ಗೋದಾಮುಗಳಲ್ಲಿ ಬೆಂಕಿ: 1 ಕೋಟಿ ರೂ.ಮೌಲ್ಯದ ಕೃಷಿ ಉತ್ಪನ್ನ ಭಸ್ಮ

ಕಡಪಾ.ಆಂಧ್ರಪ್ರದೇಶ.ಏ.15.ಗೋದಾಮುಗಳಲ್ಲಿ ಸಂಗ್ರಹಿಸಿಡಲಾಗಿದ್ದ ಕಡಲೆ ಬೇಳೆ, ಜೋಳ ಮತ್ತು ಹರಿಶಿನ ಕೊಂಬುಗಳು ಸೇರಿದಂತೆ ಒಂದು ಕೋಟಿ ರೂ.ಗೂ ಹೆಚ್ಚು ಮೌಲ್ಯದ ಕೃಷಿ ಉತ್ಪನ್ನಗಳು ನಾಶವಾಗಿರುವ  ಎರಡು ಪ್ರತ್ಯೇಕ ಘಟನೆಗಳು ಜಿಲ್ಲೆಯಲ್ಲಿ ನಡೆದಿವೆ.

ಜಿಲ್ಲೆಯ ಲಿಂಗಲ ಮಂಡಲದಲ್ಲಿನ ದೊಂಡ್ಲವಾಗುವಿನಲ್ಲಿರುವ ಗ್ರಾಮೀಣ ರೈತರ ಗೋದಾಮಿನಲ್ಲಿ ಬೆಂಕಿ ವ್ಯಾಪಿಸಿ, ಅದರಲ್ಲಿ ಸಂಗ್ರಹಿಸಿಡಲಾಗಿದ್ದ 80 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಜೋಳ, ಕಡಲೆ ಬೇಳೆ ಮತ್ತು ದನಿಯಾ ಬೀಜಗಳು ನಾಶಗೊಂಡಿವೆ. ಬೆಂಕಿಯಿಂದ ಕೃಷಿ ಉತ್ಪನ್ನಗಳಿದ್ದ ಸಾವಿರಾರು ಚೀಲಗಳು ಸುಟ್ಟು ಬೂದಿಯಾಗಿವೆ.

ಬಳಿಕ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿಯಿಂದ ತಾವು ಬೆಳೆದಿದ್ದ ಕೃಷಿ ಉತ್ಪನ್ನಗಳು ನಾಶಗೊಂಡು ಭಾರಿ ನಷ್ಟವಾಗಿದೆ ಎಂದು ನೂರಾರು ರೈತರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಬೆಲೆ ಏರಿಕೆಯಾದ ಮಾರಾಟ ಮಾಡಲು ಕೃಷಿ ಉತ್ಪನ್ನಗಳನ್ನು ರೈತರು ಗೋದಾಮಿನಲ್ಲಿ ಸಂಗ್ರಹಿಸಿದ್ದರು. ನಷ್ಟಕ್ಕೆ ಪರಿಹಾರ ಒದಗಿಸಿಕೊಡುವಂತೆ ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದ ಈ ಅವಘಡ ಸಂಭವಿಸಿರಬಹುದು ಎನ್ನಲಾಗಿದೆ.

ಮತ್ತೊಂದು ಘಟನೆಯಲ್ಲಿ ಇದೇ ಜಿಲ್ಲೆಯ ದೇವುನಿ ಕಾಕಪೊ ಗ್ರಾಮದ ಖಾಸಗಿ ಗೋದಾಮಿನಲ್ಲಿ ಬೆಂಕಿ ಆಕಸ್ಮಿಕವಾಗಿ 20 ಲಕ್ಷ ರೂ. ಮೌಲ್ಯದ 350 ಕ್ವಿಂಟಲ್‍ ಅರಿಶಿನ ಕೊಂಬುಗಳು ನಾಶವಾಗಿವೆ. ಗೋದಾಮಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ವ್ಯಾಪಿಸಿ ಈ ಅನಾಹುತ ಸಂಭವಿಸಿದೆ. ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ತೆರಳಿ ಬೆಂಕಿಯನ್ನು ನಂದಿಸಿವೆ. ಈ ಘಟನೆಗೂ ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ ಕಾರಣವಿರಬಹುದು ಎನ್ನಲಾಗಿದೆ.

Leave a Comment