ಗೋಮಾಳದಲ್ಲಿ ಬಡವರಿಗೆ ಮನೆ ನಿರ್ಮಿಸಲು ಒತ್ತಾಯ

ದಾವಣಗೆರೆ.ಜು.11; ಹೊನ್ನಮರಡಿ ಆಂಜನೇಯ ನಗರದಲ್ಲಿರುವ ಗೋಮಾಳ ಜಾಗದಲ್ಲಿ ಬಡವರಿಗೆ ಆಶ್ರಯಯೋಜನೆಯಡಿ ಮನೆ ನಿರ್ಮಿಸಬೇಕೆಂದು ಒತ್ತಾಯಿಸಿ ಸುವರ್ಣ ಕರ್ನಾಟಕ ವೇದಿಕೆಯ ಕಾರ್ಯಕರ್ತರು ಜಯದೇವ ವೃತ್ತದಲ್ಲಿಂದು ಪ್ರತಿಭಟನೆ ನಡೆಸಿದರು. ಹೊನ್ನಮರಡಿ ಆಂಜನೇಯ ನಗರ (ಕಾರಿಗನೂರು ಕ್ರಾಸ್) ನಲ್ಲಿರುವ ಸರ್ವೆ ನಂ. 13 ರಲ್ಲಿ 33.35 ಎಕರೆ ಜಾಗವಿದ್ದು, ಈ ಜಾಗದಲ್ಲಿ ಈಗಾಗಲೇ ಊರಿನ ಗ್ರಾಮಸ್ಥರಿಗೆ 1988-90 ರ ಸಾಲಿನಲ್ಲಿ ಅಂದಿನ ಗ್ರಾಮ ಪಂಚಾಯಿತಿಯವರು 420 ಸೈಟುಗಳನ್ನು ಮಾಡಿ ಹಂಚಿದ್ದು, ಇನ್ನು ಉಳಿದ ಗ್ರಾಮಸ್ಥರಿಗೆ ನೀಡಿಲ್ಲ. ಕಳೆದ 25 ವರ್ಷಗಳಿಂದ ಇದೇ ಗ್ರಾಮದಲ್ಲಿ ವಾಸವಿದ್ದು, ಕೃಷಿಕೆಲಸ ಮಾಡಿಕೊಂಡು ಮನೆ ಬಾಡಿಗೆ, ಮಕ್ಕಳ ಶುಲ್ಕ ಕಟ್ಟಿಕೊಂಡು ಜೀವನ ಸಾಗಿಸುವುದು ಕಷ್ಟಕರವಾಗಿದೆ. ಹೀಗಾಗಿ ಸರ್ವೆ ನಂ.13 ರಲ್ಲಿ 8-10 ಎಕರೆ ಸರ್ಕಾರಿ ಗೋಮಾಳ ಜಾಗವಿದ್ದು, ಈ ಜಾಗದಲ್ಲಿ ಮನೆ ಸಿಗದೆ ವಂಚಿತರಾಗಿರುವ ಗ್ರಾಮದಲ್ಲಿ ವಾಸವಾಗಿರುವ ಗ್ರಾಮಸ್ಥರಿಗೆ ಆಶ್ರಯಯೋಜನೆ ಮನೆ ಮಾಡಿಕೊಡಬೇಕು. ಕಳೆದ ಕೆಲ ವರ್ಷಗಳ ಹಿಂದೆ ಅದೇ ಸರ್ವೆ ನಂ. 13 ರಲ್ಲಿ 5 ಎಕರೆ ಜಾಗವನ್ನು ಆ ಗ್ರಾಮದ ಶಾಲೆಗೆ ನೀಡಿದ್ದರು. ಆ ಶಾಲೆಯಲ್ಲಿ ಈಗಿನ ಮಕ್ಕಳ ಸಂಖ್ಯೆ ಕಡಿಮೆ ಇದ್ದು, 5 ಎಕರೆ ಜಾಗದಲ್ಲಿ ಇನ್ನು ಹೆಚ್ಚುವರಿ ಜಾಗ ಉಳಿದಿರುತ್ತದೆ. ಉಳಿದಿರುವ ಜಾಗವನ್ನು ಸಂಸ್ಥೆಯವರು ಖಾಸಗಿ ಶಾಲೆ, ಟವರ್ ನಿರ್ಮಾಣಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ ಇದನ್ನು ತಡೆಯಬೇಕು. ಹಾಗೂ ಸ್ಥಳ ಪರಿಶೀಲನೆ ಮಾಡಿ ಆ ಶಾಲೆಗೆ 5 ಎಕರೆ ಜಾಗ ಅಗತ್ಯವಿದೆ ಎಂದು ಪರಿಶೀಲಿಸಿ ಆ ಶಾಲೆಗೆ ಎಷ್ಟು ಜಾಗದ ಅವಶ್ಯಕತೆ ಇದೆಯೋ ಅಷ್ಟನ್ನು ನೀಡಿ ಉಳಿದ ಜಾಗದಲ್ಲಿ, ನಿವೇಶನ ವಂಚಿತರಾದ ಊರಿನ ಗ್ರಾಮಸ್ಥರಿಗೆ ಆಶ್ರಯ ಯೋಜನೆ ಮನೆ ಮಾಡಿಕೊಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಜಯದೇವವೃತ್ತದಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ತಹಶೀಲ್ದಾರರ ಕಛೇರಿ ಹಾಗೂ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಸಂತೋಷ್‍ಕುಮಾರ್, ಶಾಂತ್‍ಕುಮಾರ್, ಮಂಜುನಾಥ್, ಪರಶುರಾಮ್, ಅಂಜಿನಪ್ಪ, ಬಸವರಾಜ್, ಶಿವ, ಮಂಜುನಾಥ್, ಬಸವರಾಜ್, ಪ್ರಶಾಂತ್, ಶಿವಕುಮಾರ್, ಭೀಮಣ್ಣ ಮತ್ತಿತರರಿದ್ದರು.

Leave a Comment