ಗಿರೀಶ್ ಕಾರ್ನಾಡ್ ಯುಗಾಂತ್ಯ

ಬೆಂಗಳೂರು, ಜೂ 10 – ಸೋಮವಾರ ವಿಧಿವಶರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ನಟ,ಸಾಹಿತಿ, ನಿರ್ದೇಶಕ ಗಿರೀಶ್ ಕಾರ್ನಾಡ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ.

ಅವರ ಆಶಯ, ನಿಲುವುಗಳಿಗೆ ಧಕ್ಕೆತರಲು ಕುಟುಂಬ ಸದಸ್ಯರು ಬಯಸದ ಕಾರ, ಯಾವುದೇ ಸಾಂಪ್ರದಾಯಿಕ ವಿಧಿ ವಿಧಾನ, ಸರ್ಕಾರಿ ಗೌರವವಿಲ್ಲದೆ ಬೈಯಪ್ಪನಹಳ್ಳಿಯ ಕಲ್ಲಹಳ್ಳಿ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಗಿರೀಶ್‌ ಕಾರ್ನಾಡ್‌(81) ಉಸಿರಾಟದ ತೊಂದರೆ, ಬಹು ಅಂಗಾಂಗ ವೈಫಲ್ಯದಿಂದ ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.
ಸ್ವಗೃಹದಲ್ಲಿ ನಿಧನ ಹೊಂದಿದ ಗಿರೀಶ್ ಕಾರ್ನಾಡರ ಸಾರ್ವಜನಿಕ ಹಾಗೂ ಗಣ್ಯರ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸದೆ, ಬೈಯಪ್ಪನಹಳ್ಳಿ ವಿದ್ಯುತ್ ಚಿತಾಗಾರದ ಬಳಿಯೇ ಅವಕಾಶ ನೀಡಲಾಗಿತ್ತು. ಪಾರ್ಥಿವ ಶರೀರಕ್ಕೆ ಹಾಕಲು ಹಾರ,ತುರಾಯಿಗಳನ್ನು ತೆಗೆದುಕೊಂಡು ಬರದಂತೆ ಕುಟುಂಬದವರು ಮನವಿ ಮಾಡಿಕೊಂಡಿದ್ದರು. ಆದರೆ ಚಿತಾಗಾರಕ್ಕೆ ಸಚಿವ ಡಿ ಕೆ ಶಿವಕುಮಾರ್ ಮಾತ್ರ ಭೇಟಿ ನೀಡಿ ಪಾರ್ಥಿವ ಶರೀರದ ದರ್ಶನ ಪಡೆದರು.
ಗಿರೀಶ್ ಕಾರ್ನಾಡ್‌ರು 1938 ಮೇ 19 ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದ್ದರು. ತಂದೆ ಡಾ.ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾ ಬಾಯಿ. ಪ್ರಗತಿಶೀಲ ಮನೋಭಾವದ ಡಾ.ರಘುನಾಥ್‌ ಕಾರ್ನಾಡರು ಮದುವೆಯಾದ ಹೊಸತರಲ್ಲೇ ಪತ್ನಿಯನ್ನು ಕಳೆದು ಕೊ೦ಡರು.
ಬಾಲ್ಯದಲ್ಲೇ ಮದುವೆಯಾಗಿ ಪತಿಯನ್ನು ಕಳೆದುಕೊಂಡಿದ್ದ 5 ವರ್ಷದ ಮಗ ವಸಂತನ ತಾಯಿ ಕೃಷ್ಣಾಬಾಯಿಯನ್ನು, ಸಮಾಜದ ವಿರೋಧದ ನಡುವೆಯೂ ದಿಟ್ಟತನದಿಂದ ಕೈ ಹಿಡಿದರು. ಸಮಾಜ ಏನೆನ್ನುತ್ತದೆ ಅನ್ನುವುದಕ್ಕಿಂತ ಆದರ್ಶ ಹಾಗೂ ಪ್ರಗತಿಪರತೆ ರಘುನಾಥ್ ಕಾರ್ನಾಡರಲ್ಲಿ ಕಂಡು ಬರುತ್ತದೆ. ಮುಂದೆ ಕಾರ್ನಾಡರಿಗೆ ತಂದೆಯ ಪ್ರಗತಿಪರ ವಾತಾವರಣವೇ ಅವರ ಬೆಳವಣಿಗೆಯಲ್ಲಿ ಸಹಾಯಕವಾಯಿತು.
ಗಿರೀಶ್ ಕಾರ್ನಾಡರ ಪ್ರಾಥಮಿಕ ಶಿಕ್ಷಣ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ಪ್ರೌಢಶಿಕ್ಷಣ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಹಾಗೂ ಪದವಿ ಶಿಕ್ಷಣ ಕರ್ನಾಟಕ ಕಾಲೇಜಿನಲ್ಲಿ ಆಯಿತು. ಆ ಬಳಿಕ ರ್ಹೊಡ್ಸ್ ಸ್ಕಾಲರ್‌ಶಿಪ್‌ ಪಡೆದುಕೊಂಡು ಆಕ್ಸ್‌ಫರ್ಡ್‌ನಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ತೆರಳಿದರು. ಗಿರೀಶ ಕಾರ್ನಾಡರು ಆಕ್ಸ್‌ಫರ್ಡ್‌ ಡಿಬೇಟ್‌ ಕ್ಲಬ್ ಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷಿಯನ್ ಆಗಿದ್ದಾರೆ.
ತಮ್ಮ 42ನೇ ವಯಸ್ಸಿನಲ್ಲಿ ಕೊಡಗಿನ ವೀರಯೋಧ ಕೋದಂಡೇರ ಗಣಪತಿಯವರ ಪುತ್ರಿ, ಡಾ.ಸರಸ್ವತಿ ಗಣಪತಿಯವರನ್ನು ವಿವಾಹವಾದ ಕಾರ್ನಾಡರಿಗೆ ಶಾಲ್ಮಲಿ ರಾಧಾ ಮತ್ತು ರಘು ಅಮಯ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ.

Leave a Comment