ಗುರುಗಳ ಹೆಸರನ್ನು ಸ್ಮರಿಸುವ ವಿದ್ಯಾರ್ಥಿಗಳು ಅಪರೂಪ

ಕೆ.ಆರ್.ಪೇಟೆ. ಆ.22: ಇದುವರೆವಿಗೂ ಸಿನಿಮಾ ತಾರೆಯರ ಹೆಸರು ಹಾಗೂ ಪ್ರೀತಿಸುವ ಪ್ರೇಮಿಗಳ ಹೆಸರನ್ನು ಕೈಗೆ ಅಚ್ಚೆ ಹಾಕಿಸಿಕೊಳ್ಳುವುದನ್ನು ನಾವು ನೋಡಿದ್ದೇವೆ ಆದರೆ ಪ್ರೀತಿಯ ಗುರುಗಳ ಹೆಸರನ್ನು ಕೈಗೆ ಹಸಿರು ಅಚ್ಚೆ ಹಾಕಿಸಿಕೊಂಡು ಪ್ರೀತಿಯ ಗುರುಗಳ ಹೆಸರನ್ನು ಸದಾ ಸ್ಮರಿಸುವ ವಿದ್ಯಾರ್ಥಿಗಳನ್ನು ನೋಡುವುದು ಅಪರೂಪವಾಗಿದೆ.
ಹಾ…. ಎಲ್ಲಿ…. ಯಾರು…. ಆ ಟೀಚರ್…. ಎಂಬ ಕುತೂಹಲವಾಗುತ್ತಿದೆಯಲ್ಲವೇ? ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ದಕ್ಷಿಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಹೆಚ್.ವೈ.ಸರಸ್ವತಿ ಎಂಬ ಶಿಕ್ಷಕಿಯೇ ಮಕ್ಕಳ ಅಪಾರ ಪ್ರೀತಿ ವಾಸ್ತ್ಯವ್ಯಕ್ಕೆ ಭಾಜನರಾಗಿರುವ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದಾರೆ.
ಕಳೆದ ಸುಮಾರು 10 ವರ್ಷಗಳಿಂದ ಪಟ್ಟಣದ ದಕ್ಷಿಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉತ್ತಮವಾಗಿ, ಅರ್ಪಣಾಭಾವನೆಯಿಂದ ಶಿಕ್ಷಕ ವೃತ್ತಿಯನ್ನು ನಿರ್ವಹಿಸುವ ಮೂಲಕ ಎಲ್ಲಾ ಮಕ್ಕಳ ಪ್ರೀತಿ ವಾತ್ಸಲ್ಯಕ್ಕೆ ಪಾತ್ರರಾಗಿದ್ದಾರೆ.
ಶಾಲೆಗೆ ಬರುವ ಬಡ ಮಕ್ಕಳೆಂದರೆ ಇವರಿಗೆ ಅಚ್ಚುಮೆಚ್ಚು, ಶಾಲಾ ಬ್ಯಾಗ್ ಹರಿದಿದ್ದರೆ ತಕ್ಷಣ ಹೊಸ ಬ್ಯಾಗ್ ಕೊಡಿಸುತ್ತಾರೆ. ಸಮವಸ್ತ್ರ ಹರಿದಿದ್ದರೆ ತಕ್ಷಣ ಹೊಸ ಬಟ್ಟೆ ಕೊಳ್ಳಲು ಪೋಷಕರನ್ನು ಕರೆಸಿ ತಮ್ಮ ಸ್ವಂತ ಹಣ ನೀಡಿವ ಮೂಲಕ ಹೊಸ ಬಟ್ಟೆ ಕೊಡಿಸುತ್ತಾರೆ. ಮಕ್ಕಳಿಗೆ ಆರೋಗ್ಯ ಸರಿ ಇಲ್ಲದೆ ಶಾಲೆಗೆ ಬಾರದೇ ಇದ್ದರೆ ಅವರ ಪೋಷಕರನ್ನು ಸಂಪರ್ಕಿಸಿ ಆರೋಗ್ಯದ ಬಗ್ಗೆ ವಿಚಾರಿಸುತ್ತಾರೆ. ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹಣ ಇಲ್ಲದ ಪೋಷಕರಿಗೆ ಹಣಕಾಸಿನ ನೆರವು ನೀಡುವ ಮಾಡುವ ಮೂಲಕ ತಮ್ಮ ವಿದ್ಯಾರ್ಥಿಯ ನೋವನ್ನು ಹಂಚಿಕೊಳ್ಳುತ್ತಾರೆ.
ಶಾಲೆಗೆ ಪಾವತಿಸಬೇಕಾದ ಸರ್ಕಾರದ ಫೀಸ್ ಕಟ್ಟಲು ತೊಂದರೆ ಇರುವ ಮಕ್ಕಳ ಫೀಸ್ ಅನ್ನು ಇವರೇ ಕಟ್ಟುವ ಮೂಲಕ ಮಕ್ಕಳು ವಿದ್ಯಾಭ್ಯಾಸ ಮುಂದುವರೆಸಲು ಸಹಕಾರಿಯಾಗಿದ್ದಾರೆ. ನೋಟ್ ಬುಕ್ ಗಳ ಖರೀದಿಗೆ ಹಣವಿಲ್ಲದ ಮಕ್ಕಳಿಗೆ ನೋಟ್ ಬುಕ್ ಕೊಡಿಸುತ್ತಾರೆ. ಮಧ್ಯಾಹ್ನ ಮಕ್ಕಳೊಂದಿಗೆ ಕುಳಿತು ಮಧ್ಯಾಹ್ನದ ಸಹ ಬೋಜನ ಮಾಡುವ ಮೂಲಕ ಮಕ್ಕಳ ವಿಶೇಷ ಪ್ರೀತಿಗೆ ಪಾತ್ರರಾಗಿದ್ದಾರೆ.
ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳ ಹುಟ್ಟು ಹಬ್ಬವನ್ನು ಆಚರಣೆ ಮಾಡಿ ತಮ್ಮ ಮತ್ತು ಗುರುಗಳ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.
ಬೆಳಿಗ್ಗೆ ಶಾಲೆಗೆ ಬಂದರೆ ಸಂಜೆಯವರೆವಿಗೂ ಮಕ್ಕಳಿಗೆ ಪಾಠ ಮಾಡುವುದು, ಕಥೆ ಹೇಳಿಕೊಡುವುದು, ಹಾಡು, ನೃತ್ಯ ಕಲಿಸುವುದು ದಿನ ನಿತ್ಯದ ಕಾಯಕವಾಗಿದೆ. ಹೀಗೆ  ತಮ್ಮ ಶಾಲೆಯ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಪಾರವಾಗಿ ಶ್ರಮಿಸುತ್ತಿರುವ ಹೆಚ್.ವೈ.ಸರಸ್ವತಿ ಅವರಿಗೆ ಶಿಕ್ಷಣ ಇಲಾಖೆಯು ಗುರುತಿಸಿ ಗೌರವಿಸುವ ಮೂಲಕ ಇಂತಹ ಮಾನವೀಯ ಮೌಲ್ಯದ ಹೆಚ್ಚಿಸುವಂತಹ ಶಿಕ್ಷಕರ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ  ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಂಬಂಧವನ್ನು ಮತ್ತಷ್ಟು ವಿಶಾಲವಾಗಿ ಬೆಳೆಯಲು ಅವಕಾಶ ಕಲ್ಪಿಸಬೇಕಾದ ಅಗತ್ಯವಿದೆ.

Leave a Comment