ಗೌಡ್ರು ಹೋಟೆಲ್‌ಗೆ ಯುವನ್ ರಾಜ ಕೈರುಚಿ

ತಮಿಳಿನ ಬಹು ಬೇಡಿಕೆಯ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜ ಕನ್ನಡಕ್ಕೆ ಬಂದಿದ್ದಾರೆ. ಕನ್ನಡದ ಗೌಡ್ರು ಹೋಟೆಲ್‌ನಲ್ಲಿ ತಮ್ಮ ಕೈರುಚಿ ತೋರಿಸಲು ಬಂದಿರುವ ರಾಜಾ ತಮಿಳಿನಲ್ಲಿ ಇಲ್ಲಿವರೆಗೆ ೧೦೦ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ಅಂದಹಾಗೆ ಯುವನ್ ಶಂಕರ್ ರಾಜ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರ ಪುತ್ರ. ರಾಜನಿಗೂ ತನ್ನ ತಂದೆಯಂತೆ ಹೆಸರು ಮಾಡಬೇಕು, ವಿಭಿನ್ನ ರೀತಿಯ ಹಾಡುಗಳನ್ನು ಕೊಡಬೇಕು, ಎಲ್ಲಾ ಭಾಷೆಯ ಚಿತ್ರಗಳಲ್ಲೂ ಕೆಲಸ ಮಾಡಬೇಕು ಎಂಬ ಆಸೆ ಇದೆ ಆ ಕಾರಣಕ್ಕಾಗಿಯೇ ಕನ್ನಡಕ್ಕೆ ಬಂದಿದ್ದಾರೆ.

ಗೌಡ್ರು ಹೋಟೆಲ್ ಚಿತ್ರಕ್ಕೆ ಸಂಗೀತ ನೀಡುತ್ತಿರುವ ಅವರು ಕಳೆದ ಭಾನುವಾರ ಚಿತ್ರ ಮುಹೂರ್ತದ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಾ ನನಗೆ ಈ ಹಿಂದೆಯೂ ಕನ್ನಡದಿಂದ ಅನೇಕ ಅವಕಾಶಗಳು ಬಂದಿದ್ದವು. ಆದರೆ ಆಗ ನಾನು ಒಪ್ಪಿಕೊಂಡಿದ್ದ ಬೇರೆ ಚಿತ್ರಗಳ ಕೆಲಸಗಳನ್ನು  ಮುಗಿಸಿಕೊಡಬೇಕಿತ್ತು. ಅದರಿಂದಾಗಿ ಕನ್ನಡಕ್ಕೆ ಬರಲು ಸಾಧ್ಯವಾಗಿರಲಿಲ್ಲ. ನಮ್ಮ ತಂದೆಯವರು ಕೂಡಾ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಕೆಲಸ ಮಾಡಿದ್ದಾರೆ. ಅವರಂತೆಯೇ ನಾನು ಎಲ್ಲಾ ಭಾಷೆಗಳಲ್ಲಿ ಕೆಲಸ ಮಾಡುವ ಆಸೆಯಿದೆ ಎನ್ನುತ್ತಾರೆ.

ತಂದೆಯಂತೆ ನೀವು ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವಾಗ ನಿಮ್ಮ ತಂದೆಯಿಂದ ಯಾವ ಸಲಹೆ ಟಿಪ್ಸ್‌ಗಳು ದೊರೆತವು ? ಎನ್ನುವ ಪ್ರಶ್ನೆಗೆ ಈ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಆದರೆ, ಕೆಲವು ಸಲಹೆಗಳನ್ನು ಕೊಡುತ್ತಾರೆ. ಮುಖ್ಯವಾಗಿ ಹಾಡುಗಳಲ್ಲಿ ನೆಗೆಟೀವ್ ಪದಗಳನ್ನು ಬಳಸಬೇಡ ಎನ್ನುವುದಾಗಿದೆ. ಉದಾಹರಣೆಗೆ ನಿನ್ನ ನೋಡಿ ನಾನು ಸತ್ತೆ, ನಿನ್ನ ನೋಟ ನನ್ನನ್ನು ಸಾಯಿಸಿತು ಈ ತರಹದ ಪದಗಳನ್ನು ಬಳಸಬಾರದು ಎನ್ನುತ್ತಾರೆ.

ಚಿತ್ರ ನೋಡುವ ಪ್ರೇಕ್ಷಕನಿಗೆ ಪಾಸಿಟೀವ್ ವಿಷಯಗಳನ್ನು ಮಾತ್ರ ಕೊಡಬೇಕು ಎಂಬ ಸಲಹೆಯನ್ನು ಇಳಯರಾಜಾ ನೀಡುತ್ತಾರಂತೆ. ಯುವನ್ ಅವರ ತಂದೆ ಮಾಡಿರುವ ಕನ್ನಡದ ಅನೇಕ ಹಾಡುಗಳನ್ನು ಕೇಳಿದ್ದಾರಂತೆ.  ಯುವನ್ ಕೂಡಾ ಈಗ ಬಿಜಿ ಇರುವ ಸಂಗೀತ ನಿರ್ದೇಶಕ. ಸದ್ಯ ಅವರ ಕೈಯಲ್ಲಿ ೨೦ಕ್ಕೂ ಹೆಚ್ಚು ಸಿನಿಮಾಗಳಿವೆ. ಹೀಗಿರುವುದರಿಂದ ತಂದೆಯ ಜೊತೆ ಕೆಲಸ ಮಾಡುತ್ತಿಲ್ಲ. ಬದಲಾಗಿ ಅವರೇನಾದರೂ ಹಾಡಲು ಕರೆದರೆ ಹೋಗುತ್ತಾರಂತೆ.

ಕನ್ನಡದಲ್ಲಿ ಮೊದಲ ಬಾರಿಗೆ ಸಂಗೀತ ನೀಡುತ್ತಿರುವ ರಾಜ ಅವರಿಗೆ ಇಲ್ಲಿನ ಪ್ರೇಕ್ಷಕರ ಅಭಿರುಚಿ ಗೊತ್ತಾ? ಎಂದು ಕೇಳಿದ್ದಕ್ಕೆ ಸಂಗೀತಕ್ಕೆ ಭಾಷೆ ಇಲ್ಲ. ಅದು ಭಾಷೆಯ ಗಡಿಯನ್ನು ದಾಟಿದ್ದು. ಇವತ್ತು ನಮ್ಮ ತಂದೆ ಈ ಮಟ್ಟಕ್ಕೆ ಬೆಳೆಯಲು ಅದೇ ಕಾರಣ. ಒಳ್ಳೆಯ ಟ್ಯೂನ್‌ಗಳನ್ನು ಕೊಡುವುದಷ್ಟೇ ಸಂಗೀತ ನಿರ್ದೇಶಕನ ಕೆಲಸ ಎನ್ನುವ ಅವರಿಗೆ ಬೆಂಗಳೂರಿನ ವಾತಾವರಣ ತುಂಬಾ ಇಷ್ಟವಂತೆ. ಹಾಗಾಗಿ ಇಲ್ಲಿ ಕಂಪೋಸಿಂಗ್ ಮಾಡುತ್ತಿದ್ದಾರೆ.

ಅಂದಹಾಗೆ ಗೌಡ್ರು ಹೋಟೆಲ್ ಚಿತ್ರ ಮಲಯಾಳಂನ ಉಸ್ತಾದ್ ಹೋಟೆಲ್ ಚಿತ್ರದ ರೀಮೇಕ್. ಆದರೆ ರಾಜ ಕನ್ನಡದಲ್ಲಿ ತಾಜಾ ಟ್ಯೂನ್‌ಗಳನ್ನು ನೀಡುತ್ತಿದ್ದಾರಂತೆ. ನಾನು ಮೂಲ ಚಿತ್ರವನ್ನು ನೋಡಿಲ್ಲ. ಅಲ್ಲಿನ ಯಾವುದೇ ಟ್ಯೂನ್‌ಗಳನ್ನು ಕನ್ನಡದಲ್ಲಿ ಬಳಸಿಕೊಳ್ಳುತ್ತಿಲ್ಲ ಎಂದು ಸ್ಪಷ್ಟನೆ ನೀಡುತ್ತಾರೆ.
-ಪ್ರಕಾಶ್

Leave a Comment