ಗೌಡರನ್ನು ಮನೆಯಿಂದ ಹೊರಹಾಕಿದ್ದ ಎಚ್‌ಡಿಕೆ: ಮಾಧುಸ್ವಾಮಿ ಬಾಂಬ್

ತುಮಕೂರು, ಏ. ೧೫- ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿರುವ ಮಾಜಿ ಪ್ರಧಾನಿ ಹೆಚ್.‌ಡಿ. ದೇವೇಗೌಡರ ವಿರುದ್ಧ ಪ್ರಚಾರ ಸಭೆಗಳಲ್ಲಿ ಮಾತಿನ ಬಾಣ ಬಿಡುತ್ತಿದ್ದ ಚಿ.ನಾ.ಹಳ್ಳಿ ಶಾಸಕ ಜೆ.ಸಿ. ಮಾಧುಸ್ವಾಮಿ ಅವರು ಈಗ ರಾಜ್ಯದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧವೂ ಗುಡುಗಿದ್ದಾರೆ.
ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಅಂದು ತಮ್ಮ ತಂದೆ ದೇವೇಗೌಡರನ್ನೆ ಮನೆಯಿಂದ ಹೊರಗೆ ಹಾಕಿದ್ದರು ಎಂದು ಅವರು ಚಿ.ನಾ.ಹಳ್ಳಿ ತಾಲ್ಲೂಕಿನಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ.
ಮಾಜಿ ಪ್ರಧಾನಿಯಾಗಿರುವ ತಮ್ಮ ತಂದೆ ದೇವೇಗೌಡರನ್ನೆ ಕುಮಾರಸ್ವಾಮಿ ಅವರು ಮನೆಯಿಂದ ಆಚೆಗೆ ಹಾಕಿದ್ದರು. ಆ ಸಂದರ್ಭದಲ್ಲಿ ಗೌಡರು ಕುಮಾರಪಾರ್ಕ್‌ನ ಸಣ್ಣ ಕ್ವಾಟ್ರಸ್‌ನಲ್ಲಿ ವಾಸ ಮಾಡುತ್ತಿದ್ದರು ಎಂದರು.
ದೇವೇಗೌಡರು ಹಳೇ ವಿದ್ಯಾರ್ಥಿ ಭವನದ ಸ್ಟೇಷನ್ ಎದುರು ಭಾಷಣ ಮಾಡುವಾಗ ಕಿಡಿಗೇಡಿಗಳು ಕಲ್ಲಲ್ಲಿ ಹೊಡೆದಿದ್ದರು. ಆಗ ನಾನು ಎದೆಕೊಟ್ಟಿ ಅವರನ್ನು ತಬ್ಬಿಕೊಂಡು ಹೋಗಿದ್ದೆ. ಆ ಘಟನೆ ಬಳಿಕ ದೇವೇಗೌಡರನ್ನು ನನ್ನನ್ನು ತಬ್ಬಿಕೊಂಡು ನನ್ನ ಮಕ್ಕಳಾಗಿದ್ದರೂ ಈ ರೀತಿ ಏಟು ತಿನ್ನುತ್ತಿರಲಿಲ್ಲ ಎಂದು ಅತ್ತಿದ್ದರು ಎಂದು ಹೇಳಿದರು.
ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿರುವ ಬಳ್ಳಾರಿ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ವಿ.ಎಸ್. ಉಗ್ರಪ್ಪ ದೇವೇಗೌಡರ ಬೆನ್ನುಜ್ಜುತ್ತಿದ್ದರು. ದೇವೇಗೌಡರಿಗೆ ಕ್ಯಾರಿಯರ್‌ನಲ್ಲಿ ಟಿಫನ್, ಊಟ ತೆಗೆದುಕೊಂಡು ಹೋಗಿ ಕೊಡುತ್ತಿದ್ದವರು ನಾವು, ಅವರ ಮಕ್ಕಳಲ್ಲ ಎಂದು ಮಾಧುಸ್ವಾಮಿ ಕುಟುಕಿದರು.
ಅಂದು ದೇವೇಗೌಡರ ಬೆನ್ನುಜ್ಜುತ್ತಿದ್ದ ಉಗ್ರಪ್ಪ, ಮಾನಸ ಪುತ್ರ ಬಿ.ಎಲ್. ಶಂಕರ್, ವೈ.ಕೆ. ರಾಮಯ್ಯ ಅವರು ಪಕ್ಷದಿಂದ ಆಚೆ ಹೋದರು. ಇವರೆಲ್ಲಾ ಏಕೆ ಪಕ್ಷ ತೊರೆದರು ಎಂಬುದು ಈಗ ಎಲ್ಲರಿಗೂ ತಿಳಿದಿದೆ ಎಂದರು.
ಈಗ ಕುಮಾರಸ್ವಾಮಿ ಬಂದು ನನ್ನನ್ನು ಕೇಳಲಿ, ಆಗ ಹೇಳುತ್ತೀನಿ ಏನಪ್ಪಾ.. ನೀನು ಏಕೆ ಅಪ್ಪನ್ನ ಹೊರಗೆ ಹಾಕಿದ್ದೆ ಎಂದು ಪ್ರಶ್ನೆ ಮಾಡುತ್ತೇನೆ ಎಂದು ಮಾಧುಸ್ವಾಮಿ ಅವರು ಭಾಷಣ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Leave a Comment