ಗೃಹ ಸಚಿವರ ಕೈ ಕಟ್ಟಿದೆ ದೇವೇಗೌಡರ ಆರೋಪ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಮಾ. ೧೩- ರಾಜ್ಯ ಗೃಹ ಇಲಾಖೆಯಲ್ಲಿ ಹಸ್ತಕ್ಷೇಪ ಹೆಚ್ಚಿದೆ. ಗೃಹ ಸಚಿವ ರಾಮಲಿಂಗರೆಡ್ಡಿರವರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ. ದೇವೇಗೌಡ ಅವರು ದೂರಿದರು.
ಚಾಕು ಇರಿತದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲೋಕಾಯುಕ್ತ ನ್ಯಾ. ವಿಶ್ವನಾಥಶೆಟ್ಟಿ ಅವರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಹೊಂದಾಣಿಕೆ ಸರಿಯಲ್ಲ. ಗೃಹ ಸಚಿವರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ರಾಜಕೀಯ ಹಸ್ತಕ್ಷೇಪ ಹೆಚ್ಚಿದೆ ಎಂದರು.
ರಾಜ್ಯ ಸರ್ಕಾರದಲ್ಲಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಯಾರದೋ ಹಿಡತದಲ್ಲಿದ್ದಾರೆ. ಮುಖ್ಯಮಂತ್ರಿಯ ಹಿ‌ಡಿತದಲ್ಲೂ ಈ ಅಧಿಕಾರಿಗಳು ಇಲ್ಲ. ಬೇರೆ ವ್ಯಕ್ತಿಯ ಹಿಡಿತದಲ್ಲಿ ಇದ್ದಾರೆ ಎಂದು ಪರೋಕ್ಷವಾಗಿ ಕೆಂಪಯ್ಯ ಅವರನ್ನು ಹೆಸರನ್ನು ಉಲ್ಲೇಖಿಸದೆ ಅವರು ಟೀಕಿಸಿದರು.
ಲೋಕಾಯುಕ್ತರಿಗೆ ಚಾಕು ಇರಿದ 10 ನಿಮಿಷದೊಳಗೆ ಆಸ್ಪತ್ರೆಗೆ ಕರೆ ತಂದಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಡೀ ದೇಶದಲ್ಲೇ ಈ ರೀತಿಯ ಘಟನೆ ನಡೆದಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸರ್ಕಾರದಲ್ಲಿ ಯಾರಿಗೂ, ಯಾರ ಮೇಲೂ ಹಿಡಿತವಾಗಲೀ, ಹೊಂದಾಣಿಕೆಯಾಗಲೀ ಇಲ್ಲ. ಗೃಹ ಇಲಾಖೆಯನ್ನು ಬೇರೊಬ್ಬರು ನಿಯಂತ್ರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

Leave a Comment