ಗೆಲುವು ನಮ್ಮದೇ: ತೇಜಸ್ವಿನಿ ಅನಂತ್

ತುಮಕೂರು, ಮಾ. ೧೪- ದೇಶದಲ್ಲೆಲ್ಲ ನರೇಂದ್ರ ಮೋದಿ ಅವರ ಅಲೆ ಇದೆ. ಪ್ರಧಾನಿಯಾಗಿ ಮಾಡಿರುವ ದೇಶದ ಅಭಿವೃದ್ಧಿ ಕೆಲಸ ಹಾಗೂ ದೇಶ ಭಕ್ತಿಯ ಅಲೆಯ ನಡುವೆ ಎದುರಾಳಿಗಳು ತೇಲಿ ಹೋಗಲಿದ್ದಾರೆ. ಮುಂದಿನ ಪ್ರಧಾನಿಯೂ ಮೋದಿ ಅವರೇ ಆಗಲಿದ್ದಾರೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿನಿ ಅನಂತಕುಮಾರ್ ಹೇಳಿದರು.

ನಗರದ ಸಿದ್ದಗಂಗಾ ಮಠಕ್ಕೆ  ಭೇಟಿ ನೀಡಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ದೇಶದ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅಲ್ಲದೆ ಅವರು ದೇಶಭಕ್ತರಾಗಿದ್ದಾರೆ ಎಂದರು.

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತಮ್ಮ ಸ್ಪರ್ಧೆಗೆ ಪಕ್ಷದ ವರಿಷ್ಠರು ಸಮ್ಮತಿಸಿದ್ದಾರೆ. ಮೋದಿಯವರ ಅಭಿವೃದ್ಧಿ ಕೆಲಸ, ದೇಶಭಕ್ತಿಯ ಅಲೆ ನಮ್ಮ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ಜತೆಗೆ ದಿ. ಅನಂತಕುಮಾರ್ ಅವರು ಸಲ್ಲಿಸಿರುವ 22 ವರ್ಷಗಳ ಸೇವೆ, ಅಭಿವೃದ್ಧಿ ಕೆಲಸಗಳು ನನ್ನ ಗೆಲುವಿಗೆ ಕಾರಣವಾಗಲಿದೆ ಎಂದರು.

ಪ್ರಧಾನಿ ಮೋದಿಯವರ ಅಲೆಯಲ್ಲಿ ಎಲ್ಲ ಎದುರಾಳಿಗಳು ತೇಲಿ ಹೋಗುತ್ತಾರೆ. ಹಾಗಾಗಿ ನಮಗೆ ಯಾವುದೇ ಪಕ್ಷದ ಎದುರಾಳಿಗಳಿಲ್ಲ. ಗೆಲುವು ನಮ್ಮದೇ ಎಂದು ವಿಶ್ವಾಸದಿಂದ ನುಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಚುನಾವಣಾ ಸಂಚಾಲಕ ವಿ. ಸೋಮಣ್ಣ, ಮಾಜಿ ಸಂಸದ ಜಿ.ಎಸ್. ಬಸವರಾಜು, ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕ ಜಿ.ಬಿ. ಜ್ಯೋತಿಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Comment