ಗುಲ್ಬರ್ಗ ವಿವಿ ಪ್ರಸಾರಾಂಗದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

 

 

ಕಲಬುರಗಿ: ಇಲ್ಲಿನ ಗುಲ್ಬರ್ಗ ವಿವಿ ಪ್ರಸಾರಾಂಗ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ಬೆಳಗ್ಗೆ ವಿವಿಯ ಮಹಾತ್ಮಗಾಂಧಿ ಸಭಾಂಗಣದಲ್ಲಿ ಜರುಗಿತು.

ಪ್ರಶಸ್ತಿ ಪ್ರದಾನ ಮಾಡಿದ  ಮೈಸೂರು ಯೋಜನಾ ನಿರ್ದೇಶಕರು ಶಾಸ್ತ್ರೀಯ ಕನ್ನಡ ಅತ್ಯನ್ನತ ಅಧ್ಯಯನ ಕೇಂದ್ರ, ಭಾರತೀಯ ಭಾಷಾ ಸಂಸ್ಥೆಯ ಪ್ರೊ. ಕೆ.ಆರ್. ದುರ್ಗಾದಾಸ ಮಾತನಾಡಿ, ಈ ಭಾಗದ ಕನಸು, ಆಶೋತ್ತರ ಈಡೇರಿಸುವ ನಿಟ್ಟಿನಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ತುಂಬಾ ಶ್ಲಾಘನೀಯ ಕಾರ್ಯ ಎಂದರು.

ಕರ್ನಾಟಕ ಸರ್ಕಾರ ಕೊಡ ಮಾಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಿಂತ ಈ ಪ್ರಶಸ್ತಿ ಶ್ರೇಷ್ಠವಾದುದು.  ಈ ಭಾಗದ ಜಾತ್ಯತೀತ ಭಾವನೆ, ಕುಶಲತೆ ನನಗೆ ತುಂಬಾ ಹಿಡಿಸಿದೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕದ ಜನಪದ, ಕಲೆ, ಸಾಹಿತ್ಯ ಸಂಪತ್ಭರಿತವಾಗಿದೆ. ಸುಶಿಕ್ಷಿತ ಗಣ್ಯರನ್ನು ಗುರುತಿಸುವುದರ ಜೊತೆಗೆ ಜನಪದ ಕಲಾವಿದರನ್ನೂ ಮುಂದಿನ ದಿನಗಳಲ್ಲಿ ಗುರುತಿಸುವಂತಾಗಲಿ ಎಂದು ಹೇಳಿದರು.

ಚರಿತ್ರೆಯಲ್ಲಿ ಈ ಭಾಗ ಸಾಂಸ್ಕೃತಿಕ ಸಂಪತ್ತಿನಿಂದ ಕೂಡಿದೆ. ಕವಿರಾಜ ಮಾರ್ಗ, ವಚನ, ದಾಸ ಸಾಹಿತ್ಯ ಇದೇ ಭಾಗದಿಂದ ಮೂಡಿ ಬಂದಿರುವುದು ಹೆಮ್ಮೆಯ ಸಂಗತಿ. ಇದೆಲ್ಲವೂ ಕನ್ನಡ ಸಾಹಿತ್ಯಕ್ಕೆ ಮೇಲ್ಪಂಕ್ತಿ ಆಗಿದೆ. ಈಗಲೂ ಆಸ್ಥಾನದ ಕವಿ, ಸಾಹಿತಿ, ಲೇಖಕರಿದ್ದಾರೆ. ಆದರೆ ರಾಜರಾಶ್ರಯದಲ್ಲಿದ್ದ ಪಂಪನಂತೆ ಬಾರರು ಎಂದು ಹೇಳಿದರು.

ಈ ಎಲ್ಲ ಚರಿತ್ರೆ ಇತಿಹಾಸವಿಟ್ಟುಕೊಂಡು ಹಲಬುವ ಕಾರಣವಿಲ್ಲ. ಪುನಃ ನಮ್ಮ ಸಂಸ್ಕೃತಿ, ಚರಿತ್ರೆ ಕಟ್ಟಬೇಕಾಗಿದೆ ಎಂದರು.

ಇಂದಿನ ಬಿಕ್ಕಟ್ಟು (ಸಂವಿಧಾನ ಬದಲಾವಣೆ, ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಲಿಲ್ಲ) ಗಳಿಗೆ ಉತ್ತರ ಕೊಡಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಇದೆ ಎಂದು ವಿವರಿಸಿದರು.

 

ಮುಖ್ಯ ಅತಿಥಿಗಳಾಗಿದ್ದ ಬೆಂಗಳೂರು ಸಾರ್ವಜನಿಕ ಗ್ರಂಥಾಲಯ ನಿರ್ದೇಶಕ ಡಾ. ಸತೀಶಕುಮಾರ ಹೊಸಮನಿ ಮಾತನಾಡಿ, ಪ್ರಶಸ್ತಿಗಳು ವ್ಯಕ್ತಿಗಳ ಜವಾಬ್ದಾರಿ ಹೆಚ್ಚಿಸುತ್ತವೆ. ನಮ್ಮಲ್ಲಿರುವ ಅಧ್ಯಯನಶೀಲತೆ ಹಾಗೂ ಪರಿಶ್ರಮ ಸಾಧನೆಯ ಉತ್ತುಂಗಕ್ಕೆ ಎಳೆದೊಯ್ಯಲಿದೆ ಎಂದರು.

 

ಕುಲ ಸಚಿವ ಪ್ರೊ. ಸಿ. ಸೋಮಶೇಖರ, ಮೌಲ್ಯ ಮಾಪನ ಕುಲಸಚಿವ ಪ್ರೊ. ಸಂಜೀವಕುಮಾರ ಕೆ.ಎಂ. ವಿತ್ತಾಧಿಕಾರಿ ಬಿ. ವಿಜಯ, ಸಿಂಡಿಕೇಟ್ ಸದಸ್ಯ ಕೆ. ವಿಜಯಕುಮಾರ ಇತರರು ವೇದಿಕೆಯಲ್ಲಿದ್ದರು.

 

ಗುಲ್ಬರ್ಗ ವಿವಿ ಕುಲಪತಿ ಪ್ರೊ. ಪರಿಮಳಾ ಅಂಬೇಕರ್ ಅಧ್ಯಕ್ಷತೆ ವಹಿಸಿದ್ದರು.

ಗುಲ್ಬರ್ಗ ವಿವಿ ಪ್ರಸಾರಾಂಗ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಸಿದ್ಧಲಿಂಗ ದಬ್ಬಾ, ಡಾ. ಹಣಮಂತ ಮೇಲಕೇರಿ ನಿರೂಪಿಸಿದರು. ಡಾ. ಎಂ.ಬಿ. ಕಟ್ಟಿ ವಂದಿಸಿದರು.

 

ಬಾಕ್ಸ್….

ಭಾರತದ ಯಾವುದೇ ವಿವಿ ಮಾಡದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಗುಲ್ಬರ್ಗ ವಿವಿ ಕಳೆದ ೩೫ ವರ್ಷಗಳಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸುತ್ತ ಬರಲಾಗಿದೆ. ಈ ಬಾರಿ ೨೮ ಜನರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

-ಪ್ರೊ. ಎಚ್.ಟಿ. ಪೋತೆ

 

Leave a Comment