ಗೆಳೆಯನಿಗಾಗಿ ಮೊಳಕಾಲ್ಮೂರಿನಲ್ಲಿ ವಾಸಿಸಲು ಬಂದ ಜನಾರ್ದನ ರೆಡ್ಡಿ

ಚಿತ್ರದುರ್ಗ, ಏ. ೧೬- ಗೆಳೆಯ ಶ್ರೀರಾಮುಲು ಗೆಲುವಿಗಾಗಿ ಗಣಿಧಣಿ ಜನಾರ್ದನ ರೆಡ್ಡಿ ಮೊಳಕಾಲ್ಮೂರಿನಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಶತಾಯಗತಾಯ ಗೆಳೆಯ ರಾಮುಲು ಗೆಲುವಿಗೆ ಪಣತೊಟ್ಟಿದ್ದಾರೆ. ಅದಕ್ಕಾಗಿಯೇ ಮೊಳಕಾಲ್ಮೂರು ತಾಲ್ಲೂಕಿನ ಹಾನಗಲ್ ಸಮೀಪದ ಮನೆಯೊಂದರಲ್ಲಿ ಇನ್ನು 3-4 ದಿನಗಳಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಚುನಾವಣೆ ಮುಗಿಯವರೆಗೂ ಕ್ಷೇತ್ರದಲ್ಲಿದ್ದು ಗೆಳೆಯ ಶ್ರೀರಾಮುಲುಗೆ ಸಾಥ್ ನೀಡಲಿದ್ದಾರೆ. ಜನಾರ್ದನ ರೆಡ್ಡಿಗಾಗಿಯೇ ಮೊಳಕಾಲ್ಮೂರಿನ ಡಾ.ವೆಂಕಟೇಶ್ ಎಂಬುವರು ಕೇವಲ 101 ರೂ ಬಾಡಿಗೆ ನೀಡಿದ್ದಾರೆ.ಈ ಮನೆ ಎರಡು ಮಹಡಿ ಹೊಂದಿದ್ದು, ಸಂಪೂರ್ಣವಾಗಿ ಹವಾನಿಯಂತ್ರಿತವಾಗಿದೆ.ಮೇಲ್ಭಾಗದಲ್ಲಿ ಐದು ಕೋಣೆಗಳಿದ್ದು, ಇದರಲ್ಲಿ ವಿಐಪಿ ಹೋಟೆಲ್ ರೀತಿಯಲ್ಲಿ ಎರಡು ವಿಶೇಷ ಕೋಣೆಗಳಿವೆ. ಎಲ್ಲಾ ಕೋಣೆಗಳಲ್ಲಿವೇ ಶೋಕೇಸ್, ನವೀನ ಮಾದರಿಯ ಅಲಂಕಾರಿಕ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ವಿಶೇಷವೆಂದರೆ ಮನೆಯ ತುಂಬೆಲ್ಲಾ ಶ್ರೀಲಕ್ಷ್ಮಿವೆಂಕಟೇಶ್ವರ ದೇವರ ಫೋಟೋಗಳು ಹೆಚ್ಚಿನದಾಗಿರುವುದು. ಇನ್ನು ಕೆಳಭಾಗದ ಮನೆಯಲ್ಲಿ ಒಂದು ವಿಐಪಿ ಬೆಡ್ ರೂ, ಡೈನಿಂಗ್ ಹಾಲ್, ವಿಐಪಿ ಸಿಟಿಂಗ್ ಹಾಲ್ ಗಳಿದ್ದು, ಗುಪ್ತ ಸಭೆಗಳನ್ನು ನಡೆಸಲು ಅನುಕೂಲವಾಗುವ ರೀತಿಯಲ್ಲಿವೆ. 24 ಗಂಟೆ ವಿದ್ಯುತ್ ಸೌಕರ್ಯ ಹಾಗೂ ಸೋಲಾರ್ ವ್ಯವಸ್ಥೆ ಸಹ ಇದೆ. ಇನ್ನೇನು ನಾಮಪತ್ರ ಸಲ್ಲಿಸುವ ದಿನಾಂಕ ಹತ್ತಿರ ಬರುತ್ತಿದೆ. ಅದಕ್ಕಾಗಿಯೇ ಶೀಘ್ರದಲ್ಲಿ ಜನಾರ್ಧನ ರೆಡ್ಡಿ ಕುಟುಂಬ ಇಲ್ಲಿಗೆ ಆಗಮಿಸಲಿದೆ. ಈಗಾಗಲೇ ರೆಡ್ಡಿ ಸಹೋದರ ಸೋಮಶೇಖರ್ ರೆಡ್ಡಿ ಮನೆ ಮಾಲೀಕರಿಂದ ಕೀ ಪಡೆದಿದ್ದಾರೆ. ಅಮಾವಾಸ್ಯೆ ಮುಗಿದ ಕೂಡಲೇ ಇಲ್ಲಿಗೆ ಸ್ಥಳಾಂತರಗೊಳ್ಳಲಿದ್ದಾರೆ ಎಂದು ರೆಡ್ಡಿ ಆಪ್ತರು ತಿಳಿಸಿದ್ದಾರೆ.

Leave a Comment