ಗೆಲ್ಲುವ ಕುದುರೆಗಳಿಗಾಗಿ ಶೋಧ: ಅನರ್ಹರ ಚಿತ್ತ ಸುಪ್ರೀಂನತ್ತ

ಬೆಂಗಳೂರು, ಸೆ. ೨೨- ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಂಡಿರುವ ಕಾಂಗ್ರೆಸ್ – ಜೆಡಿಎಸ್ ಪಕ್ಷಗಳ 17 ಶಾಸಕರ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಮುಂದಿನ ತಿಂಗಳ 21ಕ್ಕೆ ಉಪಚುನಾವಣೆ ನಡೆಸಲು ಚುನಾವಣಾ ಆಯೋಗ ದಿಢೀರ್ ಕೈಗೊಂಡ ತೀರ್ಮಾನದಿಂದಾಗಿ `ಗೆಲ್ಲುವ ಕುದುರೆ’ಗಳ ಶೋಧಕಾರ್ಯ ಬಿರುಸುಗೊಂಡಿದೆ.

* ವಿಧಾನಸಭೆಗೆ ಉಪ ಚುನಾವಣೆ, ಗರಿಗೆದರಿದ ಚಟುವಟಿಕೆ.

* ಗೆಲ್ಲುವ ಕುದುರೆಗಳಿಗಾಗಿ ಶೋಧಕಾರ್ಯಾಚರಣೆ ಚುರುಕು.
* ಉಪಸಮರ ಬಿಜೆಪಿ-ಕಾಂಗ್ರೆಸ್, ಜೆಡಿಎಸ್‌ಗೆ ಪ್ರತಿಷ್ಠೆ ಪ್ರಶ್ನೆ.
* 15 ಕ್ಷೇತ್ರಗಳಲ್ಲಿ ಗೆಲ್ಲಲ್ಲೇಬೇಕೆಂಬ ಛಲದೊಂದಿಗೆ ಹೋರಾಡುವ ಹಂಬಲ.
* ಅ. 4 ನಾಮಪತ್ರ ಸಲ್ಲಿಕೆಗೆ ಕೊನೇ ದಿನ.
* ಹುರಿಯಾಳುಗಳ ಆಯ್ಕೆಗೆ ಉಳಿದಿರುವುದು ಕೇವಲ 2 ವಾರ.

ಉಪಚುನಾವಣೆ ಘೋಷಣೆಯಾಗಿರುವುದರಿಂದ ರಾಜ್ಯರಾಜಕಾರಣದಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ನಾಯಕರು ಗೆಲ್ಲುವ ಸಾಮರ್ಥ್ಯವುಳ್ಳ ಅಭ್ಯರ್ಥಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಅ. 4ರಂದು ಕೊನೆಯ ದಿನವಾಗಿದ್ದು, ಅಭ್ಯರ್ಥಿಗಳ ಆಯ್ಕೆಗೆ ಕೇವಲ ಕೇವಲ 2 ವಾರಗಳ ಕಾಲಾವಕಾಶವಿದ್ದು, ಎಲ್ಲವೂ ತರಾತುರಿಯಲ್ಲೇ ಮುಗಿಸಬೇಕಾದಂತಹ ಅನಿವಾರ್ಯತೆ ಎದುರಾಗಿದೆ.
ಈ ನಡುವೆ ತಮ್ಮನ್ನು ಅನರ್ಹಗೊಳಿಸಿದ ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಆದೇಶದ ವಿರುದ್ಧ ಅನರ್ಹಗೊಂಡ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ನಾಳೆ ಈ ಕುರಿತು ವಿಚಾರಣೆ ನಡೆಯಲಿದೆ.
ನಾಳೆ ಹೊರ ಬರಲಿರುವ ತೀರ್ಪು ಈ ಶಾಸಕರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ. ಈ ಶಾಸಕರು ಉಪ ಚುನಾವಣೆ ಯಲ್ಲಿ ಸ್ಪರ್ಧಿಸಲು ನ್ಯಾಯಾಲಯ ಅವಕಾಶ ನೀಡಲಿದೆಯೇ ಅಥವಾ 2023ರವರೆಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲದಂತೆ ರಮೇಶ್ ಕುಮಾರ್ ನೀಡಿರುವ ಆದೇಶವನ್ನು ಎತ್ತಿ ಹಿಡಿಯಲಿದೆಯೇ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಿನ್ನೆ ರಾತ್ರಿಯೇ ದೆಹಲಿಗೆ ತೆರಳಿದ್ದು, ಅನರ್ಹ ಶಾಸಕರಲ್ಲುಂಟಾಗಿರುವ ತಳಮಳ ಹಾಗೂ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಕೈಗೊಳ್ಳಬೇಕಾದ ಸಿದ್ಧತೆ ಮತ್ತು ರಣನೀತಿ ರೂಪಿಸುವ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.
ಅನರ್ಹಗೊಂಡಿರುವ ಶಾಸಕರ ಪೈಕಿ 15 ಕ್ಷೇತ್ರಗಳಿಗೆ ಮಾತ್ರ ಉಪಚುನಾವಣೆ ಘೋಷಣೆಯಾಗಿರುವುದರಿಂದ ಒಂದು ವೇಳೆ ಅವರು ಸ್ಪರ್ಧಿಸಲು ಸುಪ್ರೀಂಕೋರ್ಟ್ ಅವಕಾಶ ನೀಡದಿದ್ದರೆ ಅವರ ಕುಟುಂಬದ ಸದಸ್ಯರನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆದಿದೆ.
ಅನರ್ಹಗೊಂಡಿರುವ ಶಾಸಕರು ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಸ್ಪರ್ಧಿಸಲು ಅವಕಾಶ ಕಳೆದುಕೊಂಡಿದ್ದು, ಅವರ ವಾರಸುದಾರರು ಚುನಾವಣೆಗೆ ಸ್ಪರ್ಧಿಸಲು ಬಯಸಿದಲ್ಲಿ ಉಪಚುನಾವಣೆಯಲ್ಲಿ ಯಾವ ಚಿಹ್ನೆಯಡಿ ಕಣಕ್ಕಿಳಿಯಬೇಕು ಎಂಬುದು ಯಕ್ಷಪ್ರಶ್ನೆಯಾಗಿ ಪರಿಣಮಿಸಿದೆ.
ಕಾಂಗ್ರೆಸ್ ಮತ್ತು ಜೆ‌ಡಿಎಸ್ ನಾಯಕರು ಅನರ್ಹಗೊಂಡಿರುವ ಶಾಸಕರ ಕ್ಷೇತ್ರಗಳಲ್ಲಿ ಈಗಾಗಲೇ ಸಭೆ-ಸಮಾರಂಭ, ಸಮಾವೇಶಗಳನ್ನು ಏರ್ಪಡಿಸುತ್ತಿದ್ದು, ಮಾತೃ ಪಕ್ಷಗಳಿಗೆ ಕೈಕೊಟ್ಟಿರುವ ಅನರ್ಹರಿಗೆ ತಕ್ಕಪಾಠ ಕಲಿಸಬೇಕೆಂಬ ಛಲದೊಂದಿಗೆ ಕಾರ್ಯತಂತ್ರಗಳನ್ನು ರೂಪಿಸಿದ್ದಾರೆ.

 

Leave a Comment