆ ಎಂದು ತೀರ್ಮಾನಕ್ಕೆ ಬರಲು ಕಷ್ಟವಾಗುತ್ತಿದೆ ಪಿಸ್ತೂಲ್‌ನ್ನು ಎಲ್ಲಿಯೋ ಅಡಗಿಸಿಟ್ಟಿರಬೇಕು ಅಲ್ಲದೇ ಹತ್ಯೆ ಸಂದರ್ಭದಲ್ಲಿ ಬಳಸಿದ್ದ ಬೈಕ್ ಬಗ್ಗೆ ಅಧಿಕಾರಿಗಳಿಗೆ ಇದುವರೆಗೆ ಯಾವುದೇ ಸುಳಿವು ಸಿಕ್ಕಿಲ್ಲದಿರುವುದು ಪ್ರಕರಣ ಭೇದಿಸಲು ಕಷ್ಟವಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಗುಂಡು ಹಾರಿಸಿದ ಹಂತಕ ಯಾರು!

ಪರಶುರಾಮ ವಾಘ್ಮೊರೆ ಬಂಧನದ ನಂತರ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯಲ್ಲಿ ವಿಶೇಷ ತನಿಖಾ ತಂಡ(ಎಸ್‌ಐಟಿ)ಅಧಿಕಾರಿಗಳು ಮಹತ್ವದ ಘಟ್ಟಕ್ಕೆ ಬಂದರೂ ಗುಂಡು ಹಾರಿಸಿದ ಹಂತಕನನ್ನು ಪತ್ತೆಹಚ್ಚಿ ಪ್ರಕರಣ ಭೇದಿಸಲು ಇನ್ನಷ್ಟು ಕಾಲಾವಕಾಶ ಬೇಕಾಗಲಿದೆ.

ಏಕೆಂದರೆ ಗೌರಿ ಲಂಕೇಶ್ ಹತ್ಯೆ ಸಂದರ್ಭದಲ್ಲಿ ಬಳಸಿದ್ದ ಪಿಸ್ತೂಲ್ ಮತ್ತು ಬೈಕ್ ಇನ್ನೂ ತನಿಖಾಧಿಕಾರಿಗಳಿಗೆ ಸಿಕ್ಕಿಲ್ಲ.ಎಲ್ಲಕ್ಕಿಂತ ಮುಖ್ಯವಾಗಿ ಬೈಕ್ ನಲ್ಲಿ ಬಂದು ಗುಂಡು ಹಾರಿಸಿ ಪರಾರಿಯಾಗಿರುವ ಹಂತಕರು ಜಾಡು ಪತ್ತೆಯಾಗಿಲ್ಲ ಆದರೆ ಗೌರಿ ಹತ್ಯೆಯು  ಸುಪಾರಿ ಕೊಲೆಯಲ್ಲ ಎನ್ನುವುದು ಅಧಿಕಾರಿಗಳಿಗೆ ಸ್ಪಷ್ಟವಾಗಿದೆ

ಗೌರಿ ಲಂಕೇಶ್ ಹತ್ಯೆಯಲ್ಲಿ ಇದುವರೆಗೆ ಬಂಧಿತರಾದವರಾದ ಕೆಟಿ ನವೀನ್ ಕುಮಾರ್, ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್ ಮತ್ತು ಪರಶುರಾಮ್ ವಾಗ್ಮರೆ ಮತ್ತು ಶಂಕಿತರಾಗಿರುವ ಅಮೊಲ್ ಕಾಳೆ, ಅಮಿತ್ ದೆಗ್ವೆಕರ್ ಮತ್ತು ಮನೋಹರ್ ಅವರನ್ನು ಇನ್ನೂ ಅಪರಾಧಿಗಳೆಂದು ಗುರುತಿಸಿಲ್ಲ. ಗೌರಿ ಹತ್ಯೆಯಲ್ಲಿ ತಮ್ಮದು ಕೂಡ ಪಾತ್ರವಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.ಆದರೆ ಕೊಲೆಯ ಪ್ರಧಾನ ಆರೋಪಿಯನ್ನು ಪತ್ತೆಹಚ್ಚುವುದು ವಿಶೇಷ ತನಿಖಾಧಿಕಾರಿಗಳಿಗೆ ಕಷ್ಟಕರ ಕೆಲಸವಾಗಿದೆ.

Leave a Comment