ಗುತ್ತಿಗೆ ಪೌರ ಕಾರ್ಮಿಕರ ಖಾಯಮಾತಿ ಸರ್ಕಾರದ ಆದೇಶಕ್ಕೆ ಸಮಾನತೆ ಯೂನಿಯನ್ ಸ್ವಾಗತ

ಬಳ್ಳಾರಿ, ಆ.10:ರಾಜ್ಯದ ವಿವಿಧ ನಗರ, ಪಟ್ಟಣಗಳ, ಸ್ಥಳೀಯ ಸಂಸ್ಥೆಗಳಲ್ಲಿ ಅನೇಕ ವರ್ಷಗಳಿಂದ ಹಗಲಿರುಳೆನ್ನದೇ ಗುತ್ತಿಗೆ ಪದ್ದತಿ ಆಧಾರದ ಮೇಲೆ ದುಡಿಯುತ್ತಿದ್ದ ಪೌರಕಾರ್ಮಿಕರನ್ನು ಖಾಯಂಗೊಳಿಸುವಂತೆ ಪೌರಕಾರ್ಮಿಕರು ನಡೆಸಿದ ಹೋರಾಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರವು ಬೇಡಿಕೆ ಈಡೇರಿಸಿ ಮೊನ್ನೆ ಆಗಸ್ಟ್ 7ರಂದು ಆದೇಶ ಹೊರಡಿಸಿರುವುದು ಸಂತಸಕರ ಮತ್ತು ಅಭಿನಂದನೀಯ ಎಂದು ಸಮಾನತೆ ಯೂನಿಯನ್ ಕರ್ನಾಟಕ ಸಂಘಟನೆ ತಿಳಿಸಿದೆ.

ಸಮಾನತೆ ಯೂನಿಯನ್ ಕರ್ನಾಟಕದ ರಾಜ್ಯ ಸಂಚಾಲಕ ರಾಮಚಂದ್ರ ಮತ್ತು ಇತರರು ಇಂದು ಪೂರ್ವಾಹ್ನ ನಗರದ ಪತ್ರಿಕಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಾದ್ಯಂತ ದಲಿತ ಸಮುದಾಯದ ಪೌರಕಾರ್ಮಿಕರು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಪದ್ದತಿ ಎನ್ನುವ ಗುಲಾಮ ವ್ಯವಸ್ಥೆಯಲ್ಲಿ ಪೌರ ಸಂಸ್ಥೆಗಳ ಜೀತದಾಳುಗಳಂತೆ ಕೆಲಸ ಮಾಡಿಕೊಂಡು, ಅನೇಕ ಹಕ್ಕುಗಳಿಂದ ವಂಚಿತರಾಗಿ ದುಡಿಯುತ್ತಿದ್ದುದು ಸರ್ವವಿದಿತ. ಸರ್ಕಾರವೇ ಕಾನೂನಾತ್ಮಕವಾಗಿ ಜಾರಿ ಮಾಡಿದ್ದ ಕನಿಷ್ಠ ವೇತನ, ಭವಿಷ್ಯನಿಧಿ, ಆರೋಗ್ಯವಿಮೆ, ಸುರಕ್ಷಿತ ಸಲಕರಣೆಗಳು ಸೇರಿದಂತೆ ಯಾವುದನ್ನು ನೀಡದೇ ಗುತ್ತಿಗೆದಾರರು, ಈ ಕಾರ್ಮಿಕರನ್ನು ಶೋಷಿಸುತ್ತಿದ್ದರು. ಇಂತಹ ಅನಿಷ್ಠ ಪದ್ದತಿಯ ವಿರುದ್ಧ ಪೌರಕಾರ್ಮಿಕ ಸಂಘಟನೆಗಳು ಕಳೆದ 15-20 ವರ್ಷಗಳಿಂದ ನಿರಂತರವಾಗಿ ವಿವಿಧ ಹಂತಗಳ ಹೋರಾಟ ಮಾಡುತ್ತಾ ಬಂದಿದ್ದು, ರಾಜ್ಯ ಸರ್ಕಾರವು ಕೊನೆಗೂ ಹೋರಾಟಕ್ಕೆ ಮಣಿದು ಸರ್ಕಾರ ಆದೇಶ ಹೊರಡಿಸಿರುವುದು ಸ್ವಾಗತಾರ್ಹ ಎಂದರು.

ಕಳೆದ ವರ್ಷವೇ ಅಂದರೆ 2016ರಲ್ಲಿ ರಾಜ್ಯ ಸರ್ಕಾರವು ನಮ್ಮ ಹೋರಾಟಕ್ಕೆ ಸ್ಪಂದಿಸಿ 04-05-2016 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಗುತ್ತಿಗೆ ಪದ್ದತಿಯನ್ನು ರದ್ದು ಮಾಡುವುದು ಮತ್ತು ಗುತ್ತಿಗೆ ಪೌರಕಾರ್ಮಿಕರನ್ನು ಖಾಯಂ ಮಾಡಲು ತೀರ್ಮಾನ ಕೈಗೊಂಡಿತ್ತು. ಹಾಗೂ 2017ರ ಮಾರ್ಚ್ 31ರೊಳಗಡೆ ಪ್ರಕ್ರಿಯೆ ಪೂರ್ಣಗೊಳಿಸಲು ತಿಳಿಸಲಾಗಿತ್ತಾದರೂ, ಕೆಲವೊಂದು ಅಧಿಕಾರಿಗಳ ನಿರ್ಲಕ್ಷದಿಂದಾಗಿ ಸಚಿವ ಸಂಪುಟದ ತೀರ್ಮಾನ ಜಾರಿಯಾಗಿರಲಿಲ್ಲ ಎಂದರು.

ಸಫಾಯಿ ಕರ್ಮಚಾರಿ ಸಂಘಟನೆಗಳು ತಕ್ಷಣವೇ ಹೋರಾಟ ಮಾಡಲು ನಿರ್ಧರಿಸಿ ಈ ವರ್ಷ ಜೂನ್ 25 ರಂದು ರಾಜ್ಯದಾದ್ಯಂತ ಪೊರಕೆ ಚಳುವಳಿ ನಡೆಸಲಾಗಿತ್ತು. ಆನಂತರ ಕಳೆದ ಜುಲೈ 13ರಂದು ಅನಿರ್ಧಿಷ್ಟ ಕಾಲದ ಚಳುವಳಿ ನಡೆಸಿದಾಗ ಸರ್ಕಾರವು ಕೂಡಲೇ ಕಣ್ತೆರೆದು ಸಚಿವರುಗಳಾದ ಹೆಚ್.ಆಂಜನೇಯ, ಕೆ.ಜೆ.ಜಾರ್ಜ್, ರೋಷನ್ ಬೇಗ್, ಈಶ್ವರ ಖಂಡ್ರೆಯವರು ಪೌರ ಕಾರ್ಮಿಕರ ಸಂಘಟನೆಗಳ ಮುಖಂಡರುಗಳೊಂದಿಗೆ ಚರ್ಚಿಸಿ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಗೆ ಸೂಚಿಸಿದರು. ಅದರಂತೆಯೇ ಮೊನ್ನೆ ಆ.7ರಂದು ರಾಜ್ಯ ಸರ್ಕಾರವು ಈ ಬಗ್ಗೆ ಆದೇಶ ಹೊರಡಿಸಿದೆ. ಈ ಆದೇಶದಂತೆ ಇನ್ನು ಮುಂದೆ ಗುತ್ತಿಗೆ ಪದ್ದತಿ ಇರುವುದಿಲ್ಲ. ಈ ಎಲ್ಲಾ ಪೌರ ಕಾರ್ಮಿಕರು ಮಾಸಿಕ ವೇತನ ಮತ್ತು ಇತರೆ ಸೌಲಭ್ಯಗಳನ್ನು ನೇರವಾಗಿ ಸ್ಥಳೀಯ ಸಂಸ್ಥೆಗಳೇ ಪೂರೈಸಬೇಕು. ಹಾಗೂ 10ಸಾವಿರ ಹಾಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಪೌರಕಾರ್ಮಿಕರನ್ನು ವಿಶೇಷ ನೇಮಕಾತಿ ನಿಯಮಗಳನ್ನು ರೂಪಿಸಿ ಖಾಯಂ ಮಾಡಲು ಆದೇಶಿಸಿದೆ ಎಂದು ರಾಮಚಂದ್ರಪ್ಪ ತಿಳಿಸಿದರು.

ರಾಜ್ಯ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ಐತಿಹಾಸಿಕ ಹಾಗೂ ಜನಪರ ಚಿಂತನೆಯನ್ನು ಒಳಗೊಂಡಿದೆ, ಆದುದರಿಂದ ಸಿಎಂ ಸಿದ್ದರಾಮಯ್ಯ ಸಚಿವರುಗಳಾದ ರೋಷನ್ ಬೇಗ್, ಕೆ.ಜೆ.ಜಾಜ್, ಈಶ್ವರ ಖಂಡ್ರೆ ಹಾಗೂ ಹೆಚ್.ಆಂಜನೇಯ ಹಾಗೂ ಸಫಾಯಿ ಕರ್ಮಚಾರಿಗಳ ಆಯೋಗದ ಮಾಜಿ ಅಧ್ಯಕ್ಷ ಮೈಸೂರು ನಾರಾಯಣ ಮತ್ತು ಹಾಲಿ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಅವರಿಗೆ ಮತ್ತು ಹೋರಾಟದಲ್ಲಿ ಪಾಲ್ಗೊಂಡ ಎಲ್ಲಾರಿಗೂ ಪೌರಕಾರ್ಮಿಕರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತಿರುವುದಾಗಿ ರಾಮಚಂದ್ರ ಹೇಳಿದ್ದಾರೆ.

37 ಸಾವಿರ ಕಾರ್ಮಿಕರಿದ್ದಾರೆ
ಅಂತೆಯೇ ರಾಜ್ಯ ಸರ್ಕಾರದಲ್ಲಿ 37 ಸಾವಿರ ಪೌರ ಕಾರ್ಮಿಕರಲ್ಲಿ ಮೊದಲ ಹಂತದಲ್ಲಿ 10 ಸಾವಿರ ನೌಕರರನ್ನು ಖಾಯಂ ಮಾಡುತ್ತಿದೆ. ಅದರಂತೆ ಉಳಿದವರನ್ನು ಕೂಡಾ ಖಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

ಎಲ್ಲಾ ಗುತ್ತಿಗೆ ಕಾರ್ಮಿಕರ ಸೇವೆಯನ್ನು ಖಾಯಮಾತಿ ಮಾಡಿ ಕಾನೂನಿನ ಪ್ರಕಾರ ಸಿಕ್ಕುವ ಎಲ್ಲಾ ಸೌಲತ್ತುಗಳನ್ನು ನೀಡಲು ಕೋರಿದರು.
ಈ ಸಂದರ್ಭದಲ್ಲಿ ಸಂಘಟನೆಯ ಧುರೀಣರುಗಳಾದ ರತ್ನಮ್ಮ ಹಾಗೂ ಮಾರೆಣ್ಣ, ಎ.ಕಾಳಿಪ್ರಸಾದ್, ಅಮರ್ ನಾಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment