ಗೌರಿ ಗಣೇಶ ಹಬ್ಬ: ಶಾಂತಿಯುತ ಆಚರಣೆಗೆ ಮನವಿ

ಸಿರಾ, ಸೆ. ೧೧- ಗ್ರಾಮೀಣ ಪ್ರದೇಶಗಳಲ್ಲಿ ಗೌರಿ ಗಣೇಶ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡುವುದರ ಜತೆಗೆ ಶಾಂತಿ ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ಸಿರಾ ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ಹೆಚ್.ವಿ. ಸುದರ್ಶನ್ ಹೇಳಿದರು.

ಸಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಪೋಲೀಸ್ ಠಾಣಾ ಆವರಣದಲ್ಲಿ ಗೌರಿ ಗಣೇಶ ಹಬ್ಬದ ವೇಳೆ ಮುಂಜಾಗ್ರತ ಉದ್ದೇಶದಿಂದ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗಣೇಶ ಪ್ರಾತಿಷ್ಠಾಪನೆ ಹಾಗೂ ವಿಸರ್ಜನೆ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಮನ ಹರಿಸಬೇಕು. ಸಂಘಟಕರು ಗಣೇಶಮೂರ್ತಿ ಕೊರಿಸುವ ಮೊದಲು ಸಂಬಂಧಿಸಿದ ಗ್ರಾಮ ಪಂಚಾಯತಿ, ಪೋಲೀಸ್, ಬೆಸ್ಕಾಂ ಸೇರಿದಂತೆ ಇತರೆ ಇಲಾಖೆಯಿಂದ ಅನುಮತಿ ಪತ್ರ ಪಡೆಯಬೇಕು. ಸಾರ್ವಜನಿಕ ರಸ್ತೆ ಹಾಗೂ ವಾಹನ ಓಡಾಡುವಂತ ಸ್ಥಳದಲ್ಲಿ ಶಾಮಿಯಾನ ಹಾಕಿ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಬಾರದು. ಪ್ರತಿಷ್ಠಾಪನೆ ನಂತರ ಗಣಪತಿ ಮೂರ್ತಿಯನ್ನು ದಿನದ 24 ಗಂಟೆ ಕಾಯಲು ಸಂಘದ ಯುವಕರನ್ನು ನೇಮಿಸಿ ಮುಂಜಾಗ್ರತೆ ವಹಿಸುವಂತೆ ಸೂಚಿಸಿದರು.

ಪಿಎಸ್ಐ ವಿ. ನಿರ್ಮಲ ಮಾತನಾಡಿ, ವಿದ್ಯುತ್, ಧ್ವನಿವರ್ಧಕ ಬಳಕೆಗೆ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಪಟಾಕಿ ಸಿಡಿಸುವಾಗ ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ಜಾಗೃತಿ ವಹಿಸಬೇಕು ಎಂದರು.

ಸಭೆಯಲ್ಲಿ ಡಾ. ಚಂದ್ರಶೇಖರ್, ರಾಘವೇಂದ್ರ, ಶ್ರೀಧರ, ಗ್ರಾ.ಪಂ. ಸದಸ್ಯರಾದ ಲಿಂಗರಾಜ, ಗೋವಿಂದಪ್ಪ, ಎಸ್.ಮಧುಸೂದನ್, ರಾಕೇಶ್, ಆರ್.ಡಿ. ಗುರುಸ್ವಾಮಿ, ಪ್ರವೀಣಾ, ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

Leave a Comment