ಗುರುಗಳ ಆಶೀರ್ವಾದವಿಲ್ಲದೆ ಸಾಧನೆ ಅಸಾಧ್ಯ

ಮೈಸೂರು, ಸೆ.13- ಶಿಕ್ಷಣ ನೀಡಿದವರು ಮಾತ್ರ ಗುರುಗಳಲ್ಲ. ಬಾಳಿನ ಹಾದಿಯಲ್ಲಿ ಮಾರ್ಗದರ್ಶನ ತೋರುವವರು ಗುರುಗಳಷ್ಟೇ ಸಮಾನರು ಎಂದು ಡಿ.ಟಿ.ಎಸ್ ಫೌಂಡೇಷನ್ ಅಧ್ಯಕ್ಷರು ಹಾಗೂ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ ಪ್ರಕಾಶ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಅರಿವು ಸಂಸ್ಥೆ ವತಿಯಿಂದ ಆಯೋಜಿಸಿದ್ದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಶಿಕ್ಷಕ, ಗುರುಗಳಿಗೆ ಗುರುಬ್ರಹ್ಮ ಸೇವಾ ಪ್ರಶಸ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಬಹು ಅತ್ಯಗತ್ಯ. ಗುರುಗಳ ದಿವ್ಯ ದರ್ಶನವಿಲ್ಲದೆ ಏನನ್ನು ಸಾಧಿಸಲಾಗದು. ಅವರು ನೀಡುವ ಸಲಹೆ, ಮಾರ್ಗದರ್ಶನದಂತೆ ನಡೆದುಕೊಂಡರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಉತ್ತಮ ಗುರುವಾದವನು ತಮ್ಮ ಶಿಷ್ಯ ವೃಂಧದವರ ಚಲನ ವಲನಗಳನ್ನು ವೀಕ್ಷಿಸಿ ಅವರಲ್ಲಿ ಉತ್ತಮರೆಂದು ಕಂಡು ಬಂದ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಸಲಹೆಗಳನ್ನು ನೀಡುವುದಲ್ಲದೇ ಪಾಠ ಪ್ರವಚನಗಳನ್ನು ಬೋಧಿಸಿದಾಗ ಉತ್ತಮ ಗುರು ಎಂದು ಎನಿಸಿಕೊಳ್ಳುತ್ತಾನೆ. ಕೆಲವು ವಿದ್ಯಾರ್ಥಿಗಳು ಗುರುಗಳು ಬೋಧಿಸುವ ಪಾಠ ಪ್ರವಚನವನ್ನು ಏಕಚಿತ್ತದಿಂದ ಆಲಿಸಿ ಉಜ್ವಲ ಭವಿಷ್ಯವನ್ನು ಕಂಡುಕೊಳ್ಳುತ್ತಾರೆ. ಇದಕ್ಕೆ ಉತ್ತಮ ನಿದರ್ಶನ ಮಹಾಭಾರತದ ಏಕಲವ್ಯ ಎಂದರೆ ತಪ್ಪಾಗಲಾರದು.
ಏಕಲವ್ಯ ಗುರುಗಳಿಂದ ದೂರವಿದ್ದರೂ ಪಾಂಡವರಿಗೆ ಧನುರ್ ವಿಧ್ಯೆಯನ್ನು ಬೋಧಿಸುವ ಸಂದರ್ಭದಲ್ಲಿ ಆತ ದೂರದಲ್ಲಿದ್ದುಕೊಂಡೇ ದ್ರೋಣಚಾರ್ಯರು ನೀಡುವ ಕಲೆ ಹಾಗೂ ಬೋಧನಾ ಕ್ರಮಗಳನ್ನು ದಿನನಿತ್ಯವು ಅಭ್ಯಾಸ ಮಾಡುವ ಮೂಲಕ ಅರ್ಜುನನ್ನು ಬಿಲ್ವಿಧ್ಯೆಯಲ್ಲಿ ಮೀರಿಸುವಂತಹ ಸಾಮರ್ಥ್ಯ ಪಡೆದಿದ್ದನು. ಇದನ್ನು ಗಮನಿಸಿದರೆ ಗುರುಗಳ ಮಹತ್ವ ಎಷ್ಟು ಎಂಬುದು ಅರ್ಥವಾಗುತ್ತದೆ ಎಂದು ಹೇಳಿದ ಅವರು ಗುರುಗಳನ್ನು ಉತ್ತೇಜಿಸುವ ಸಲುವಾಗಿ ಸಂಸ್ಥೆ ವತಿಯಿಂದ ಇಂದು 6 ಮಂದಿ ಶಿಕ್ಷಕರಿಗೆ ಸನ್ಮಾನ ಮಾಡಲಾಗುತ್ತಿದೆ ಎಂದರು.
ಸಮಾರಂಭದಲ್ಲಿ ರಘುರಾಂ ವಾಜಪೇಯಿ, ಪಣೀಶ್, ಸಿ.ಎನ್.ಮಂಜು, ಬಸವರಾಜು ಸೇರಿದಂತೆ ಹಲವು ಮಂದಿ ಹಾಜರಿದ್ದರು.

Leave a Comment