ಗೊಂಬೆ ಹೇಳುತೈತಿ ನೀನೆ ರಾಜಕುಮಾರ

ಚಿತ್ರ : ರಾಜಕುಮಾರ
ನಿರ್ದೇಶಕ : ಸಂತೋಷ್ ಆನಂದ್‌ರಾಮ್
ನಿರ್ಮಾಪಕ : ವಿಜಯ್ ಕಿರಗಂದೂರು
ತಾರಾಗಣ : ಪುನೀತ್ ರಾಜ್‌ಕುಮಾರ್, ಪ್ರಿಯ ಆನಂದ್, ಶರತ್ ಕುಮಾರ್, ಪ್ರಕಾಶ್ ರೈ, ಚಿಕ್ಕಣ್ಣ, ರಂಗಾಯಣ ರಘು ಮುಂತಾದವರು

ಆಸ್ಟ್ರೇಲಿಯಾದಲ್ಲಿ ಭಾರತದ ರಾಷ್ಟ್ರಧ್ವಜ ನೆಲಕ್ಕೆ ಬೀಳುವ ಮುನ್ನ ಹಿಡಿದುಕೊಳ್ಳುವ ಮೂಲಕ ಪುನೀತ್ ರಾಜ್‌ಕುಮಾರ್ ರಾಜಕುಮಾರ್ ಚಿತ್ರದಲ್ಲಿ ತೆರೆಮೇಲೆ ಕಾಣಿಸಿಕೊಳ್ಳುತ್ತಾರೆ. ಅಪ್ಪು ಈ ರೋಚಕ ತೆರೆ ಪ್ರವೇಶವೇ ಸಿಳ್ಳೆಗಿಟ್ಟಿಸುತ್ತದೆ ನಂತರದಲ್ಲಿ ಅರ್ಧ ಸಿನೆಮಾ ಆಸ್ಟ್ರೇಲಿಯಾದಲ್ಲಿ ನಡೆಯುತ್ತದೆ. ಒಂದು ಕುಟುಂಬ ಮತ್ತು ಸಂಬಂಧಗಳು, ಹುಡುಗಿಯೊಂದಿಗಿನ ಪ್ರೀತಿ ಹೇಗರಬೇಕೆನ್ನುವುದನ್ನು ಈ ಭಾಗದಲ್ಲಿ ಲವಲವಿಕೆಯಿಂದ ಮನಸು ಮುದಗೊಳ್ಳುವಂತೆ ನಿರೂಪಿಸಲಾಗಿದೆ. ಹುಡುಗಿಯ ಪ್ರೀತಿಗಿಂತ ಪ್ರೀತಿ ಎಂದರೆ ಏನು ಎನ್ನುವುದನ್ನು ಹೇಳಿಕೊಟ್ಟ ತಂದೆಯೇ ಸರ್ವಸ್ವ ಎನ್ನುವ ಮಗ, ಆ ತಂದೆ-ಮಗನ ಪ್ರೀತಿಯ ಬಾಂಧವ್ಯವೇ ಚಿತ್ರದ ಜೀವಾಳ. ಇಲ್ಲಿ ನಿಜಕ್ಕೂ ಪ್ರೇಕ್ಷಕರಿಗೆ ಕಾಣಿಸುವುದು ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್.
ಅಪ್ಪುವಿನ ಇಡೀ ಕುಟುಂಬ ವಿಮಾನ ದುರಂತದಲ್ಲಿ ಸಾವಿಗೀಡಾಗುತ್ತದೆ. ಎಲ್ಲರನ್ನು ಕಳೆದುಕೊಂಡ ಅಪ್ಪು ಭಾರತಕ್ಕೆ ಮರಳುತ್ತಾನೆ ಆಗೊಂದು ರಹಸ್ಯ ಬಯಲಾಗುತ್ತದೆ. ಅನಾಥನಾದ ಅವನು ಬಾಲ್ಯದಲ್ಲಿ ಬೆಳೆದಿದ್ದ ಕಸ್ತೂರಿ ನಿವಾಸ ಅದಾಗಿರುತ್ತದೆ. ಅದೊಂದು ವೃದ್ಧಾಶ್ರಮ ಅಲ್ಲಿರುವವರೇ ಅವನ ಕುಟುಂಬವಾಗುತ್ತಾರೆ. ಆದರೆ ಅವನನ್ನು ಬೆಳೆಸಿದ್ದ ತಂದೆ, ನಮಗೆ ಎಲ್ಲವನ್ನೂ ಕೊಟ್ಟ ದೇಶಕ್ಕೆ ನಾವೇನಾದರು ಕೊಡುಗೆ ನೀಡಬೇಕೆನ್ನುವ ದ್ಯೇಯದಿಂದಾಗಿ ಪೊಲಿಯೋ ಪೀಡಿತ ಮಕ್ಕಳಿಗೆ ಲಸಿಕೆ ಒದಗಿಸಲು ನೆರವಾಗಿರುತ್ತಾರೆ. ಪ್ರಕಾಶ್ ರೈ ಗೃಹ ಸಚಿವನಾಗಲು ಸಿಕೆಗೆ ಬೇರೆನೋ ಔಷಧ ಮಿಶ್ರಗೊಳ್ಳುವಂತೆ ಮಾಡುತ್ತಾನೆ ಮಕ್ಕಳ ಆರೋಗ್ಯಕ್ಕೇ ಹಾನಿಯಾಗುತ್ತದೆ. ಆಗಿದ್ದ ಗೃಹ ಸಚಿವ ಜೈಲು ಸೇರಿದರೆ, ಆ ಕಳಂಕ ಅಪ್ಪು ತಂದೆ ಮೇಲೆ ಬಂದು ಜನರ ಆಕ್ರೋಶಕ್ಕೆ ಕಾರಣವಾಗಿರುತ್ತದೆ. ಸತ್ತಿರುವ ತಂದೆಗೆ ಅಂಟಿದ್ದ ಈ ಕಳಂಕವನ್ನು ಅಪ್ಪು ತೊಡೆಯುತ್ತಾನೆ. ಇದ್ದಕ್ಕಾಗಿ ನಡೆಸುವ ತಂತ್ರ, ಪ್ರಕಾಶ್‌ರೈ ಕಳಿಸುವ ಗೂಂಡಾಗಳ ಜೊತೆಗೆ ಹೊಡೆದಾಟ ಒಂದು ಭಾಗವಾದರೆ. ಆಶ್ರಮದಲ್ಲಿರುವ ಪ್ರತಿಯೊಬ್ಬರ ಕಾಳಜಿ ವಹಿಸಿ ಖುಷಿಯಾಗಿರುವಂತೆ ನೋಡಿಕೊಳ್ಳುತ್ತಾನೆ. ಅವರುಗಳು ತಮ್ಮ ಕುಂಟುಂಬದೊಂದಿಗೆ ಮರಳಿ ಸೇರುವಂತೆ ಮಾಡುವುದು ಮಾತ್ರವಲ್ಲ ಸಮಾಜ ಪರಿವರ್ತನೆಯ ಕೆಲಸವೂ ಅಪ್ಪುವಿನಿಂದ ಆಗುತ್ತದೆ. ಚಿತ್ರದ ದ್ವಿತೀಯಾರ್ಧದಲ್ಲಿ ಅಪ್ಪು ನಿಜವಾದ ರಾಜಕುಮಾರನಾಗುತ್ತಾನೆ. ಚಿತ್ರದ ಕಥೆ ಬರೆಯುವುದಲ್ಲ್ಲ ನೋಡಿಸಿಕೊಳ್ಳುವಂಥದ್ದು. ಪ್ರೇಕ್ಷಕರ ಮನಮಿಡಿಯುತ್ತದೆ.
ಎಲ್ಲೂ ಎಲ್ಲೇ ಮೀರದೆ ಸದಭಿರುಚಿಗೆ ನಿದರ್ಶನವಾಗುವಂತೆ ಚಿತ್ರಿತವಾಗಿದೆ ರಾಜಕುಮಾರ. ನಿರ್ದೆಶಕ ಸಂತೋಷ್ ಆನಂದ ರಾಮ್ ತಾವು ಹೇಳಿದ್ದಂತೆ ವರನಟ ಡಾ. ರಾಜ್‌ಕುಮಾರ್ ಅವರ ಆದರ್ಶ ಮತ್ತು ಪಕ್ಕಾ ರಂಜನೆಯನ್ನು ಕಟ್ಟಿಕೊಟ್ಟಿದ್ದಾರೆ. ರೆಗ್ಯುಲರ್ ಕಮರ್ಷಿಯಲ್ ಸಿನೆಮಾಗಳಿಗಿಂತ ಭಿನ್ನವಾಗಿದೆ ಎಷ್ಟರಮಟ್ಟಿಗೆಂದರೆ ಖಳನಟ ಮನಃಪರಿವರ್ತನೆಗೊಂಡು ಪೊಲೀಸರಿಗೆ ಶರಣಾಗುತ್ತಾನೆ. ಸಾಧು ಕೋಕಿಲ ಅವರ ಪಾತ್ರದ್ದು ಸ್ವಲ್ಪ ದ್ವಂದ್ವಾರ್ಥ ಎನ್ನುವುದು ಬಿಟ್ಟರೆ ರಂಗಾಯಣ ರಘು, ಚಿಕ್ಕಣ್ಣ ಪಾತ್ರಗಳ ಹಾಸ್ಯ ಕಚಗುಳಿ ಇಡುತ್ತದೆ. ತಂದೆ ಪಾತ್ರದಲ್ಲಿ ನಟಿಸಿರುವ ಶರತ್ ಕುಮಾರ್ ವಿಶೇಷವಾಗಿ ಗಮನ ಸೆಳೆಯುತ್ತಾರೆ. ನಾಯಕಿಯಾಗಿರುವ ಪ್ರಿಯ ಆನಂದ್ ಡಾನ್ಸ್‌ನಿಂದ ಮಾತ್ರವಲ್ಲ ಅಂದ ಮತ್ತು ನಟನೆಯಿಂದಲೂ ಇಷ್ಟವಾಗುತ್ತಾರೆ. ಸಂಗೀತ ನಿರ್ದೇಶಕ ಹರಿಕೃಷ್ಣ ಆಡಿಸಿನೋಡು ಹಾಡಿನ ರಾಗ ಬಳಸಿರುವುದನ್ನು ಬಿಟ್ಟರೆ ಕೊಟ್ಟಿರುವ ಹಾಡುಗಳು ಹೊಸರಾಗದಲ್ಲಿ ವಿಭಿನ್ನವಾಗಿವೆ. ಡಾನ್ಸ್‌ನಿಂದ ಮಿಂಚುಹರಿಸುವ ಪುನೀತ್ ರಾಜ್‌ಕುಮಾರ್ ನಟನೆಯಲ್ಲಿ ಎಲ್ಲೂ ಅಬ್ಬರವಿಲ್ಲ ಕಸ್ತೂರಿ ನೀವಾಸ ಚಿತ್ರದಲ್ಲಿ ಡಾ. ರಾಜಕುಮಾರ್ ಅವರ ಮನೋಜ್ಞ ಅಭಿನಯವನ್ನು ನೆನಪಿಸುವುದು ಸುಳ್ಳಲ್ಲ. ಈ ದೃಷ್ಟಿಯಿಂದಲೂ ಅಪ್ಪು ಅವ್ರಿಗೆ ಸಲ್ಲುತ್ತದೆ ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ.
-ಕೆ.ಬಿ. ಪಂಕಜ

Leave a Comment