ಗೋವಾಕ್ಕೆ ನೀರು ಬಿಟ್ಟಿಲ್ಲ ಸಚಿವರ ಸ್ಪಷ್ಟನೆ

ಬೆಂಗಳೂರು, ಜು. ೧೭- ಮಹದಾಯಿಯಿಂದ ಗೋವಾಕ್ಕೆ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂಬ ವರದಿಗಳನ್ನು ಅಲ್ಲಗಳೆದಿರುವ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು ಗೋವಾಕ್ಕೆ ನೀರು ಹರಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸುಪ್ರೀಂ ಕೋರ್ಟ್‌ನ ಆದೇಶದಂತೆ ಕಳಸಾಬಂಡೂರಿ ಟನಲ್‌‌ನಿಂದ ಹೊರ ಹೋಗುವ ನೀರು ಮಹದಾಯಿಗೆ ಹೋಗುತ್ತಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಹದಾಯಿ ವಿವಾದ ಸೂಕ್ಷ್ಮವಾಗಿದೆ. ನಾಲ್ಕು ಜಿಲ್ಲೆಗಳಲ್ಲಿ ಈ ಬಗ್ಗೆ ಹೋರಾಟ ಮಾಡಲಾಗುತ್ತಿದೆ. ಗೋವಾಕ್ಕೆ ನೀರು ಬಿಡಲಾಗುತ್ತಿದೆ ಎಂಬ ವರದಿಗಳಿಂದ ಈ ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗಬಹುದು. ಹಾಗಾಗಿ ತಪ್ಪು ವರದಿಗಳನ್ನು ಬಿತ್ತರಿಸದಂತೆ ಮನವಿ ಮಾಡಿದರು.
@12bc = ತೀರಾ ಕೆಟ್ಟಸ್ಥಿತಿ
ಮಳೆ ಕೊರತೆಯಿಂದ ಕಾವೇರಿ ಕಣಿವೆ ಜಲಾಶಯಗಳಲ್ಲಿ ಇತಿಹಾಸದಲ್ಲೇ ಅತಿ ಕಡಿಮೆ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಜುಲೈನಲ್ಲಿ 57 ಟಿ.ಎಂ.ನೀರು ಇತ್ತು. ಈ ವರ್ಷ ಕೇವಲ 26 ಟಿ.ಎಂ.ಸಿ. ನೀರು ಕೆಆರ್ಎಸ್, ಕಬಿನಿ, ಹಾರಂಗಿ, ಹೇಮಾವತಿ ಈ ನಾಲ್ಕು ಜಲಾಶಯಗಳಲ್ಲಿ ಇದೆ ಎಂದರು.
ನಮಗೆ ನೀರಿನ ಕೊರತೆ ಇದೆ. ಹಾಗಾಗಿ ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ. ನಮ್ಮಗೆ ಹರಿದು ಬರುವ ನೀರಲ್ಲೇ ಸ್ವಲ್ಪ ಪಾಲನ್ನು ತಮಿಳುನಾಡಿಗೆ ನೀಡಲಾಗುತ್ತಿದೆ. ಕಳೆದ ಜೂನ್‌ನಿಂದ ಇಲ್ಲಿಯವರೆಗೂ ತಮಿಳುನಾಡಿಗೆ 2.4 ಟಿ.ಎಂ.ಸಿ. ನೀರು ಬಿಡುಗಡೆ ಮಾಡಲಾಗಿದೆ ಎಂದರು.
ಕಾವೇರಿ ಕಣಿವೆ ಭಾಗದಲ್ಲಿ ಮುಂದೆ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಹಾಗಾಗಿ ಕೃಷಿಗೆ ಈ ನೀರು ಬಿಡದಿರುವ ಬಗ್ಗೆ ಈಗಲೇ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ. ಮುಂದೆ ಪರಿಸ್ಥಿತಿಯನ್ನು ನೋಡಿಕೊಂಡು ತೀರ್ಮಾನ ಮಾಡುತ್ತೇವೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗಣಿ ಹಾಗೂ ಭೂ ವಿಜ್ಞಾನ ಸಚಿವ ವಿನಯ್‌ಕುಲಕರ್ಣಿ ಉಪಸ್ಥಿತರಿದ್ದರು.

Leave a Comment