ಗುಂಡಿಟ್ಟು ಅಭಿಷೇಕ್ ಹತ್ಯೆ: ಆರೋಪಿ ಸೆರೆ

ಅಮೆರಿಕಾ, ಡಿ.೨- ಶಿರ್ವ ಮೂಲದ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿರುವ ಅಭಿಷೇಕ್‌ನನ್ನು ಗುಂಡಿಟ್ಟು ಹತ್ಯೆ ಮಾಡಿದ ದುಷ್ಕರ್ಮಿಯನ್ನು ಕ್ಯಾಲಿಪೋರ್ನಿಯಾದ ಸ್ಯಾನ್ ಬೆರ್ನಾರ್ಡಿನೊ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಎರಿಕ್ ಡೇವನ್ ಟರ್ನರ್(೪೨) ಆಫ್ರಿಕಾ ಮೂಲದವನಾಗಿದ್ದು ಯಾವ ಕಾರಣಕ್ಕೆ ಹತ್ಯೆ ಮಾಡಿದ್ದಾನೆ ಎಂಬುವುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲು ಆರೋಪಿಯೇ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಸ್ಥಳೀಯ ಮೂಲಗಳು ವರದಿ ಮಾಡಿದ್ದವು. ಅಭಿಷೇಕ್ ಸಂಬಂಧಿ ರಾಮನಾಥ್ ಅವರು ಬಂಧನದ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ಅಭಿಷೇಕ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ಕನಸು ಕಂಡಿದ್ದು ಬ್ಯಾಂಕಿನಲ್ಲಿ ಸಾಲವನ್ನು ಮಾಡಿದ್ದರು. ಆದರೆ ಶಿಕ್ಷಣ ಪೂರ್ಣವಾಗುವ ಮೊದಲೇ ಬಲಿಯಾಗಿದ್ದಾರೆ. ಈ ಘಟನೆಯಿಂದ ಮಾನಸಿಕ ಆಘತಕ್ಕೊಳಗಾದ ಅಭಿಷೇಕ್ ಅವರ ಕುಟುಂಬಕ್ಕೆ ಆರ್ಥಿಕ ಸಂಕಷ್ಟವೂ ಎದುರಾಗಿದೆ. ಈ ನಿಟ್ಟಿನಲ್ಲಿ ಕುಟುಂಬಕ್ಕೆ ನೆರವು ನೀಡಲು ಅಭಿಷೇಕ್ ಸಂಬಂಧಿಕರಾದ ಶ್ರೀವತ್ಸ ಭಟ್ ಮತ್ತು ವರುಣ್ ಕೃಷ್ಣರವರು ಕ್ರೌಡ್ ಫಂಡಿಂಗ್ ಆರಂಭಿಸಿದ್ದಾರೆ. ಸುಮಾರು ೭೦ ಸಾವಿರ ಡಾಲರ್ ಸಂಗ್ರಹ ಮಾಡಲು ಯೋಚಿಸಿದ್ದಾರೆ. ಇನ್ನು ಅಮೆರಿಕಾಕ್ಕೆ ತೆರಳಲು ಅಭಿಷೇಕ್ ತಂದೆ ತಾಯಿಗೆ ಯಾವುದೇ ತೊಂದರೆ ಎದುರಾಗಿಲ್ಲ. ಆದರೆ ಅಭಿಷೇಕ್ ಸಹೋದರ ಅಭಿಶ್ರೇಷ್ಠ ಅವರಿಗೆ ವೀಸಾ ಇಲ್ಲದೇ ಸಮಸ್ಯೆ ಉಂಟಾಗಿದೆ. ಈ ಕುರಿತು ವಿದೇಶಾಂಗ ಸಚಿವರಿಗೆ ಪತ್ರ ಬರೆದಿದ್ದು ತುರ್ತಾಗಿ ವೀಸಾ ಸಿಗಲಿದೆ ಎಂದು ಅಭಿಶ್ರೇಷ್ಠ ಹೇಳಿದ್ದಾರೆ.

Leave a Comment