ಗೆಲುವಿಗಾಗಿ ಲಯನ್ಸ್ – ಆರ್‌ಸಿಬಿ ಹಣಾಹಣಿ

ರಾಜ್‌ಕೋಟ್, ಏ.೧೮-ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಅಂಗಳದಲ್ಲಿ ತವರಿನ ಅಭಿಮಾನಿಗಳ ಬೆಂಬಲ ಪಡೆಯುವ ರೈನಾ ಪಡೆ ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೆಣೆಸಲಿದ್ದು, ಇಬ್ಬರಿಗೂ ಗೆಲುವು ಅನಿವಾರ್ಯವಾಗಿದೆ.

೧೦ನೇ ಆವೃತ್ತಿಯಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋಲು ಕಂಡಿರುವ ಆರ್‌ಸಿಬಿಗೆ ಇಂದು ಗೆಲುವು ಪಡೆಯುವುದು ಅನಿವಾರ್ಯವಾಗಿದೆ. ಕೇವಲ ಎರಡು ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಕೊಹ್ಲಿ ಪಡೆಗೆ ಬ್ಯಾಟಿಂಗ್‌ನದ್ದೇ ಚಿಂತೆಯಾಗಿದೆ.

ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಎಬಿ ಡಿ ವಿಲಿಯರ್ಸ್, ವಿರಾಟ್ ಕೊಹ್ಲಿ, ಶೇನ್ ವ್ಯಾಟ್ಸನ್ ಕಳೆದ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ಬೆಂಗಳೂರಿನಂತಹ ಪಿಚ್‌ನಲ್ಲಿಯೂ ೨೦೦ ಒಳಗಿನ ಟಾರ್ಗೆಟ್ ಅನ್ನು ಮುಟ್ಟಲು ಸಾಧ್ಯವಾಗಲಿಲ್ಲ.

ಇನ್ನು ಗುಜರಾತ್ ಲಯನ್ಸ್ ತಂಡದ ಬೌಲರ್‌ಗಳಿಗೆ ಇಂದು ಅಗ್ನಿ ಪರೀಕ್ಷೆ ಎಂದೇ ಹೇಳಬಹುದು. ಏಕೆಂದರೆ ಸತತ ಸೋಲುಗಳಿಂದ ಕಂಗೆಟ್ಟಿರುವ ಆರ್‌ಸಿಬಿ ತಂಡದ ಇಂದು ಮಿಂಚು ಹರಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಹೀಗಾಗಿ ಆರ್‌ಸಿಬಿಯ ಪ್ರಮುಖ ಶಕ್ತಿ ಎನಿಸಿಕೊಂಡಿರುವ ಬ್ಯಾಟಿಂಗ್ ಕ್ರಮಾಂಕವನ್ನು ಕಟ್ಟಿ ಹಾಕುವುದು ಗುಜರಾತ್ ತಂಡಕ್ಕೆ ಕಠಿಣ ಸವಾಲಾಗಿ ಪರಿಣಮಿಸಲಿದೆ.

ಮೂರನೇ ಸ್ಥಾನದೊಂದಿಗೆ ಕಳೆದ ಬಾರಿಯ ಟೂರ್ನಿಯನ್ನು ಪೂರ್ತಿಗೊಳಿಸಿದ್ದ ಸುರೇಶ್ ರೈನಾ ಮುಂದಾಳತ್ವದ ಗುಜರಾತ್ ಲಯನ್ಸ್ ತಂಡ ಸದ್ಯ ನಡೆಯುತ್ತಿರುವ ೧೦ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಪಾಯಿಂಟ್ ಪಟ್ಟಿಯಲ್ಲಿ ೭ನೇ ಸ್ಥಾನದಲ್ಲಿದೆ.

ಗುಜರಾತ್ ಲಯನ್ಸ್ : ಲಯನ್ಸ್ ತಂಡ ಈ ಬಾರಿ ಆಡಿರುವ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಸೋಲು ಕಂಡಿದ್ದು, ಕಳೆದ ಐಪಿಎಲ್ ನಲ್ಲಿ ಮೂರನೇ ಸ್ಥಾನಕ್ಕೇರಿತ್ತು.
ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ಸುರೇಶ್ ರೈನಾ, ರವೀಂದ್ರ ಜಡೇಜ, ದಿನೇಶ್ ಕಾರ್ತಿಕ್, ಅರೋನ್ ಫಿಂಚ್, ಬ್ರೆಂಡನ್ ಮೆಕ್ಲಮ್ ಮತ್ತು ಡ್ವಾಯ್ನ್ ಸ್ಮಿತ್ ಅವರಿಂದ ಸ್ಫೋಟಕ ಬ್ಯಾಟಿಂಗ್ ನಿರೀಕ್ಷೆಯಿದೆ. ಬೌಲಿಂಗ್ ನಲ್ಲಿ ಪ್ರವೀಣ್ ಕುಮಾರ್, ಆಂಡ್ರ್ಯೂ ಟೈ, ಮುನಾಫ್ ಪಟೇಲ್,  ಬಸಿಲ್ ತಾಂಪಿ, ಜಡೇಜ ಮಿಂಚಬೇಕಿದೆ.

ಆರ್ ಸಿಬಿ: ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್ ಮೇಲೆ ಹೆಚ್ಚಿನ ಅಲವಂಬನೆ ತಂಡಕ್ಕೆ ಮಾರಕವಾಗಿದೆ.  ಕ್ರಿಸ್ ಗೇಲ್ ಆಡುವುದು ಅನುಮಾನ. ಮನ್ದೀಪ್ ಸಿಂಗ್, ಕೇದಾರ್ ಜಾಧವ್ ಸರಿಯಾಗಿ ಮಿಂಚಿಲ್ಲ. ವಾಟ್ಸನ್ ಹಾಗೂ ಸ್ಟುವರ್ಟ್ ಬಿನ್ನಿ ಆಲ್ ರೌಂಡರ್ ಆಟ ಪ್ರದರ್ಶಿಸುತ್ತಿಲ್ಲ.

ಬೌಲಿಂಗ್ ವಿಭಾಗದಲ್ಲಿ ಕರ್ನಾಟಕದ ಎಸ್. ಅರವಿಂದ್ ಮತ್ತು ಆ?ಯಡಮ್ ಮಿಲ್ನೆ ಕಳೆದ ಪಂದ್ಯದಲ್ಲಿ ಉತ್ತಮ ನಿರ್ವಹಣೆ ತೋರಿದ್ದರು. ಸ್ಪಿನ್ನರ್ ಗಳಾದ ಸ್ಯಾಮುಯಲ್ ಬದ್ರಿ, ಯಜುವೇಂದ್ರ ಚಾಹಲ್ ಜೊತೆಗೆ ಪವನ್ ನೇಗಿ ಸಮಯಕ್ಕೆ ತಕ್ಕ ಆಟ ಪ್ರದರ್ಶಿಸಬೇಕಿದೆ.

Leave a Comment