ಗುಬ್ಬಿ ಪ.ಪಂ.: 9.48 ಲಕ್ಷ ರೂ. ಉಳಿತಾಯ ಬಜೆಟ್

ಗುಬ್ಬಿ, ಫೆ. ೧೭- ಪಟ್ಟಣ ಪಂಚಾಯ್ತಿಯ 2017-18ನೇ ಸಾಲಿನ ಆಯವ್ಯಯ ಮಂಡನೆ ವಿಶೇಷ ಸಭೆಯಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ವಿ. ತ್ರಿವೇಣಿ 9.48 ಲಕ್ಷ ರೂ.ಗಳ ಉಳಿತಾಯ ಬಜೆಟ್ ಮಂಡಿಸಿದರು.

ಇಲ್ಲಿನ ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ವಿಶೇಷ ಅಯವ್ಯಯ ಮಂಡನೆ ಸಭೆಯಲ್ಲಿ 2017-18ನೇ ಸಾಲಿನ ಅಯವ್ಯಯ ಮಂಡಿಸಿದ ಅವರು, ಪ್ರಾರಂಭಿಕ ಶುಲ್ಕ 561.55 ಲಕ್ಷ ರೂ. 2017-18ನೇ ಸಾಲಿನ ಜಮಾ 1086.31 ಲಕ್ಷ ರೂ. ಸೇರಿದಂತೆ ಒಟ್ಟು 1647.87 ಲಕ್ಷ ರೂ.ಗಳು ಪ್ರಸಕ್ತ ಸಾಲಿನ ಖರ್ಚು 1638.39 ಲಕ್ಷ ರೂ.ಗಳು ವೆಚ್ಚವಾಗುತ್ತಿದ್ದು, ಒಟ್ಟು 9.48 ಲಕ್ಷ ರೂ.ಗಳ ಉಳಿತಾಯ ಬಜೆಟ್ ಮಂಡಿಸಿದರು.

ಪಟ್ಟಣದ ಸಮಗ್ರ ಅಭಿವೃದ್ಧಿ ಸೇರಿದಂತೆ ಪಟ್ಟಣ ವಾಸಿಗಳ ಅಗತ್ಯ ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಲು ಪ್ರಸಕ್ತ ಬಜೆಟ್‍ನಲ್ಲಿ ವಿಶೇಷ ಗಮನ ಹರಿಸಲಾಗಿದೆ. ವಿಶೇಷವಾಗಿ ಕುಡಿಯುವ ನೀರು, ಬಡಾವಣೆಗಳ ರಸ್ತೆ ಅಭಿವೃದ್ಧಿ, ಕೊಳಚೆ ನಿರ್ಮೂಲನೆ ಸೇರಿದಂತೆ ಬೀದಿ ದೀಪಗಳ ದುರಸ್ಥಿಗೆ ಬಜೆಟ್‍ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ಈಗಾಗಲೇ ಯುಜಿಡಿ ಕಾಮಗಾರಿ ಪ್ರಗತಿಯಲ್ಲಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ಪಟ್ಟಣವನ್ನು ಸಮಸ್ಯೆ ಮುಕ್ತವನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು, ಅಗತ್ಯ ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಸರ್ಕಾರದ ಅನುದಾನಗಳ ಬಳಕೆ ಸೇರಿದಂತೆ ಕರ ವಸೂಲಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದೆಂದರು.

ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಪ್ರಸ್ತಾಪಿಸಿದ ಸದಸ್ಯ ಜಿ.ಸಿ. ಲೋಕೇಶ್‍ಬಾಬು, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳಲಿದ್ದು, ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ಗಮನಹರಿಸಬೇಕು. ನೀರಿನ ಬಳಕೆಗೆ ಕಮರ್ಷಿಯಲ್ ತೆರಿಗೆ ಹಾಗೂ ಗೃಹ ಬಳಕೆ ವಿಂಗಡಿಸಿ ಶಿಸ್ತು ಬದ್ದವಾಗಿ ತೆರಿಗೆ ವಸೂಲಿ ಮಾಡಬೇಕು. ಈ ವಿಚಾರಕ್ಕೆ ಸಂಬಂಧಿಸಿದಂತೆ ಧ್ವನಿಗೂಡಿಸಿದ ಸದಸ್ಯ ವಿರೂಪಾಕ್ಷ, ಸರ್ವೀಸ್ ಸ್ಟೇಷನ್‍ಗಳಲ್ಲಿ ನೀರು ಬಳಕೆಗೆ ಪರವಾನಗಿ ನೀಡಿರುವ ಮಾಹಿತಿ ಸಭೆಯ ಗಮನಕ್ಕೆ ಬರಬೇಕು.

ಹೋಟೆಲ್‍ಗಳಲ್ಲಿ ಬಳಸುವ ನೀರು ಸಹ ಕಮರ್ಷಿಯಲ್ ಎಂದು ನಿರ್ಧರಿಸಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು.
ತೆರಿಗೆ ವಸೂಲಿ ಮಾಡುವ ಸಿಬ್ಬಂದಿಗಳು ಪಟ್ಟಣ ಪಂಚಾಯ್ತಿ ಸಂಕೀರ್ಣದ ಮಳಿಗೆಯ ಬಾಡಿಗೆ ಬಾಕಿ ವಸೂಲಿ ನಿಯಾಮನುಸಾರ ಮಾಡಬೇಕು ಎಂದು ಸದಸ್ಯ ಸಿ.ಮೋಹನ್ ಸಭೆಯ ಗಮನಕ್ಕೆ ತಂದರು. ಮಾಸಿಕ 2.5 ಲಕ್ಷ ರೂ ವಸೂಲಿಯಾಗಬೇಕಾದ ಬಾಡಿಗೆಯಲ್ಲಿ ಕೇವಲ 1 ಲಕ್ಷ ರೂ. ಮಾತ್ರ ವಸೂಲಿಯಾಗುತ್ತಿದೆ. ಉಳಿದ ಬಾಕಿ ವಸೂಲಿ, ಖಾಲಿ ಅಂಗಡಿಗಳನ್ನು ಬಾಡಿಗೆ ನೀಡುವುದು ಹಾಗೂ ಖಾಲಿ ಮಳಿಗೆಗೆ ಸೇರಿರುವ ಅನಧಿಕೃತರನ್ನು ತೆರವುಗೊಳಿಸುವ ಬಗ್ಗೆ ಅಧಿಕಾರಿಗಳು ತೀವ್ರ ನಿಗಾವಹಿಸಬೇಕು ಎಂದರು.

ಚದರ ಮೀಟರ್ ಅಳತೆಯಲ್ಲಿ ನೀಡುವ ಪರವಾನಗಿ ಬಗ್ಗೆ ಸದಸ್ಯರ ಗಮನಕ್ಕೆ ತರಬೇಕು ಎಂದು ಸದಸ್ಯ ಮಹಮದ್ ಸಾಧಿಕ್ ಆಗ್ರಹಿಸಿದರು.

ಸಭೆಯಲ್ಲಿ ಮುಖ್ಯಾಧಿಕಾರಿ ಎಂ.ಕುಮಾರ್, ಇಂಜಿನಿಯರ್ ಡಿ.ಆರ್. ಪ್ರಕಾಶ್, ಲೆಕ್ಕಾಧಿಕಾರಿ ಜಯಣ್ಣ, ಪ್ರೀತಂ, ಲೋಕನಾಥ್, ಆರೋಗ್ಯ ನಿರೀಕ್ಷಕ ಆಂಜಿನಪ್ಪ ಸೇರಿದಂತೆ ಪಟ್ಟಣ ಪಂಚಾಯ್ತಿ ಸದಸ್ಯರು ಉಪಸ್ಥಿತರಿದ್ದರು.

Leave a Comment