ಗುಜರಾತ್ ಬಹಿರಂಗ ಪ್ರಚಾರಕ್ಕೆ ತೆರೆ ಕುತೂಹಲ ಕೆರಳಿಸಿರುವ ಬಿಜೆಪಿ – ಕಾಂಗ್ರೆಸ್ ಜಿದ್ದಾಜಿದ್ದಿನ ಹೋರಾಟ

ನವದೆಹಲಿ, ಡಿ. ೭- ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಗುಜರಾತ್ ವಿಧಾನಸಭೆಗೆ ಈ ತಿಂಗಳ 9 ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆಬೀಳಲಿದೆ.

ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿ ಹೋರಾಟದ ಅಖಾಡವಾಗಿರುವ ಗುಜರಾತ್ ವಿಧಾನಸಭಾ ಚುನಾವಣೆ ರಾಷ್ಟ್ರ ರಾಜಕಾರಣಕ್ಕೆ ಹೊಸ ದಿಕ್ಸೂಚಿಯನ್ನು ಪ್ರಧಾನಿ ಹಾಗೂ ಅಮಿತ್ ಶಾ ಅವರು ತವರು ರಾಜ್ಯವಾದ ಗುಜರಾತ್‌ನಲ್ಲಿ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಬೇಕೆಂಬ ಹಠಕ್ಕೆ ಬಿದ್ದಿರುವುದು ಜಗಜ್ಜಾಹೀರಾಗಿದೆ.

ಮತ್ತೊಂದೆಡೆ ಕಳೆದ 22 ವರ್ಷಗಳಿಂದ ಗುಜರಾತ್‌ನಲ್ಲಿ ರಾಜಕೀಯವಾಗಿ ತಲೆಎತ್ತಲಾಗದೆ ಮಣ್ಣುಮುಕ್ಕಿರುವ ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ಪವಾಡ ಸದೃಶ ಫಲಿತಾಂಶವನ್ನು ನಿರೀಕ್ಷೆಯಲ್ಲಿಟ್ಟುಕೊಂಡು ಜಿದ್ದಾಜಿದ್ದಿ ಹೋರಾಟಕ್ಕೆ ಇಳಿದಿದೆ. ಅಲ್ಲದೆ, ಯುವ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಪಕ್ಷದ ನಾಯಕರು ಮೈಚಳಿ ಬಿಟ್ಟು ಚುನಾವಣಾ ಅಖಾಡಕ್ಕೆ ಇಳಿದಿದ್ದು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ.

ಕೇಂದ್ರದಲ್ಲಿನ ಎನ್.ಡಿ.ಎ. ಸರ್ಕಾರ ಜಾರಿಗೊಳಿಸಿದ ನೋಟು ಅಮಾನ್ಯೀಕರಣ, ಜಿಎಸ್‌ಟಿ ಹಾಗೂ ಮತ್ತಿತರ ಯೋಜನೆಗಳಿಗೆ ಜನ ಸಾಮಾನ್ಯರಿಗೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ರಾಹುಲ್ ಗಾಂಧಿ ತಮ್ಮ ಪ್ರಚಾರ ಸಭೆಗಳಲ್ಲಿ ಟೀಕೆ ಮಾಡಿದ್ದರು. ಮತ್ತೊಂದೆಡೆ ನರೇಂದ್ರ ಮೋದಿ ಹಾಗೂ ಅಮಿತ್ ಷಾ, ಕಾಂಗ್ರೆಸ್ ಪಕ್ಷ ಅಭಿವೃದ್ಧಿ ವಿರೋಧಿಯಾಗಿದೆ. ರಾಜ್ಯವನ್ನು ಹಲವಾರು ವರ್ಷಗಳಿಂದ ಆಳಿದ ಕಾಂಗ್ರೆಸ್ ನಾಯಕರು ರಾಜ್ಯದ ಅಭಿವೃದ್ಧಿಗೆ ಯಾವುದೇ ಪರಿಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿಲ್ಲ. ಜತೆಗೆ ರಾಜ್ಯದ ಹಲವಾರು ಘಟಾನುಘಟಿ ನಾಯಕರುಗಳನ್ನು ಕಡೆಗಣಿಸಿದೆ ಎಂದು ಟೀಕಿಸಿದ್ದರು.
ಪ್ರಧಾನ ಮಂತ್ರಿ ಎಂಬುದನ್ನು ಬದಿಗೊತ್ತಿ ಪಕ್ಷದ ಗೆಲುವಿಗಾಗಿ ನರೇಂದ್ರ ಮೋದಿ ತವರು ರಾಜ್ಯದಲ್ಲಿ ಹಲವಾರು ಬಾರಿ ಬಹಿರಂಗ ಱ್ಯಾಲಿಗಳಲ್ಲಿ ಪಾಲ್ಗೊಂಡು ಅಭ್ಯರ್ಥಿಗಳ ಪರ ಮತ ಯಾಚನೆ ಮಾಡಿದ್ದಾರೆ.

ಅವರಿಗೆ ಸಾಥ್ ನೀಡಿರುವ ಇದೇ ರಾಜ್ಯದವರೂ ಆಗಿರುವ ಅಮಿತ್ ಷಾ ಚುನಾವಣಾ ಗೆಲುವಿಗೆ ಚಾಣಾಕ್ಯ ತಂತ್ರಗಳನ್ನು ರೂಪಿಸಿದ್ದಾರೆ. ಈ ಬಾರಿಯ ಚುನಾವಣೆಯ ಮಹತ್ವದ ಬೆಳವಣಿಗೆ ಎಂದರೆ, ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಪಟೇಲ್ ಸಮುದಾಯಕ್ಕೆ ಬೆಂಬಲವಾಗಿ ನಿಂತಿರುವ ಕಾಂಗ್ರೆಸ್ ಪಟೇಲ್ ಸಮುದಾಯದ ಯುವ ನಾಯಕ ಹಾರ್ದಿಕ್ ಪಟೇಲ್ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದು ಬಿಜೆಪಿ ವಲಯದಲ್ಲಿ ಸ್ವಲ್ಪ ಮಟ್ಟಿಗೆ ನಡುಕ ಹುಟ್ಟಿಸಿದೆ.

ಇದುವರೆಗೂ ನಡೆದಿರುವ ಸಮೀಕ್ಷೆಗಳ ಪ್ರಕಾರ ಬಿಜೆಪಿ ಗೆಲುವಿಗೆ ಕಾಂಗ್ರೆಸ್ ಮತ್ತು ಹಾರ್ದಿಕ್ ಪಟೇಲ್ ಹೊಂದಾಣಿಕೆ ಅಡ್ಡಿಯಾಗಬಹುದೇ ಎಂಬ ನಿಲುವಿನ ಮೇಲೆ ಅಭಿಪ್ರಾಯಗಳು ವ್ಯಕ್ತವಾಗಿವೆ. ಆದರೂ ಬಿಜೆಪಿ ಗೆಲುವಿನ ಓಟಕ್ಕೆ ಅಡ್ಡಿಯಿಲ್ಲ ಎಂಬ ಹೊಸ ಸಮೀಕ್ಷೆಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ.
9ಕ್ಕೆ ಮತದಾನ
ಗುಜರಾತ್ ವಿಧಾನಸಭೆಯ ಒಟ್ಟು 182 ಸ್ಥಾನಗಳ ಪೈಕಿ ಮೊದಲ ಹಂತದ ಚುನಾವಣೆಯಲ್ಲಿ 19 ಜಿಲ್ಲೆಗಳ 89 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ವಿದ್ಯುಕ್ತ ತೆರೆ ಬೀಳಲಿದೆ. ಅದಾದ ಬಳಿಕ ಮನೆಮನೆಗೆ ತೆರಳಿ ಪ್ರಚಾರ ಮಾಡಲಿಕ್ಕೆ ಅವಕಾಶವಿರುತ್ತದೆ.
ಎರಡನೇ ಹಂತದ ಚುನಾವಣೆ ಡಿ. 14 ರಂದು ನಡೆಯಲಿದೆ. ಈ ಹಂತದಲ್ಲಿ 93 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಡಿ. 18 ರಂದು ಮತ ಎಣಿಕೆ ನಡೆಯಲಿದೆ.

ವಿದ್ಯುನ್ಮಾನ ಮತ ಯಂತ್ರಗಳನ್ನು ತಿರುಚಲಾಗುತ್ತಿದೆ ಎಂಬ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಟೀಕೆಗಳ ನಡುವೆಯೂ ಚುನಾವಣಾ ಆಯೋಗ ಗುಜರಾತ್ ಚುನಾವಣಾ ಆಯೋಗಕ್ಕೆ ವಿದ್ಯುನ್ಮಾನ ಮತ ಯಂತ್ರಗಳನ್ನೇ ಬಳಕೆ ಮಾಡುತ್ತಿದೆ.

 

Leave a Comment