ಗೋರಖ್‌ಪುರ: ಸತ್ತ ಮಕ್ಕಳ ಸಂಖ್ಯೆ 70ಕ್ಕೇರಿಕೆ

ಗೋರಖ್‌ಪುರ, (ಉ.ಪ್ರ), ಆ.೧೩: ಉತ್ತರ ಪ್ರದೇಶದ ಗೋರಖ್‌ಪುರ ಬಾಬಾ ರಾಘವ್‌ದಾಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಮತ್ತೊಂದು ಮಗು ಸಾವನ್ನಪ್ಪುವುದರೊಂದಿಗೆ ಈ ಆಸ್ಪತ್ರೆಯಲ್ಲಿ ಶುಕ್ರವಾರದಿಂದ ಮೃತಪಟ್ಟ ಮಕ್ಕಳ ಸಂಖ್ಯೆ ೭೦ಕ್ಕೇರಿದೆ. ಶುಕ್ರವಾರದವರೆಗೆ ಒಟ್ಟು ೬೦ ನವಜಾತ ಶಿಶು ಮೃತಪಟ್ಟಿದ್ದರೆ ಶನಿವಾರ ೧೧ ಮಕ್ಕಳು ಮೃತಪಟ್ಟಿದ್ದವು.

ಗೋರಖ್‌ಪುರ ದುರಂತದ ಬಗ್ಗೆ ಮ್ಯಾಜಿಸ್ಟೇಟ್ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

ಆಮ್ಲಜನಕ ಕೊರತೆಯಿಂದ ಮಕ್ಕಳು ಮೃತಪಟ್ಟಿದ್ದಾರೋ ಅಥವಾ ಇನ್ಯಾವುದೋ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಹಿರಿಯ ಸಚಿವರಿಗೆ ಅವರು ಸೂಚನೆ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದು ಖಚಿತ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಬಿಆರ್‌ಡಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರನ್ನು ಈಗಾಗಲೇ ಅಮಾನತುಮಾಡಲಾಗಿದೆ. ಪ್ರಕರಣದ ಬಗ್ಗೆ ತನಿಖೆ ಆರಂಭಗೊಂಡಿದೆ.ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆದಿತ್ಯನಾಥ್ ತಿಳಿಸಿದ್ದಾರೆ.

ಕಾಲೇಜಿ ಪ್ರಾಂಶುಪಾಲರನ್ನು ಅಮಾನತು ಮಾಡಿದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್, ಗೋರಖ್‌ಪುರ ದುರಂತದ ಬಗ್ಗೆ ಸರ್ಕಾರ ಜನರ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ. ಈ ವಿಷಯವನ್ನು ಸರ್ವ ಪಕ್ಷ ನಿಯೋಗ ಪರಿಶೀಲಿಸಲು ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಮಾತ್ರವಲ್ಲ ರಾಜ್ಯದ ಆರೋಗ್ಯ ಸಚಿವ ಸಿದ್ದಾರ್ಥನಾಥ್ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಯೋಗಿ, ನಡ್ಡಾ ಭೇಟಿ: ೭೦ ನವಜಾತ ಶಿಶುಗಳು ಸಾವನ್ನಪ್ಪಿದ ಬಾಬಾ ರಾಘವ್‌ದಾಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಇಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಮತ್ತು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಭೇಟಿ ನೀಡಿ ಪರಿಶೀಲಿಸಿದರು.

Leave a Comment