ಗೌಡರ ಬೆಂಬಲಿಸಲು ಅಲ್ಪಸಂಖ್ಯಾತರಿಗೆ ಮನವಿ

ಮಧುಗಿರಿ, ಏ.೧೪- ದೇವೇಗೌಡರು ಪ್ರಧಾನಿಯಾಗಿದ್ದಾಗ ತೀರಾ ಕೆಳಸ್ತರದಲ್ಲಿದ್ದ ದೇಶದ ಮುಸ್ಲಿಂ ಸಮಾಜಕ್ಕೆ ಶೇ.4 ರಷ್ಟು ಮೀಸಲಾತಿ ನೀಡಿದ್ದರು. ಇಂದು ಅವರ ಋಣ ತೀರಿಸಲು ದೇವರು ಅವಕಾಶ ಮಾಡಿಕೊಟ್ಟಿದ್ದು, ನಿಮ್ಮ ಅಮೂಲ್ಯವಾದ ಮತವನ್ನು ಗೌಡರಿಗೆ ನೀಡಬೇಕು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಅಲ್ಪಸಂಖ್ಯಾತ ಬಂಧುಗಳಿಗೆ ಮನವಿ ಮಾಡಿದರು.
ತಾಲ್ಲೂಕಿನ ಮಿಡಿಗೇಶಿ ಹೋಬಳಿಯಲ್ಲಿ ಜಾಮೀಯ ಮಸೀದಿಯಲ್ಲಿ ಅಲ್ಪಸಂಖ್ಯಾತರ ಜತೆ ಮಾತನಾಡಿದ ಅವರು, ದೇಶದ ಪ್ರಧಾನಿಯಾದ 11 ತಿಂಗಳಲ್ಲೇ ದೇಶ ಮೆಚ್ಚುವ ಕಳಂಕ ರಹಿತ ಆಡಳಿತ ನೀಡಿದವರು ಗೌಡರು. ಇಂದು ಅವರೇ ನಮ್ಮ ಜಿಲ್ಲೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರಿಗೆ ಮತ ನೀಡುವುದು ಅಲ್ಪಸಂಖ್ಯಾತರ ಕರ್ತವ್ಯವಾಗಬೇಕು ಎಂದರು.
ಅಲ್ಲದೆ ತಾಲ್ಲೂಕಿನ ಶಾಶ್ವತ ನೀರಾವರಿ, ಉದ್ಯೋಗ, ಹಾಗೂ ಮಧುಗಿರಿಯನ್ನು ಜಿಲ್ಲಾ ಕೇಂದ್ರ ಮಾಡಲು ಇವರ ಸೇವೆ ಅಗತ್ಯವಾಗಿ ಬೇಕಾಗಿದೆ. ಬಿಜೆಪಿಯು ದಲಿತ ಹಾಗೂ ಮುಸ್ಲಿಮರ ಭದ್ರತೆಗೆ ಧಕ್ಕೆ ತಂದಿದೆ. ಇದು

ಮುಂದುವರೆಯಬಾರದು. ಅಹಿಂದ ವರ್ಗವು ಭದ್ರತೆಯಿಂದ ಇರಲು ಸಂಸತ್ತಿನಲ್ಲಿ ದೇವೇಗೌಡರ ಉಪಸ್ಥಿತಿ ಅವಶ್ಯಕ. ಆದ್ದರಿಂದ ತಾಲ್ಲೂಕಿನ ಎಲ್ಲ ಮತದಾರರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾದ ಮಾಜಿ ಪ್ರಧಾನಿ ದೇವೇಗೌಡರಿಗೆ ನಿಮ್ಮ ಬೆಂಬಲ ನೀಡುವಂತೆ ಮನವಿ ಮಾಡಿದರು.
ಅಲ್ಪಸಂಖ್ಯಾತ ಮುಖಂಡ ಪುರಸಭೆ ಸದಸ್ಯ ಶಾಜೂ ಮಾತನಾಡಿ, ದೇವೇಗೌಡರು ನಿಜವಾಗಿ ಅಲ್ಪಸಂಖ್ಯಾತ ಬಂಧುಗಳಿಗೆ ಭದ್ರತೆಯನ್ನು ಒದಗಿಸಿದ್ದಾರೆ. 100 ಮಂದಿಯಲ್ಲಿ 4 ಮಂದಿಗೆ ಇಂದು ಸರ್ಕಾರಿ ಕೆಲಸ ಹಾಗೂ ಇತರೆ ಕ್ಷೇತ್ರದಲ್ಲಿ ಮೀಸಲಾತಿ ದೊರಕಿದೆ. ಹಾಗಾಗಿ ನಮ್ಮ ಎಲ್ಲ ಮುಸ್ಲಿಂ ಬಂಧುಗಳು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾದ ದೇವೇಗೌಡರ ತೆನೆ ಹೊತ್ತ ರೈತ ಮಹಿಳೆಯ ಗುರುತಿಗೆ ಮತ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಹಿರಿಯ ಮುಖಂಡ ತುಂಗೋಟಿ ರಾಮಣ್ಣ, ಕಾಂಗ್ರೆಸ್ ಮುಖಂಡ ಜಿ.ಪಂ.ಸದಸ್ಯ ಕೆಂಚಮಾರಯ್ಯ, ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಮುಖಂಡರಾದ ಸಾಮಿಲ್ ಶಬೀರ್, ತಾಸೂ, ಬಷೀರ್ ಅಹ್ಮದ್, ಮಹಮದ್, ಗೌಸ್‍ಪೀರ್, ಬಾಷ ಮತ್ತಿತರರು ಉಪಸ್ಥಿತರಿದ್ದರು.

Leave a Comment