ದಿನಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ‘ಶಿವ’
ನಾವು ದಿನನಿತ್ಯ ದೇವರಿಗೆ ಪೂಜೆಯನ್ನು ಮಾಡುತ್ತಾ ಇರುತ್ತೇವೆ. ದೇವರು ಎಂಬ ನಂಬಿಕೆಯು ಯುಗ-ಯುಗದಿಂದಲೂ ಕೂಡ ಇದೆ. ಭಾರತ ದೇಶದಲ್ಲಿರುವ ದೇವಾಲಯಕ್ಕೆ ಯಾವುದಾದರೂ ಒಂದು ಪ್ರತ್ಯೇಕತೆ ಇದ್ದೇ ಇರುತ್ತದೆ. ಒಂದೊಂದು ದೇವಾಲಯವು ತನ್ನದೇ ಆದ ವಿಭಿನ್ನತೆಗಳಿಂದ ಹಾಗು ಮಹತ್ವದಿಂದ ಪ್ರಸಿದ್ಧಿಯನ್ನು ಪಡೆದಿದೆ.ಹಾಗಾಗಿಯೇ ವಿಶ್ವದಾದ್ಯಂತ ನಮ್ಮ ಭಾರತ ದೇಶದ ದೇವಾಲಯಗಳು ಅತ್ಯಂತ ಪ್ರಖ್ಯಾತಿ ಹೊಂದಿದೆ. ದೇವರು ಇದ್ದಾನೆ ಎಂಬುದಕ್ಕೆ ಸಜೀವ ಸಾಕ್ಷಿಯೇ ನಮ್ಮ ದೇಶದ ದೇವಾಲಯಗಳು. ಅವುಗಳ ರಹಸ್ಯವನ್ನು ಛೇಧಿಸಲು ದೇಶ-ವಿದೇಶಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ.ನಮ್ಮ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಎಷ್ಟೋ ಮಹಿಮಾನ್ವಿತವಾದ ದೇವಾಲಯಗಳಿವೆ. ಅವುಗಳಲ್ಲಿ ಅಮರನಾಥ್ ದೇವಾಲಯ, ಕೇದಾರ ನಾಥ ದೇವಾಲಯ, ಬದ್ರಿನಾಥ ದೇವಾಲಯ, ತಿರುಮಲ ತಿರುಪತಿಯಂಥಹ ಎಷ್ಟೊ ಪ್ರಸಿದ್ಧವಾದ ಹಾಗು ಅತಿ ಹೆಚ್ಚು ಭಕ್ತರನ್ನು ಹೊಂದಿರುವ ದೇವಾಲಯಗಳು ಇವೆ.ಆ ಎಲ್ಲಾ ದೇವಾಲಯಗಳನ್ನು ದರ್ಶನ ಮಾಡಲು ಭಕ್ತರು ದೇಶ-ವಿದೇಶದಿಂದ ಎಷ್ಟೋ ಕಷ್ಟ ಪಟ್ಟು ಭೇಟಿ ನೀಡುತ್ತಿರುತ್ತಾರೆ. ಈ ಎಲ್ಲಾ ದೇವಾಲಯಗಳ ಬಗ್ಗೆ ನಿಮಗೆ ತಿಳಿದೇ ಇರುತ್ತದೆ. ಆದರೆ ದಿನಕ್ಕೆ ಒಮ್ಮೆ ಮಾತ್ರ ಭಕ್ತರಿಗೆ ದರ್ಶನವನ್ನು ನೀಡುವ ದೇವಾಲಯದ ಬಗ್ಗೆ ನಿಮಗೆ ಗೊತ್ತ? ಪ್ರತಿದಿನ ೨ ಬಾರಿ ಸಮುದ್ರದಲ್ಲಿ ಪೂರ್ತಿಯಾಗಿ ಮುಳುಗಿ ಜಲಾಭಿಷೇಕ ಮಾಡಿಕೊಳ್ಳುತ್ತದೆ ಈ ದೇವಾಲಯ.

ನೀವು ಒಂದು ವೇಳೆ ಈ ದೇವಾಲಯದ ಬಗ್ಗೆ ತಿಳಿಯದೇ ಹೋದರೆ ಲೇಖನದ ಮೂಲಕ ಆ ದೇವಾಲಯದ ವಿಶೇಷತೆಯ ಬಗ್ಗೆ ತಿಳಿಯಿರಿ. ದಿನಕ್ಕೆ ಒಮ್ಮೆ ಮಾತ್ರ ದರ್ಶನವನ್ನು ನೀಡುವ ದೇವಾಲಯದ ಬಗ್ಗೆ ನಿಮಗೆ ನಂಬಿಕೆ ಇಲ್ಲದೇ ಇರಬಹುದು. ಆದರೆ ಇದು ಸತ್ಯ. ನೀವು ಕೂಡ ಒಮ್ಮೆ ಗುಜರಾತ್ ರಾಜ್ಯಕ್ಕೆ ಭೇಟಿ ನೀಡಿ ಬನ್ನಿ.ಈ ದೇವಾಲಯವು ಸಮುದ್ರದ ಅಲೆಗಳಲ್ಲಿ ಮಾಯವಾಗುತ್ತದೆ. ತದನಂತರ ಕೆಲವು ಸಮಯದ ನಂತರ ಮತ್ತೆ ಹೊರಗೆ ಬರುತ್ತದೆ. ಮುಖ್ಯವಾಗಿ ಈ ದೇವಾಲಯದಲ್ಲಿ ಮಹಾಶಿವನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ. ಆ ಸ್ವಾಮಿಯನ್ನು ಸ್ತಂಭೇಶ್ವರ ಮಹಾದೇವ್ ಎಂದು ಕರೆಯುತ್ತಾರೆ.ಈ ವಿಚಿತ್ರವಾದ ದೇವಾಲಯವಿರುವುದು ಗುಜರಾತ್ ರಾಜ್ಯದಲ್ಲಿನ ಬರೋದ್ ಜಿಲ್ಲೆಯಲ್ಲಿನ ಕವಿ ಕಂಬೂಯಿ ಎಂಬ ಪ್ರದೇಶದಲ್ಲಿದೆ. ಈ ಅದ್ಭುತವಾದ ದೇವಾಲಯವು ೧೫೦ ವರ್ಷಗಳಿಗಿಂತ ಹಳೆಯದಾದುದು ಎಂದು ನಂಬಲಾಗಿದೆ. ಇದು ಅರಬ್ಬಿ ಸಮುದ್ರ ಮತ್ತು ಬೇ ಆಫ್ ಕ್ಯಾಂಬ್ಯಾ ನಡುವೆ ನೆಲೆಗೊಂಡಿದೆ. ಇದು ತನ್ನ ಅಸಾಧಾರಣವಾದ ವಾಸ್ತುಶಿಲ್ಪವಿಲ್ಲದ ಹಾಗು ಸರಳವಾದ ದೇವಾಲಯವೇ ಆಗಿದೆ.ದೇವಾಲಯವು ದಿನಕ್ಕೆ ೨ ಬಾರಿ ಸಂಪೂರ್ಣವಾಗಿ ಮುಳುಗಿ ಹೋಗುತ್ತದೆ. ಇಲ್ಲಿ ೪ ಅಡಿ ಎತ್ತರದ ಶಿವಲಿಂಗವಿದೆ. ಇತನನ್ನೇ ಸ್ತಂಭೇಶ್ವರ ಎಂದು ಕರೆಯುತ್ತೇವೆ. ಇಡೀ ದಿನ ಕಣ್ಮರೆಯಾಗುವ ಈ ದೇವಾಲಯಕ್ಕೆ ಅನೇಕ ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಈ ದೇವಾಲಯಕ್ಕೆ ತೆರಳಲು ಸೂಕ್ತವಾದ ಸಮಯವೆಂದರೆ ಅದು ಬೆಳಗಿನ ಸಮಯದಲ್ಲಿ ಮಾತ್ರ.ಈ ಅದ್ಭುತವಾದ ದೇವಾಲಯದ ಸುತ್ತಲೂ ಶಾಂತಿಯುತವಾಗಿ ಧ್ಯಾನವನ್ನು ಮಾಡಬಹುದು. ದೇವಾಲಯದ ಒಳಭಾಗದಲ್ಲಿ ಸುತ್ತಾಡಿಕೊಂಡು ಬರಬಹುದು. ಪ್ರಕೃತಿ ಮತ್ತು ಸಮುದ್ರದ ಶಬ್ಧದ ಅಹ್ಲಾದಕರವಾದ ಅನುಭವವನ್ನು ಯಾತ್ರಿಕರು, ಪ್ರವಾಸಿಗರು, ಪ್ರಕೃತಿ ಪ್ರೇಮಿಗಳು ಸವಿಯಬಹುದು. ದೇವಾಲಯದ ಸಮೀಪದಲ್ಲಿ ಆಶ್ರಮವಿದೆ. ಆ ಶ್ರಮದಲ್ಲಿ ಭಕ್ತರಿಗೆ ಮುಕ್ತ ಊಟದ ವ್ಯವಸ್ಥೆ ಕೂಡ ಇದೆ.ಇಲ್ಲಿ ದೇವಾಲಯವು ಹೇಗೆ ಮುಳುಗುತ್ತದೆ ಎಂಬುದನ್ನು ಕಣ್ಣಾರೆ ಕಾಣಬಹುದು. ಪ್ರಕೃತಿ ತಾಯಿಯು ಪವಿತ್ರವಾದ ಶಿವನ ಲಿಂಗವನ್ನು ಪ್ರತಿ ದಿನವು “ಜಲ ಅಭಿಷೇಕ”ವನ್ನು ಮಾಡುತ್ತದೆ. ಈ ಸ್ಥಳದ ಮತ್ತೊಂದು ವಿಶಿಷ್ಟವಾದ ಲಕ್ಷಣವೆನೆಂದರೆ ಅದು ಮಹಾ ಸಾಗರ ಮತ್ತು ಸಬರಮತಿ ನದಿಯ ಒಕ್ಕೂಟ. ಈ ಸ್ಥಳದ ಸೌಂದರ್ಯವು ಅದರ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆಯಾದ್ದರಿಂದಲೇ ಈ ಸ್ಥಳಕ್ಕೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.ಸಮುದ್ರದಲ್ಲಿ ಮುಳುಗಿರುವ ಶಿವಲಿಂಗದ ದರ್ಶನಕ್ಕೆ ಯಾವ ಭಕ್ತರಿಗೂ ಅನುಮತಿಯನ್ನು ನೀಡುವುದಿಲ್ಲ. ಈ ದೇವಾಲಯಕ್ಕೆ ತೆರಳಲು ಪ್ರತ್ಯೇಕವಾದ ರಶೀದಿಯನ್ನು ಭಕ್ತರಿಗೆ ನೀಡುತ್ತಾರೆ. ಅದರಲ್ಲಿ ಸಮುದ್ರದ ಅಲೆಗಳು ಬರುವ ಸಮಯವನ್ನು ತಿಳಿಸಿರುತ್ತಾರೆ. ಏಕೆಂದರೆ ಆ ಸಮಯದಲ್ಲಿ ದೇವಾಲಯಕ್ಕೆ ಯಾರೂ ಕೂಡ ಹೋಗಬಾರದು ಎಂದೂ, ಹಾಗು ಯಾವುದೇ ಅವಘಡವಾಗದೇ ಇರಲು ಸಮಯವನ್ನು ನೀಡುತ್ತಾರೆ.
ಈ ದೇವಾಲಯದ ವಿಶಿಷ್ಟತೆಯ ಬಗ್ಗೆ ಶಿವಪುರಾಣದಲ್ಲಿಯೂ ಕೂಡ ಉಲ್ಲೇಖವಿದೆ. ಇದರಿಂದ ಈ ಮಂದಿರ ಅತ್ಯಂತ ಪುರಾತನ ಚರಿತ್ರೆಯನ್ನು ಹೊಂದಿದೆ ಎಂದು ತಿಳಿಯಬಹುದು. ಸ್ಕಂದ ಪುರಾಣದಲ್ಲಿಯೂ ಕೂಡ ಈ ದೇವಾಲಯದ ಬಗ್ಗೆ ಅನೇಕ ಉಲ್ಲೇಖಗಳನ್ನು ವರ್ಣಿಸಿದ್ದಾರೆ.

ಪೌರಾಣಿಕ ಕಥನಗಳ ಆಧಾರವಾಗಿ ತಾರಕಾಸುರ ಎಂಬ ರಾಕ್ಷಸನು ತನ್ನ ಕಠಿಣವಾದ ತಪಸ್ಸಿನಿಂದಾಗಿ ಶಿವನನ್ನು ಪ್ರಸನ್ನಗೊಳಿಸಿದನು. ಹಾಗೆ ಪ್ರಸನ್ನನಾದ ಶಿವನನ್ನು ತಾರಕಾಸುರನು ಒಂದು ವರವನ್ನು ಕೇಳಿಕೊಂಡನು. ಅದೆನೆಂದರೆ ತನಗೆ ಎಂದೂ ಮರಣ ಸಂಭವಿಸಬಾರದು, ಬದಲಿಗೆ ಅಮರನಾಗಿರಬೇಕು ಎಂದು ಕೇಳಿಕೊಂಡನು.ಇದಕ್ಕೆ ಶಿವನು “ನೀನು ಕೇಳಿಕೊಳ್ಳುತ್ತಿರುವ ವರವು ಸೃಷ್ಟಿಗೆ ವಿರುದ್ಧವಾದುದು” ಎಂದು ಹೇಳಿದನು. ಇದಕ್ಕೆ ತಾರಕಾಸುರ ಮತ್ತೊಂದು ವರವನ್ನು ಕೂಡ ಕೇಳಿದನು. ಅದೆನೆಂದರೆ ತನ್ನನ್ನು ಸಂಹಾರ ಮಾಡುವುದಾದರೇ ಕೇವಲ ಶಿವ ಪುತ್ರ ಮಾತ್ರ ಸಂಹಾರ ಮಾಡಬೇಕು ಎಂದೂ ಹಾಗೆಯೇ ಕೇವಲ ೬ ವರ್ಷದ ಬಾಲಕ ಮಾತ್ರ ಸಂಹಾರ ಮಾಡಬೇಕು ಎಂದು ಕೇಳಿಕೊಂಡನು.ಇದಕ್ಕೆ ಒಪ್ಪಿದ ಮಹಾಶಿವನು ತಾರಕಾಸುರನಿಗೆ ವರವನ್ನು ನೀಡಿದ. ವರವನ್ನು ಪಡೆದ ತಾರಕಾಸುನು ೩ ಲೋಕವನ್ನು ಅಲ್ಲಾಡಿಸಲು ಪ್ರಾರಂಭ ಮಾಡಿದ. ಇದರಿಂದಾಗಿ ಸಮಸ್ತ ದೇವತೆಗಳು, ಋಷಿಮುನಿಗಳು ಆತನ ವಿಪರೀತ ಹಿಂಸೆಯನ್ನು ತಡೆಯಲಾರದೇ ಶಿವ ಭಗವಾನನ ಶರಣನ್ನು ಬೇಡಿದರು.ಹಾಗೆ ಕಾರ್ತಿಕಾಸುರ ಜನನ ನಡೆದು ತಾರಕಾಸುರನನ್ನು ಕಾರ್ತಿಕೇಯನು ಸಂಹಾರ ಮಾಡಿದನು. ಆ ನಂತರ ಕಾರ್ತಿಕೇಯನಿಗೆ ತಾರಕಾಸುರನು ತನ್ನ ತಂದೆಯಾದ ಶಿವ ಭಗವಾನನ ಪರಮಭಕ್ತ ಎಂದು ತಿಳಿದ ನಂತರ ಆತನು ಪಾಪವನ್ನು ಮಾಡಿದ್ದೇನೆ ಎಂದು ಭಾವಿಸಿದನು. ಹೀಗಾಗಿ ಕಾರ್ತಿಕೇಯನಿಗೆ ಶ್ರೀ ಮಹಾವಿಷ್ಣುವು ಒಂದು ಉಪಾಯವನ್ನು ಸೂಚಿಸಿದನು.ಒಂದು ಪ್ರದೇಶದಲ್ಲಿ ಶಿವಲಿಂಗವನ್ನು ಸ್ಥಾಪಿಸಿ, ಪ್ರತಿದಿನ ನಿನ್ನ ತಂದೆಯನ್ನು ಕ್ಷಮಿಸು ಎಂದು ಪ್ರಾರ್ಥಿಸು ಎಂದು ಹೇಳುತ್ತಾನೆ. ಈ ವಿಧವಾಗಿ ಈ ಶಿವಲಿಂಗವು ಸ್ಥಾಪಿಸಲ್ಪಟ್ಟಿದೆ. ಅಂದಿನಿಂದ ಈ ತೀರ್ಥಸ್ಥಳವನ್ನು ಸ್ತಂಬೇಶ್ವರ ಎಂದು ಕರೆಯುತ್ತಾರೆ. ಈ ದೇವಾಲಯವನ್ನು ನೋಡಬೇಕಾದರೆ ಒಂದು ದಿನ ಅಲ್ಲಿಯೇ ಇರಬೇಕಾಗುತ್ತದೆ. ಏಕೆಂದರೆ ಶಿವಲಿಂಗವು ಸಮುದ್ರದಲ್ಲಿ ಮುಳುಗುವ ಹಾಗೆಯೇ ಮತ್ತೇ ದರ್ಶನವನ್ನು ನೀಡುವ ಸೌಭಾಗ್ಯ ಯಾರಿಗೂ ಲಭ್ಯವಾಗುವವುದಿಲ್ಲ.ತೆರಳುವ ಬಗೆ ಹೇಗೆ? ಈ ಮಹಿಮಾನ್ವಿತವಾದ ದೇವಾಲಯಕ್ಕೆ ತೆರಳಲು ಸಮೀಪದ ನಿಲ್ದಾಣವೆಂದರೆ ಅದು ಗುಜರಾತಿನ ವಡೋದರ. ಇಲ್ಲಿಂದ ಸುಮಾರು ೭೫ ಕಿ.ಮೀ ದೂರದಲ್ಲಿ ಈ ದೇವಾಲಯವಿದೆ. ಇಲ್ಲಿಂದ ಟ್ಯಾಕ್ಸಿಯ ಮುಖಾಂತರ ಸುಲಭವಾಗಿ ದೇವಾಲಯಕ್ಕೆ ತೆರಳಬಹುದಾಗಿದೆ.
ರೈಲ್ವೆ ಮಾರ್ಗದ ಮುಖಾಂತರ : ಈ ಅದ್ಭುತವಾದ ದೇವಾಲಯಕ್ಕೆ ತೆರಳು ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ವಾಡೋದರ ರೈಲ್ವೆ ನಿಲ್ದಾಣವಾಗಿದೆ. ಇಲ್ಲಿಂದ ಕ್ಯಾಬ್ ಅಥವಾ ಖಾಸಗಿ ಬಸ್ಸುಗಳ ಮೂಲಕ ಸುಲಬವಾಗಿ ದೇವಾಲಯಕ್ಕೆ ತಲುಪಬಹುದಾಗಿದೆ.

Share