ಗುಪ್ತದಳದ ವೈಫಲ್ಯ ಡಿಜಿಪಿ ರೆಡ್ಡಿ ತಲೆದಂಡ

ಬೆಂಗಳೂರು, ಜು. ೧೭- ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕೋಮು ಗಲಭೆ, ಕಾರಾಗೃಹಗಳಲ್ಲಿನ ಅವ್ಯವಹಾರಗಳ ಬಗ್ಗೆ ಸೂಕ್ತ ಮಾಹಿತಿ ನೀಡುವಲ್ಲಿ ವಿಫಲವಾಗಿರುವ ಗುಪ್ತ ದಳದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಎಂ.ಎನ್. ರೆಡ್ಡಿ ಅವರನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿದೆ.

ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಮುಖ್ಯಸ್ಥರ ಹುದ್ದೆಯನ್ನು ಡಿಜಿಪಿ ಮೇಲ್ದರ್ಜೆಗೇರಿಸಿ ಎಂ.ಎನ್. ರೆಡ್ಡಿ ಅವರನ್ನು ಆ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಎಸಿಬಿಯ ಎಡಿಜಿಪಿಯಾಗಿದ್ದ ಮೇಘರಿಕ್ ಅವರನ್ನು ಕಾರಾಗೃಹಗಳ ಇಲಾಖೆಗೆ ನಿಯೋಜಿಸಲಾಗಿದೆ.

ಗುಪ್ತದಳದ ಐಜಿಪಿಯಾಗಿರುವ ಅಮೃತ್ ಪಾಲ್ ಅವರನ್ನು ಗುಪ್ತದಳ ಮುಖ್ಯಸ್ಥರ ಹುದ್ದೆಯ ಹೆಚ್ಚುವರಿ ಹೊಣೆ ನೀಡಲಾಗಿದೆ. ಐಜಿಪಿ ದರ್ಜೆಯಲ್ಲಿದ್ದ ಗುಪ್ತದಳದ ಮುಖ್ಯಸ್ಥರ ಹುದ್ದೆಯನ್ನು ಡಿಜಿಪಿ ಹುದ್ದೆಗೆ ಮೇಲ್ದರ್ಜೆಗೇರಿಸಿ ಅಗ್ನಿಶಾಮಕ ದಳದ ಡಿಜಿಪಿಯಾಗಿದ್ದ ಎಂ.ಎನ್. ರೆಡ್ಡಿ ಅವರನ್ನು ಕೆಲ ತಿಂಗಳ ಹಿಂದೆ ಸರ್ಕಾರ ನಿಯೋಜಿಸಿತ್ತು.

ಕಳೆದ ಕೆಲ ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಂಟಾಗಿರುವ ಕೋಮು ಗಲಭೆ ಪ್ರಕ್ಷುಬ್ಧ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲರಾಗಿರುವುದು ಅಲ್ಲದೆ, ಕಾರಾಗೃಹ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳ ನಡುವೆ ಉಂಟಾಗಿರುವ ಜಟಾಪಟಿಯ ಬಗ್ಗೆ ಮಾಹಿತಿ ನೀಡದಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಿನ್ನೆ ರೆಡ್ಡಿ ಅವರನ್ನು ಕರೆಸಿಕೊಂಡು ತರಾಟೆಗೆ ತೆಗೆದುಕೊಂಡಿದ್ದರು.

ಗುಪ್ತ ದಳವನ್ನು ನಿಭಾಯಿಸುವಲ್ಲಿ ವಿಫಲವಾಗಿರುವುದಕ್ಕೆ ಕೆಂಡಾಮಂಡಲವಾಗಿದ್ದ ಮುಖ್ಯಮಂತ್ರಿಗಳು ರೆಡ್ಡಿ ಅವರನ್ನು ಎತ್ತಂಗಡಿ ಮಾಡುವುದರ ಜೊತೆಗೆ ಕಾರಾಗೃಹ ಇಲಾಖೆಯಲ್ಲಿ ಜಟಾಪಟಿಗೆ ಬಿದ್ದಿದ್ದ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ.

Leave a Comment