ಗೋಸಾಗಾಟ ಪಂಜ ಉದ್ವಿಗ್ನ

ಪೊಲೀಸ್ ಲಾಠಿಚಾರ್ಜ್
ಮಂಗಳೂರು, ಆ.೧೦- ಸುಬ್ರಹ್ಮಣ್ಯ ಕಡೆಯಿಂದ ಗೋವನ್ನು ಕಳ್ಳತನ ಮಾಡಿ ಕಸಾಯಿಖಾನೆಗೆ ಸಾಗಾಟ ಮಾಡಲಾಗುತ್ತಿದ್ದ ಸ್ವಿಫ್ಟ್ ಕಾರನ್ನು ತಡೆದು ಅದರಲ್ಲಿದ್ದ ಓರ್ವನಿಗೆ ಥಳಿಸಿದ ಘಟನೆ ನಿನ್ನೆ ತಡರಾತ್ರಿ ಸುಳ್ಯ ಸಮೀಪದ ಪಂಜ ಪೇಟೆಯಲ್ಲಿ ನಡೆದಿದೆ. ನೂರಾರು ಸಂಖ್ಯೆಯಲ್ಲಿದ್ದ ಸಾರ್ವಜನಿಕರನ್ನು ಚದುರಿಸಲು ಪೋಲಿಸರು ಕೊನೆಗೆ ಲಾಠಿಚಾರ್ಜ್ ನಡೆಸಬೇಕಾಯಿತು. ಘಟನೆಯಿಂದ ಪಂಜ ಉದ್ವಿಗ್ನಗೊಂಡಿದ್ದು ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ.
ಸುಬ್ರಹ್ಮಣ್ಯ ಕಡೆಯಿಂದ ಸ್ವಿಫ್ಟ್ ಕಾರಲ್ಲಿ ಗೋವನ್ನು ಕೈಕಾಲು ಕಟ್ಟಿ ಪ್ಲಾಸ್ಟಿಕ್ ಹೊದಿಸಿ ತುಂಬಿಸಿ ಅಮಾನುಷ ರೀತಿಯಲ್ಲಿ ಸಾಗಾಟ ಮಾಡಲಾಗುತ್ತಿತ್ತು. ಪಂಜ ಪೇಟೆಯಲ್ಲಿ ಪೊಲೀಸ್ ಬ್ಯಾರಿಕೇಡ್ ಇಡಲಾಗಿತ್ತು. ಇದನ್ನು ಗಮನಿಸದ ಚಾಲಕ ನಿಧಾನಿಸುವಷ್ಟರಲ್ಲಿ ಜೀಪೊಂದು ಎದುರಾಗಿತ್ತು. ಈ ವೇಳೆ ಕಾರ್ ಚಾಲಕ ಕೆಳಕ್ಕಿಳಿದು ಓಡಿಹೋದ ಕಾರಣ ಅನುಮಾನಗೊಂಡು ಉರವರು ಕಾರಲ್ಲಿದ್ದ ಇನ್ನೋರ್ವನನ್ನು ವಿಚಾರಿಸಲು ಮುಂದಾದರು. ಈ ವೇಳೆ ಕಾರಿನಲ್ಲಿ ಪ್ಲಾಸ್ಟಿಕ್ ಶೀಟ್ ಹೊದೆಸಿ ದನವನ್ನು ಸಾಗಿಸುತ್ತಿದ್ದುದು ಬೆಳಕಿಗೆ ಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ನೀಡಿದ್ದಾರೆ. ಸಾರ್ವಜನಿಕರು ಕಾರಿನಲ್ಲಿದ್ದ ಗೋವನ್ನು ರಕ್ಷಿಸಿ ಯುವಕನನ್ನು ಹಿಡಿದು ಥಳಿಸಿದ್ದಾರೆ. ಘರ್ಷಣೆಯಲ್ಲಿ ಕಾರ್ ಸಂಪೂರ್ಣ ಜಖಂಗೊಂಡಿದೆ. ೫೦೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡ ಸಾರ್ವಜನಿಕರ ಕೈಯಿಂದ ಯುವಕನನ್ನು ಪಾರು ಮಾಡಲು ಪೊಲೀಸರು ಹರಸಾಹಸ ಪಡುವಂತಾಯಿತು. ಕೊನೆಗೆ ಲಾಠಿಚಾರ್ಜ್ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ಪಡೆದುಕೊಳ್ಳಲಾಗಿದೆ. ಸುಬ್ರಹ್ಮಣ್ಯ, ಸುಳ್ಯ, ಗುತ್ತಿಗಾರು, ಬಿಳಿನೆಲೆ, ಪಂಜ ಕಡೆ ರಾತ್ರಿಯ ವೇಳೆ ಬೀಡಾಡಿ ಗೋವುಗಳನ್ನು ಮತ್ತು ಹಟ್ಟಿಯಿಂದಲೇ ಜಾನುವಾರುಗಳನ್ನು ಕದ್ದು ಮಂಗಳೂರಿನ ಕಸಾಯಿಖಾನೆಗೆ ಸಾಗಾಟ ಮಾಡುವ ತಂಡ ಸಕ್ರಿಯವಾಗಿದ್ದು ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

Leave a Comment