ಗುತ್ತಿಗೆ ನೌಕರರನ್ನು ಖಾಯಂಗೊಳಿಸಿ, ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಆಗ್ರಹ

ಹುಬ್ಬಳ್ಳಿ ಅ 2 – ಸುಮಾರು ವರ್ಷಗಳಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಹುದ್ದೆಗೆ ಖಾಯಂಗೊಳಿಸಬೇಕೆಂದು ಜೈ ದಲಿತ ಅಲ್ಪಸಂಖ್ಯಾತರ  ಸೇವೆ ಸಮಿತಿ ಆಗ್ರಹಿಸಿದೆ.
ಕಿಮ್ಸ್ ಆಸ್ಪತ್ರೆಯಲ್ಲಿ ಸುಮಾರು 650 ರಿಂದ 700 ಜನ ಸ್ತ್ರೀ ಹಾಗೂ ಪುರುಷರು ಸೇರಿದಂತೆ 18 ರಿಂದ 20 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಇಲ್ಲಿಯ ಆಸ್ಪತ್ರೆಯಲ್ಲಿ ವಾರ್ಡಬಾಯ್, ಓ.ಟಿ, ಅಟೆಂಡರ್, ದೋಬಿ, ಕಂಪ್ಯೂಟರ್ ಆಪರೇಟರ್, ಓ.ಪಿ.ಡಿ. ಅಟೆಂಡರ್, ಟೆಲಿಫೋನ್ ಆಪರೇಟರ್, ಪಿವನ್ ಸ್ವೀಪರ್ ಹಾಗೂ ಇನ್ನುಳಿದ ವಿವಿಧ ಹುದ್ದೆಗಳಲ್ಲಿ ನಿರಂತರ 20 ವರ್ಷ ಸೇವೆ ಸಲ್ಲಿಸುತ್ತಿರುವ ಎಲ್ಲ ನೌಕರರನ್ನು ಸರ್ಕಾರದಿಂದ ಖಾಯಂ ನೌಕರರೆಂದು ಪರಿಗಣಿಸಬೇಕೆಂದು  ಸಮಿತಿಯ ರಾಜ್ಯಾಧ್ಯಕ್ಷ ರಮೇಶ ನೀರಗಟ್ಟಿ ನೇತೃತ್ವದಲ್ಲಿ ಆಗ್ರಹಿಸಲಾಗಿದೆ.
ಆಡಳಿತ ಮಂಡಳಿ ನಿರ್ದೇಶಕರಾಗಿರುವ ಡಾ. ದತ್ತಾತ್ರೇಯ ಭಂಟ್ ಹಾಗೂ ಮುಖ್ಯ ಆಡಳಿತಧಿಕಾರಿ ಬಸವರಾಜ ಸೋಮಣ್ಣವರ ಮುಂದಾಳತ್ವ ವಹಿಸಿ  ಗುತ್ತಿಗೆ ಆಧಾರದ ನೌಕರರ ಮೂರು ತಿಂಗಳ ವೇತನ ಪಾವತಿಯನ್ನು ಮಾಡಿದ್ದು ಸ್ವಾಗಾತಾರ್ಹ. ಅದೇ ರೀತಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಎಲ್ಲ ಗುತ್ತಿಗೆ ಆಧಾರದ ಮೇಲಿರುವ ನೌಕರರನ್ನು ಖಾಯಂಗೊಳಿಸಿ ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂದು ಆರೋಗ್ಯ ಮಂತ್ರಿಗಳು, ಶಿಕ್ಷಣ ಮಂತ್ರಿಗಳು, ಸಂಬಂಧಿಸಿದ ಅಧಿಕಾರಿಗಳಿಗೆ ಪ್ರಕಟಣೆಯ ಮೂಲಕ ವಿನಂತಿಸಿಕೊಳ್ಳಲಾಗಿದೆ.

Leave a Comment