ಗೌಡರ ಯಜ್ಞ ಸಂಪನ್ನ

ಶೃಂಗೇರಿ (ಚಿಕ್ಕಮಗಳೂರು), ಜ. ೨೨- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬ ಕಳೆದ ಐದು ದಿನದಿಂದ ಶ್ರೀ ಶಾರದಾ ಪೀಠದಲ್ಲಿ ಕೈಗೊಂಡಿದ್ದ ಸಹಸ್ರ ಚಂಡಿಕಾಯಾಗದ ಪೂರ್ಣಾಹುತಿ ಶ್ರೀಮಠ ಎದುರಿನ ಶ್ರೀಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಮುಕ್ತಾಯಗೊಂಡಿದೆ.
ಜ.೧೭ರಂದು ಎಚ್.ಡಿ.ದೇವೇಗೌಡ ಮತ್ತು ಚನ್ನಮ್ಮ ದಂಪತಿ ಶ್ರೀಮಠದಲ್ಲಿ ಚಂಡಿಕಾಯಾಗದ ಸಂಕಲ್ಪ ಕೈಗೊಂಡಿದ್ದರು. ಕುಡ್ನಲ್ಲಿ ಲಕ್ಷ್ಮೀನಾರಾಯಣ ಸೋಮಾಯಾಜಿ ನೇತೃತ್ವದ ೧೦೦ ಋತ್ವಿಜರ ತಂಡ ಯಾಗದಲ್ಲಿ ಪಾಲ್ಗೊಂಡಿತ್ತು. ಕಳೆದ ಐದು ದಿನದಿಂದಲೂ ದೇವೇಗೌಡ ದಂಪತಿ ಶ್ರೀಮಠದ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದರು.
ಗಣಪತಿ ಹೋಮದೊಂದಿಗೆ ಆರಂಭವಾದ ಯಾಗದಲ್ಲಿ ಪ್ರತಿ ದಿನವೂ ಪಾರಾಯಣ ಮತ್ತು ಜಪ ನಡೆಯುತ್ತಿತ್ತು. ಯಾಗದ ಪೂರ್ಣಾಹುತಿ ಸಂದರ್ಭ ಶ್ರೀಶಾರದಾ ಪೀಠದ ಜಗದ್ಗುರು ಶ್ರೀವಿಧುಶೇಖರ ಭಾರತೀ ಸ್ವಾಮೀಜಿಗಳು ಉಪಸ್ಥಿತರಿದ್ದರು.
ದೇವೇಗೌಡ ಮತ್ತು ಚನ್ನಮ್ಮರೊಂದಿಗೆ ಎಚ್.ಡಿ.ರೇವಣ್ಣ, ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರಮೇಶ್, ಎಚ್.ಡಿ.ಬಾಲಕೃಷ್ಣ, ಶೈಲಾ, ಅನುಸೂಯ, ಸೊಸೆ ಅನಿತಾ ಕುಮಾರಸ್ವಾಮಿ ಮತ್ತು ಮೊಮ್ಮಕ್ಕಳು ಭಾಗವಹಿಸಿದ್ದರು.
ರಾಜಕೀಯ ಭವಿಷ್ಯಕ್ಕಾಗಿ ಯಾಗ; ಶಾರದಾಂಬೆಯ ಮೊರೆ ಹೋದ ದೇವೇಗೌಡ
ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಶಾಸಕ ಟಿ.ಡಿ.ರಾಜೇಗೌಡ, ಜೆಡಿಎಸ್ ಮುಖಂಡರಾದ ಎಚ್.ಜಿ.ವೆಂಕಟೇಶ್, ದಿವಾಕರಭಟ್, ಜಿ.ಜಿ.ಮಂಜುನಾಥ್, ಭರತ್‌ಗೌಡ ಮತ್ತಿತರರು ಪೂರ್ಣಹುತಿ ವೇಳೆ ಉಪಸ್ಥಿತರಿದ್ದರು.

Leave a Comment