ಗೋವು ಹತ್ಯೆ ವಿರೋಧಿಸಿ ಪ್ರತಿಭಟನೆ

 

ಬೆಂಗಳೂರು, ಆ. ೧೭- ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅಕ್ರಮವಾಗಿ ಗೋವು, ಒಂಟೆಗಳನ್ನು ಹತ್ಯೆ ಮಾಡದಂತೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗೋವು ರಕ್ಷಣಾ ಸದಸ್ಯರು ಪ್ರತಿಭಟನೆ ನಡೆಸಿದರು.

ನಗರದಲ್ಲಿಂದು ಪುರಭವನದ ಎದುರು ಗೋವಂಶ-ಜಾನುವಾರು ಹತ್ಯೆ ಮುಕ್ತ ಕರ್ನಾಟಕ ನಿರ್ಮಾಣ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಜಮಾಯಿಸಿದ ಸದಸ್ಯರು, ನ್ಯಾಯಾಲಯಗಳ ಆದೇಶದಂತೆ, ಹಬ್ಬದ ಹೆಸರಿನಲ್ಲಿ ನಡೆಯುವ ಗೋವುಗಳ ಹತ್ಯೆಗಳನ್ನು ತಡೆಗಟ್ಟಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ, ಕಾನೂನು ಬಾಹಿರವಾಗಿ ನಿರಂತರ ನಡೆಯುತ್ತೀರುವ ಲಕ್ಷಾಂತರ ಗೋವುಗಳ ಮಾರಣ ಹೋಮವನ್ನು ಕಡೆಗಟ್ಟೋವ ಜವಾಬ್ದಾರಿ ಎಲ್ಲರ ಮೇಲಿದೆ.ಅದೇ ರೀತಿ, ಬಕ್ರೀದ್ ಹಬ್ಬದ ಸಂದರ್ಭ ಜಾನುವಾರುಗಳನ್ನು ಹತ್ಯೆ ಮಾಡದೆ ಅಹಿಂಸಾತ್ಮಕವಾಗಿ ಹಬ್ಬ ಆಚರಿಸಬೇಕು ಎಂದರು.

ರಾಜ್ಯದಲ್ಲಿ ಗೋಹತ್ಯೆ ಸಂಪೂರ್ಣ ನಿಷೇಧವಾಗಿದೆ. ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ರಾಜ್ಯ ಹೈಕೋರ್ಟ್ ೨೦೦೦ರಲ್ಲಿ, ಸುಪ್ರೀಂ ಕೋರ್ಟ್ ೨೦೦೬ರಲ್ಲಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅಕ್ರಮವಾಗಿ ಒಂಟೆ-ಗೋವುಗಳ ಸಾಗಣೆ ಹಾಗೂ ಹತ್ಯೆಯನ್ನು ತಡೆಗಟ್ಟುವಂತೆ ಎಲ್ಲ ಜಿಲ್ಲಾಧಿಕಾರಿಗೆ ನ್ಯಾಯಾಲಯ ಆದೇಶಿಸಿದೆ ಎಂದರು.

ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ. ಸಮಿತಿ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸಭೆನಡೆಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಗೋಸಾಗಣೆ ಹಾಗೂ ಹತ್ಯೆ ತಡೆಗೆ ಕ್ರಮ ತೆಗೆದುಕೊಳ್ಳಬೇಕು. ಅಧಿಕಾರಿಗಳು ಕೋರ್ಟ್ ಆದೇಶಗಳನ್ನು ಪಾಲಿಸದಿದ್ದರೆ, ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

Leave a Comment