ಗುರು ಸಿದ್ದರಾಮೇಶ್ವರ ಜಯಂತಿಗೆ ಭರದ ಸಿದ್ದತೆ

ಗುಬ್ಬಿ, ಜ. ೧೨- ರಾಜ್ಯಮಟ್ಟದ 846ನೇ ಗುರು ಸಿದ್ದರಾಮೇಶ್ವರ ಜಯಂತಿ ಅಂಗವಾಗಿ ಜ. 14 ಮತ್ತು 15 ರಂದು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ-206 ರ ಬಾಗೂರು ಗೇಟಿನಲ್ಲಿ ನಡೆಯಲಿರುವ ಅದ್ಧೂರಿ ಜಯಂತಿಗೆ ಸುಮಾರು 20 ಎಕರೆ ವಿಸ್ತೀರ್ಣದ ಜಾಗದಲ್ಲಿ 25 ರಿಂದ 30 ಸಾವಿರ ಆಸನಗಳ ಬೃಹದಾಕಾರದ ವೇದಿಕೆ ನಿರ್ಮಾಣದೊಂದಿಗೆ ಕುಡಿಯುವ ನೀರು, ಶೌಚಾಲಯ ಊಟದ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ಮುಂತಾದ ಕಾರ್ಯಗಳು ಭರದಿಂದ ಸಾಗಿವೆ.

ಬೆಟ್ಟದಹಳ್ಳಿ ಶ್ರೀ ಚಂದ್ರಶೇಖರ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುವ 846ನೇ ಗುರು ಸಿದ್ದರಾಮೇಶ್ವರ ಜಯಂತಿಯು ಈ ಬಾರಿ ಗುಬ್ಬಿ ತಾಲ್ಲೂಕಿನ ಬಾಗೂರು ಗೇಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸುಮಾರು 2 ರಿಂದ 3 ಲಕ್ಷದಷ್ಟು ಭಕ್ತರು ಮತ್ತು ಅನುಯಾಯಿಗಳು ಆಗಮಿಸುವ ನಿರೀಕ್ಷೆ ಇದ್ದು, ಬರುವ ಭಕ್ತಾದಿಗಳಿಗೆ ಮತ್ತು ಅನುಯಾಯಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು ಶೌಚಾಲಯ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ದೂರದಿಂದ ಬರುವ ಭಕ್ತರಿಗೆ ತೊಂದರೆಯಾಗದಂತೆ ಉಳಿದುಕೊಳ್ಳಲು ರೂಂಗಳ ವ್ಯವಸ್ಥೆ ಮತ್ತು ಇತರೆ ವ್ಯವಸ್ಥೆಗಳನ್ನು ಭರದಿಂದ ಮಾಡಲಾಗುತ್ತಿದೆ.

ಜಯಂತಿ ‌‌‌ಅಂಗವಾಗಿ 24 ಸಮಿತಿಗಳನ್ನು ಗಣ್ಯರು ಮತ್ತು ಸಮಾಜದ ಮುಖಂಡರುಗಳ ಸಹಕಾರದೊಂದಿಗೆ ರಚಿಸಿದ್ದು, ಪ್ರತಿಯೊಂದು ಸಮಿತಿಗೂ ತನ್ನದೇ ಆದ ಜವಾಬ್ದಾರಿಗಳನ್ನೂ ನೀಡಲಾಗಿದೆ. ಪ್ರತಿಯೊಂದು ಸಮಿತಿಯು ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ಹೊಂದಿದ್ದು, ಇವರ ಸಹಯೋಗದೊಂದಿಗೆ ಸದಸ್ಯರುಗಳು ಭಕ್ತರು ತನುಮನ ಧನ ಸಹಕಾರ ನೀಡುವ ಭಕ್ತಾದಿಗಳಿಂದ ಕಾರ್ಯಕ್ರಮಕ್ಕೆ ಬೇಕಾಗುವಂತಹ ಸಾಮಗ್ರಿಗಳನ್ನು ಮತ್ತು ವಸ್ತುಗಳನ್ನು ಸಂಗ್ರಹಿಸಿ ಕಾರ್ಯಕ್ರಮದ ಯಶಸ್ಸಿಗೆ ಹಗಲಿರುಳೆನ್ನದೆ ಕಾರ್ಯನಿರ್ವಹಿಸುತ್ತಿದ್ದಾರೆ.

ಸಿದ್ದರಾಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕಾಗಿದೆ. ಆತನ ತತ್ವಾದರ್ಶಗಳು ಮತ್ತು ಗುಣಗಳನ್ನು ಮಾನವ ಸಂಕುಲ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಮಾರ್ಗದರ್ಶಕ ಆಗಿರಬೇಕೆಂಬ ಮನದಾಸೆಯನ್ನು ಶ್ರೀ ಚಂದ್ರಶೇಖರ ಮಹಾಸ್ವಾಮಿಜಿಗಳು ಹೊಂದಿದ್ದು ಸಿದ್ದರಾಮಯ್ಯ ತತ್ವಾದರ್ಶಗಳನ್ನು ತಿಳಿಸಲು ಕಾರ್ಯಕ್ರಮದಲ್ಲಿ ಸಿದ್ದರಾಮ ಸಾಹಿತ್ಯಗೋಷ್ಠಿಯನ್ನು ಅಂದು ಮಧ್ಯಾಹ್ನ 2.30 ಗಂಟೆಗೆ ಏರ್ಪಡಿಸಲಾಗಿದೆ. ಜತೆಗೆ ಯುವ ಜನತೆಗಾಗಿ ಯುವಗೋಷ್ಠಿ, ಮಹಿಳಾ ಜಾಗೃತಿಗಾಗಿ ಮಹಿಳಾ ಗೋಷ್ಠಿ , ರೈತರ ಸಾಮಾಜಿಕ ಸಮಸ್ಯೆಗಳು ಮತ್ತು ಕೃಷಿಗಾಗಿ ಕೃಷಿ ಗೋಷ್ಠಿಯನ್ನು ಏರ್ಪಡಿಸಲಾಗಿದೆ.

ಶರಣರ ಚಿಂತನ ಮಂಥನ ಸಂವಾದ ಸಾಂಸ್ಕೃತಿಕ ಕಾರ್ಯಕ್ರಮ ನೇರ ಪ್ರಸಾರಕ್ಕಾಗಿ ಮಹಾಮನೆ ಎಂಬ ವಿಶೇಷ ವೇದಿಕೆ ರಚಿಸುವುದರೂಂದಿಗೆ ಕಾರ್ಯಕ್ರಮ ಬಿತ್ತರವಾಗಲಿದೆ.

ಇಷ್ಟಲಿಂಗ ಪೂಜೆ, ಪಕ್ಷಕ್ಕೆ ಸಿದ್ದರಾಮ ಕವಚ, ಕೃಷಿ-ಬದುಕು, ಕೈಗಾರಿಕೆಗಳ ಆವಿಷ್ಕಾರ, ಕುಟುಂಬ ಆಪ್ತಸಮಾಲೋಚನೆ, ಸಾಮೂಹಿಕ ವಿವಾಹ, ದೇಸಿ ತಿಂಡಿ ತಿನಿಸುಗಳು, ವ್ಯಸನ ಮುಕ್ತ ಮತ್ತು ಮದಗಳ ಹತೋಟಿ ಶಿಬಿರ, 108 ಪೂರ್ಣಕುಂಭ, 101 ನಂದಿಧ್ವಜ, ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ,  ಕಾನೂನು ಸಲಹೆ ಮತ್ತು ಪರಿಹಾರ ಶಿಬಿರ, ವೃತ್ತಿ ಮತ್ತು ನಿವೃತ್ತಿ ಜೀವನ, ಸಿದ್ದರಾಮ ನಾಟಕ ಮತ್ತು ಚಿತ್ರಕಲೆ, ಹಳ್ಳಿ ಆಟಗಳು ಮತ್ತು ಗಾಳಿಪಟ, ಪಶು ಸಂಗೋಪನೆ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಜಯಂತಿಯ ಅಂಗವಾಗಿ ಹಮ್ಮಿಕೊಳ್ಳಲಾಗಿದೆ.

Leave a Comment